'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?
ನಾಗೇಂದ್ರ ಪ್ರಸಾದ್ ನಿರ್ದೇಶನದ 'ಲಕ್ಕಿಮ್ಯಾನ್' ಸಿನಿಮಾ ಬಿಡುಗಡೆಗೆ ಇನ್ನೆರಡೇ ದಿನ ಬಾಕಿ ಇರೋದು. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್‌ಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇನ್ನು ಶುಕ್ರವಾರ ಥಿಯೇಟರ್‌ಗಳ ಅಂಗಳದಲ್ಲಿ ಭರ್ಜರಿ ಸೆಲೆಬ್ರೇಷನ್ ಪ್ಲ್ಯಾನ್ ನಡೀತಿದೆ.
ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಕಮರ್ಷಿಯಲ್ ಸಿನಿಮಾ ಅನ್ನುವ ಕಾರಣಕ್ಕೆ 'ಲಕ್ಕಿಮ್ಯಾನ್' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಅಪ್ಪು ಕೊನೆಯ ಚಿತ್ರವನ್ನು ದೊಡ್ಡಮಟ್ಟದಲ್ಲಿ ಸೆಲೆಬ್ರೇಟ್ ಮಾಡು ಫ್ಯಾನ್ಸ್ ಮುಂದಾಗಿದ್ದಾರೆ. ಈಗಾಗಲೇ ಕಟೌಟ್‌ಗಳು ಸಿದ್ಧವಾಗಿದೆ. ಟಿಕೆಟ್ ಬುಕ್ ಆಗಿದೆ. ಶುಕ್ರವಾರ ಬೆಳ್ಳಬೆಳಗ್ಗೆ ಥಿಯೇಟರ್ ಅಂಗಳಕ್ಕೆ ಬಂದು 'ಲಕ್ಕಿಮ್ಯಾನ್'ನ ಸಡಗರ ಸಂಭ್ರಮದಿಂದ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಇನ್ನು ಗುರುವಾರ ಸಂಜೆಯೇ ಹಲವೆಡೆ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗುತ್ತಿದೆ.
ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ 'ಲಕ್ಕಿಮ್ಯಾನ್' ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ದೇವರಾಗಿ ಬಹಳ ವಿಶೇಷವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಭುದೇವಾ ಜೊತೆ ಸೇರಿ ಒಂದು ಬೊಂಬಾಟ್ ಡ್ಯಾನ್ಸಿಂಗ್ ನಂಬರ್‌ಗೂ ಹೆಜ್ಜೆ ಹಾಕಿದ್ದಾರೆ. ರಾಜ್ಯಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್‌ಗೆ ಚಿತ್ರತಂಡ ಮುಂದಾಗಿದೆ.

ನಗರದ 3 ಥಿಯೇಟರ್‌ಗಳಲ್ಲಿ ಭರ್ಜರಿ ಸೆಲೆಬ್ರೇಷನ್
ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ಸಿನಿಮಾ 'ಲಕ್ಕಿಮ್ಯಾನ್'. ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದರಲ್ಲೂ ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ವೀರೇಶ್, ರಾರಾಜಿನಗರದ ನವರಂಗ್ ಥಿಯೇಟರ್‌ಗಳಲ್ಲಿ ಭರ್ಜರಿ ಸೆಲೆಬ್ರೇಷನ್‌ಗೆ ಅಪ್ಪು ಫ್ಯಾನ್ಸ್ ಸನ್ನದ್ಧರಾಗಿದ್ದಾರೆ. ಕಟೌಟ್ ನಿಲ್ಲಿಸಿ, ಹೂವಿನಿಂದ ಸಿಂಗರಿಸಿ, ಪಟಾಕಿ ಸಿಡಿಸಿ, ತಮಟೆ ಸದ್ದಿಗೆ ಕುಣಿದು ಜೈಕಾರ ಹಾಕಿ 'ಲಕ್ಕಿಮ್ಯಾನ್' ಸ್ವಾಗತಕ್ಕೆ ತೀರ್ಮಾನಿಸಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲೂ ಸೆಲೆಬ್ರೇಷನ್ ಇರುತ್ತೆ. ಆದರೆ ಈ 3 ಥಿಯೇಟರ್‌ಗಳಲ್ಲಿ ಕೊಂಚ ಜೋರಾಗಿರುತ್ತದೆ.

'ಲಕ್ಕಿಮ್ಯಾನ್' ಟಿಕೆಟ್‌ಗಾಗಿ ಮುಗಿಬಿದ್ದ ಫ್ಯಾನ್ಸ್
ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ಕೆಲ ಶೋಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಫಸ್ಟ್ ಡೇ ಸಿನಿಮಾ ನೋಡಲು ಸಿನಿರಸಿಕರು ಬಹಳ ಉತ್ಸುಕರಾಗಿದ್ದಾರೆ. ಹಾಗಾಗಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಕಳೆದ 10 ತಿಂಗಳಿನಿಂದ ಮುಚ್ಚಿದ್ದ ನರ್ತಕಿ ಥಿಯೇಟರ್ ಮತ್ತೆ ಓಪನ್ ಆಗ್ತಿದ್ದು, ಅಲ್ಲೂ ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಗುರುವಾರವೇ ಹಲವೆಡೆ ಪ್ರೀಮಿಯರ್ ಶೋ
ಸ್ಯಾಂಡಲ್‌ವುಡ್‌ನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳ ಟ್ರೆಂಡ್ ನಡೀತಿದೆ. 'ಲಕ್ಕಿಮ್ಯಾನ್' ಚಿತ್ರದ ಮೊದಲ ಪ್ರದರ್ಶನ ಗುರುವಾರ ಸಂಜೆಯೇ ಶುರುವಾಗುತ್ತಿರುವುದು ವಿಶೇಷ. ಬೆಂಗಳೂರು, ಮೈಸೂರು, ತುಮಕೂರಿನಲ್ಲಿ ಪ್ರೀಮಿಯರ್ ಶೋಗಳ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದ್ದು, ಈಗಾಗಲೇ ಒಂದೆರಡು ಶೋ ಹೌಸ್‌ಫುಲ್ ಆಗಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್
ತಮಿಳಿನ 'ಓ ಮೈ ಕಡವುಲೇ' ರೀಮೆಕ್ ಆಗಿರುವ 'ಲಕ್ಕಿಮ್ಯಾನ್' ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ ಕಥೆ ಇದೆ. ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ತಾರಾಬಳಗದಲ್ಲಿ ಇದ್ದಾರೆ. ಅಪ್ಪು-ಸಾಧು ಕಾಮಿಡಿ ಪ್ರೇಕ್ಷಕರಿಗೆ ಸಖತ್ ಮಜಾ ಕೊಡಲಿದೆ. ಜಾಕ್ ಮಂಜು ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. 'ಲಕ್ಕಿಮ್ಯಾನ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.


Click it and Unblock the Notifications











