ಸಿಡಿ ಉತ್ಸವದಲ್ಲಿ ರಾರಾಜಿಸಿದ ಪುನೀತ್ ರಾಜ್‌ಕುಮಾರ್, ಯಶ್, ಜೂನಿಯರ್ ಎನ್‌ಟಿಆರ್!
ಕರುನಾಡ ರತ್ನ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಎರಡು ವರ್ಷವಾಗುತ್ತಾ ಬಂದಿದೆ. ಆದರೆ ರಾಜ್ಯದ ಜನ ಅಪ್ಪು ನಿಧನವನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ಅವರ ಅಭಿಮಾನಿಗಳು ತಮ್ಮ ನಟನನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದು, ದೇವರಿಗೆ ಕೊಟ್ಟ ಸ್ಥಾನವನ್ನು ನೀಡಿದ್ದಾರೆ. ಇದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಈಗ ಇಂತಹದ್ದೇ ಒಂದು ದೃಶ್ಯಕ್ಕೆ ಕರುನಾಡು ಸಾಕ್ಷಿಯಾಗಿದೆ.
ಬೆಂಗಳೂರಿನ ಪಕ್ಕದಲ್ಲಿನ ಹೊಸೂರಿನಲ್ಲಿ ನಡೆದ ದೇವರ ಉತ್ಸವದಲ್ಲಿ ಪುನೀತ್ ರಾಜ್‌ಕುಮಾರ್ ರಾರಾಜಿಸಿದ್ದಾರೆ. ಹೌದು, ನಟನ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹಿಡಿದು ಸಿಡಿ ಉತ್ಸವದಲ್ಲಿ ಭಾಗಿಯಾಗಿ ತಮ್ಮ ಅಭಿಮಾನ ಮೆರೆದಿದ್ದಾರೆ. ಪುನೀತ್ ಜೊತೆಗೆ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರ ಫೋಟೋ ಕೂಡ ಕಾಣಿಸಿದೆ.

ಸಿಡಿ ಉತ್ಸವದಲ್ಲಿ ಅಪ್ಪು, ಯಶ್, ಜೂ.ಎನ್‌ಟಿಆರ್!
ದಕ್ಷಿಣ ಭಾರತದ ಸ್ಟಾರ್ ನಟರು ಮತ್ತು ಅವರ ಅಭಿಮಾನಿಗಳ ಪ್ರೀತಿಯನ್ನು ಸಿನಿಮಾ ಬಿಡುಗಡೆ ವೇಳೆ ನೋಡಿರುತ್ತೇವೆ. ಕೆಲವೊಮ್ಮೆ ಸಿಗುವ ಎಲ್ಲಾ ಸಂದರ್ಭಗಳಲ್ಲಿಯೂ ನೆಚ್ಚಿನ ನಟನ ಬಗ್ಗೆ ಅಭಿಮಾನ ಮೆರೆಯಲು ಫ್ಯಾನ್ಸ್ ಯಾವುದೇ ಹಂತಕ್ಕಾದರೂ ಹೋಗುತ್ತಾರೆ. ಇತ್ತೀಚೆಗೆ, ಪುನೀತ್ ರಾಜ್‌ಕುಮಾರ್, ಜೂನಿಯರ್ ಎನ್‌ಟಿಆರ್ ಮತ್ತು ಯಶ್ ಅವರ ಪೋಸ್ಟರ್‌ಗಳನ್ನು ಹಿಡಿದಿರುವ ಅಭಿಮಾನಿಗಳ ಗುಂಪು ಸಿಡಿ ಆಡುವಾಗ ಕಾಣಿಸಿದೆ.
ಕ್ರೇನ್‌ನಲ್ಲಿ ನೇತಾಡುತ್ತಾ ತಮ್ಮ ಸಿಡಿ ಹರಕೆ ಸಲ್ಲಿಸುವ ಭಕ್ತರು ತಮ್ಮ ನೆಚ್ಚಿನ ನಟರ ಬ್ಯಾನರ್‌ಗಳನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ. ಮೇಲಿನಿಂದ ಈ ಬ್ಯಾನರ್‌ಗಳನ್ನು ಇಳಿಬಿಟ್ಟ ಈ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಹೊಸೂರಿನ ಶ್ರೀ ವೇಲ್ ಮುರುಗನ್ ಕಾವಡಿ ಮಹೋತ್ಸವದಲ್ಲಿ ದಿನ್ನಹಳ್ಳಿ ಹುಡುಗರು ಎಂದು ಕರೆದುಕೊಳ್ಳುವ ಗುಂಪು ಈ ಬ್ಯಾನರ್‌ಗಳನ್ನು ಹಿಡಿದಿದೆ.

ಅಪಾರ ಅಭಿಮಾನಿಗಳನ್ನು ಹೊಂದಿರುವ ಅಪ್ಪು
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ 2021 ರಲ್ಲಿ 46 ನೇ ವಯಸ್ಸಿನಲ್ಲಿ ನಿಧನರಾದರು. ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಮತ್ತು ತೆಲುಗು ನಟ ಜೂನಿಯರ್ ಎನ್‌ಟಿಆರ್ ತಮ್ಮ ರಾಜ್ಯಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಆಗಸ್ಟ್ 14 ರಂದು ನಡೆದಿರುವ ಈ ಉತ್ಸವದ ಎರಡು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಒಂದು ವಿಡಿಯೋದಲ್ಲಿ, ಜೂನಿಯರ್ ಎನ್‌ಟಿಆರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಕ್ರೇನ್‌ನಿಂದ ಹೂಗಳು ತುಂಬಿದ ಬೃಹತ್ ಬ್ಯಾನರ್ ಅನ್ನು ಕೆಳಗೆ ಬಿಡುವುದು ನೋಡಬಹುದು. ಅದೇ ರೀತಿ ಯಶ್ ಅಭಿಮಾನಿಗಳು ಬ್ಯಾನರ್ ಹಿಡಿದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್, ಕೆಜಿಎಫ್: ಅಧ್ಯಾಯ 2' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇನ್ನು, ತಮ್ಮ ಮುಂಬರುವ ಚಿತ್ರವನ್ನು ಘೋಷಿಸಿಲ್ಲ. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಯಶ್ ತಮ್ಮ ಅಭಿಮಾನಿಗಳಿಗೆ ತಾಳ್ಮೆಯಿಂದಿರಿ ಮತ್ತು 'ಯಶ್ 19' ಘೋಷಣೆಗಾಗಿ ಕಾಯುವಂತೆ ಮನವಿ ಮಾಡಿದ್ದರು.
ಜೂನಿಯರ್ ಎನ್‌ಟಿಆರ್
ತೆಲುಗು ನಟ ಜೂನಿಯರ್ ಎನ್‌ಟಿಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದರಲ್ಲಿನ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ 2023ರ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಈಗ, ನಟ ಕೊರಟಾಲ ಶಿವ ಅವರ ಮುಂಬರುವ ಚಿತ್ರ 'ದೇವರ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.


Click it and Unblock the Notifications










