"ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿ ಇರೋಣ"; ದರ್ಶನ್ ಅಭಿಮಾನಿಗಳ ನಿರ್ಧಾರ
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಪ್ರಕರಣದಲ್ಲಿ 14 ಮಂದಿ ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಭಿಮಾನಿಗಳು ಕೂಡ ಕುಗ್ಗಿ ಹೋಗಿದ್ದಾರೆ. ದರ್ಶನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದರು ಕೆಲ ಅಭಿಮಾನಿಗಳು ಬೆಂಬಲವಾಗಿ ನಿಂತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬೇರೆ ಸ್ಟಾರ್ ನಟರ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೀತಿದೆ. ಪರ ವಿರೋಧ ಪೋಸ್ಟ್‌ಗಳು ಸದ್ದು ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ದರ್ಶನ್ ಅಭಿಮಾನಿಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯಕ್ಕೆ ತಾಳ್ಮೆಯಿಂದ ಇರಲು ತೀರ್ಮಾನಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದೆ. ಪ್ರೇಯಸಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಕಾರಣಕ್ಕೆ ಆತನನ್ನು ಅಪಹರಿಸಿ, ಥಳಿಸಲಾಗಿದ್ದು ಜೀವವೇ ಹೋಗಿಬಿಟ್ಟಿದೆ. ನಟ ದರ್ಶನ್ ಸೂಚನೆ ಮೇರೆಗೆ ಈ ಕೆಲಸ ಮಾಡಿದ್ದಾಗಿ ಕೆಲ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ನಟ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಕಾದಿದೆ.
ಅಂದಾಭಿಮಾನಿಗಳು ಹಲವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ನಟ, ನಿರ್ದೇಶಕ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಬಹಿರಂಗವಾಗಿ ಅವಾಚ್ಯ ಪದಗಳನ್ನು ಬಳಸಿ, ನಿಂದಿಸಿದ್ದರು. ಬೆದರಿಕೆ ಹಾಕಿದ್ದ ಘಟನೆಯೂ ನಡೆದಿತ್ತು. ಮಾಧ್ಯಮಗಳ ಮುಂದೆಯೇ ಅಬ್ಬರಿಸಿದ್ದರು. ಈ ಬಗ್ಗ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದರು.
ಚೇತನ್ ಎಂಬ ದರ್ಶನ್ ಅಭಿಮಾನಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿ ತಕ್ಕ ಪಾಠ ಕಲಿಸಿದ್ದಾರೆ. ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ಆರೋಪ ಆತನ ಮೇಲಿದೆ. ಆತ ಪ್ರಥಮ್ ಹಾಗೂ ಉಮಾಪತಿ ಶ್ರೀನಿವಾಸ್ ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಇದ್ದೆಲ್ಲದರ ನಡುವೆ ದರ್ಶನ್ ಅಭಿಮಾನಿಗಳು ಇನ್ನು ಮುಂದೆ ಸೈಲೆಂಟ್ ಆಗಿರಲು ಮನಸ್ಸು ಮಾಡಿದ್ದಾರೆ. ಇನ್ನು ಮುಂದೆ ಯಾರು ಏನೇ ಕಾಮೆಂಟ್ ಮಾಡಿದರೂ ಪ್ರತಿಕ್ರಿಯಿಸದೇ ಇರಲು ಮುಂದಾಗಿದ್ದಾರೆ. ಈ ಬಗ್ಗೆ ದರ್ಶನ್ ಆಪ್ತರಿಂದಲೇ ಮನವಿ ಮಾಡಿಕೊಳ್ಳಲಾಗುತ್ತಿದೆ.

"ಎಲ್ಲಾ ದರ್ಶನ್ ಸರ್ ಅಭಿಮಾನಿಗಳಲ್ಲಿ ಒಂದು ವಿನಂತಿ. ದಯಮಾಡಿ ದರ್ಶನ್ ಸರ್ ಅವರು ಆರೋಪ ಮುಕ್ತರಾಗಿ ಹೊರಗಡೆ ಬರುವವರೆಗೆ ಯಾರು ಕೂಡ ಯಾರೂ ಏನೆಂದರೂ ಅವರಿಗೆ ಕಾಮೆಂಟ್ ಮಾಡುವುದಾಗಲಿ ಹಾಗೂ ಬೈಯ್ದು ಮೆಸೇಜ್ ಮಾಡುವುದಾಗಲಿ ಮಾಡಬೇಡಿ. ಒಂದು ರೀತಿ ಕಣ್ಣು ಇದ್ದು ಕುರುಡರ ಹಾಗೆ ಕಿವಿ ಇದ್ದು ಕೇಳಿಸದ ಹಾಗೆ ಇದ್ದುಬಿಡಿ.. ಕಾಲವೇ ಎಲ್ಲರಿಗೂ ಉತ್ತರ ಕೊಡುತ್ತದೆ.. ಎಲ್ಲರೂ ಅರ್ಥ ಮಾಡಿಕೊಳ್ಳಿ" ಎಂದು ಕೇಳಿಕೊಂಡಿದ್ದಾರೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನ ಮುಂದೆ ಒಂದಷ್ಟು ಜನ ದರ್ಶನ್ ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕುತ್ತಿದ್ದಾರೆ. ನಿನ್ನೆ(ಜೂನ್ 24) ಪತ್ನಿ ವಿಜಯಲಕ್ಷ್ಮಿ ದರ್ಶನ್, ಪುತ್ರ ವಿನೀಶ್ ಹಾಗೂ ಆಪ್ತ ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿ ಬಂದಿದ್ದಾರೆ. ಪತ್ನಿ ಹಾಗೂ ಮಗನನ್ನು ನೋಡಿ ನಟ ದರ್ಶನ್ ಕಣ್ಣೀರಾಗಿದ್ದಾರೆ ಎಂದು ವರದಿಯಾಗಿದೆ.
ಸಾಕಷ್ಟು ಜನ ನಿರ್ಮಾಪಕರು ದರ್ಶನ್ ನಂಬಿ ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಒಂದಷ್ಟು ಮುಂಗಡ ಹಣ ನೀಡಿದ್ದಾರೆ. ಆದಷ್ಟು ಬೇಗ ದರ್ಶನ್ ಹೊರ ಬರುತ್ತಾರೆ, ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎನ್ನುವ ಆಶಾಭಾವನೆಯಲ್ಲಿ ಅವರೆಲ್ಲಾ ಇದ್ದಾರೆ. ಮತ್ತೊಂದು ಕಡೆ ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.


Click it and Unblock the Notifications











