ನಟ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್, ಯುವಕನಿಗೆ ಬಸ್ಕಿ ಶಿಕ್ಷೆ ಕೊಟ್ಟ ಫ್ಯಾನ್ಸ್!
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಇದು ಕೆಲವೊಮ್ಮೆ ವಿಕೋಪಕ್ಕೆ ತಿರುಗಿರುವ ಸಾಕಷ್ಟು ಉದಾಹರಣೆಗಳಿವೆ. ನಟ ದರ್ಶನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ ಯುವಕನನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿರುವ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಗೀತಾಂಜಲಿ ಥಿಯೇಟರ್ ಬಳಿ ಈ ಘಟನೆ ನಡೆದಿದೆ. ಹರಪ್ಪನ ಹಳ್ಳಿ ತಾಲೂಕಿನ ವಡ್ನಳ್ಳಿ ಮೂಲದ ಯುವಕ ಲಿಂಗರಾಜುಗೆ ದರ್ಶನ್ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಬಗ್ಗೆ ಲಿಂಗರಾಜು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂದು ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ. ದರ್ಶನ್ ಕಟೌಟ್ ಮುಂದೆ ಲಿಂಗರಾಜು ಅಂಗೈಯಲ್ಲಿ ಕರ್ಪೂರ ಹಚ್ಚಿ, ಬಸ್ಕಿ ಹೊಡೆಸಿ ಜೈ ಡಿಬಾಸ್ ಎಂದು ಕೂಗುವಂತೆ ಮಾಡಿದ್ದಾರೆ.

ದರ್ಶನ್ ಅಭಿಮಾನಿಗಳ ನೈತಿಕ ಪೊಲೀಸ್‌ಗಿರಿ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಲಿಂಗರಾಜು ಕೈಯಲ್ಲಿ ಕರ್ಪೂರ ಹಚ್ಚಿ, ಬಸ್ಕಿ ಹೊಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಲಿಂಗರಾಜು ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿ ಎನ್ನುವ ಮಾತುಗಳು ಕೇಳಿಬರ್ತಿದೆ.
'ಕಾಟೇರ' ಸಿನಿಮಾ ಬಗ್ಗೆ ಅಭಿಮಾನಿಗಳು ಹಾಕಿದ್ದ ಪೋಸ್ಟ್‌ಗೆ ಲಿಂಗರಾಜು ಕಾಮೆಂಟ್ ಮಾಡಿದ್ದ ಎನ್ನಲಾಗುತ್ತಿದೆ. ಆತನಿಗೆ ಫೋನ್ ಮಾಡಿ ಸಾಕಷ್ಟು ಜನ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಆತನನ್ನು ಗೀತಾಂಜಲಿ ಥಿಯೇಟರ್ ಬಳಿ ಕರೆತಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟ ದರ್ಶನ್ ಅವರ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಕ್ಷಮೆ ಕೇಳಿಸಿದ್ದಾರೆ.
ಲಿಂಗರಾಜು ಬರಿಗೈಲಿ ಕರ್ಪೂರ ಹಚ್ಚಿ 'ಕಾಟೇರ' ಪೋಸ್ಟರ್‌ಗೆ ಆರತಿ ಬೆಳಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಬಳಿಕ ಮಾಡಿದ ತಪ್ಪಿಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ್ದಾರೆ. ಮತ್ತೊಬ್ಬ ಯುವಕನಿಗೂ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು 'ಕಾಟೇರ' ಸಿನಿಮಾ ವಿಚಾರಕ್ಕೆ ಬಂದರೆ 3ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಮತ್ತೆ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಹಲವೆಡೆ ಶೋಗಳು ಹೌಸ್‌ಫುಲ್ ಆಗುತ್ತಿದೆ. ತೆಲುಗು, ತಮಿಳಿನ ನಾಲ್ಕೈದು ಸಿನಿಮಾಗಳು ಬಿಡುಗಡೆ ಆಗಿದ್ದರೂ 'ಕಾಟೇರ' ಆರ್ಣಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಇನ್ನು 3ನೇ ವಾರವೂ 416 ಥಿಯೇಟರ್ ಮತ್ತು 72 ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆಸಿದೆ.
ಈಗಾಗಲೇ ಅಂದಾಜು 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಕಾಟೇರ' ಸಿನಿಮಾ ಸದ್ದು ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ದೇಶಗಳಲ್ಲಿ ಕೂಡ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಚಿತ್ರದ ಪ್ರೀಮಿಯರ್ ಶೋಗೆ ಚಿತ್ರತಂಡ ಕೂಡ ಹಾಜರ್ ಆಗಿತ್ತು. ದುಬೈ ಕನ್ನಡಿಗರು ನಟ ದರ್ಶನ್‌ಗೆ ಕರುನಾಡ ಅಧಿಪತಿ ಹಾಗೂ ನಿರ್ದೇಶಕ ತರುಣ್ ಸುಧೀರ್‌ಗೆ ಹ್ಯಾಟ್ರಿಕ್ ಡೈರೆಕ್ಟರ್ ಎನ್ನುವ ಬಿರುದು ನೀಡಿದ್ದರು.
ತರುಣ್ ಸುಧೀರ್ ಟೇಕಿಂಗ್, ದರ್ಶನ್ ಪರ್ಫಾರ್ಮನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಕಲಾವಿದರ ಅಭಿನಯ, ಒಂದೊಳ್ಳೆ ಸಂದೇಶ ಎಲ್ಲದರ ಬಗ್ಗೆಯೂ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಒಂದು ಹಳ್ಳಿ ಹಿನ್ನೆಲೆಯ ಕಥೆ ಕಟ್ಟಿಕೊಂಡು ಇಡೀ ತಂಡ ಗೆದ್ದಿದೆ. ನಟ ದರ್ಶನ್ ಬಾಕ್ಸಾಫೀಸ್ ಸುಲ್ತಾನ್ ಅನ್ನೋದನ್ನು 'ಕಾಟೇರ' ಸಿನಿಮಾ ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದೆ.


Click it and Unblock the Notifications











