'ಬಿಗ್ ಬಾಸ್' ಮನೆಗೆ ಹೋಗಲು ಪ್ರಚಾರಕ್ಕೆ 'ದರ್ಶನ್' ಹೆಸರು ಬಳಸಿಕೊಂಡ್ರಾ ವಕೀಲ್ ಸಾಬ್..?
ಪ್ರಕರಣ ಯಾವುದೇ ಇರಲಿ, ಸಾಮಾಜಿಕ ಜಾಲತಾಣದ ಮೂಲಕ ಆ ಪ್ರಕರಣದ ಕುರಿತು ವಕಾಲತ್ತು ಮಾಡುತ್ತಿದ್ದವರು ಕೆ.ಎನ್. ಜಗದೀಶ್. ವಕೀಲ್ ಸಾಬ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನೂ ಗಳಿಸಿರುವ ಇವರ ಕೈಯಲ್ಲಿ ಹಲವು ರಾಜಕಾರಣಿಗಳ ಜಾತಕ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ವಿಡಿಯೋ ಇದೆ ಎಂದು ಜಗದೀಶ್ ತೀರಾ ಇತ್ತೀಚೆಗೆ ಹೇಳಿದ್ದರು. ಈ ಮೂಲಕ ಸದ್ದು ಮಾಡಿದ್ದರು.
ಇಂಥಾ ಜಗದೀಶ್, ದರ್ಶನ್ ಬಂಧನವಾದಾಗ ಎಲ್ಲಿ ಇದ್ದರೋ ಗೊತ್ತಿಲ್ಲ. ಆದರೆ ಏಕಾಏಕಿ ದಿಗ್ಗನೆ ಎದ್ದು ಬಂದು ನಿನ್ನೆ-ಮೊನ್ನೆಯವರೆಗೆ ದರ್ಶನ್ ಪರ ಬೆಂಬಲದ ಧ್ವಜ ಹಾರಿಸಲು ಶುರು ಮಾಡಿದ್ದರು. ದರ್ಶನ್ ಅವರನ್ನು ಇಮೀಡಿಯೆಟ್ಟಾಗಿ ಬಿಡಬೇಕೆಂದು ಹತ್ತು ಇಪ್ಪತ್ತು ಜನರ ಜೊತೆ ಧರಣಿ ಕುಂತರು. ದರ್ಶನ್ ಅಭಿಮಾನಿಗಳು ತಮ್ಮ ಜೊತೆ ಕೈ ಜೋಡಿಸದಿರುವುದಕ್ಕೆ ಬಿರಿಯಾನಿ ಹಾಗೂ ಹಣ ನೀಡದೇ ಇದ್ದಿದ್ದಕ್ಕೆ ದರ್ಶನ್ ಫ್ಯಾನ್ಸ್ ಬಂದಿಲ್ಲ ಎಂದು ತಮ್ಮ ಮನದ ನೋವು ಹಂಚಿಕೊಂಡರು.

ಮುಂದುವರೆದು ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪವನ್ನು ಜಗದೀಶ್ ಮಾಡಿದರು. ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ಸಿಕ್ಕ ರಾಜಾತಿಥ್ಯದ ಫೋಟೋ ತೆಗೆದಿದ್ದು ಯಾರು ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದರು. ದರ್ಶನ್ ಫೋಟೋ ತೆಗೆದವರು ಯಾರು, ಆ ವ್ಯಕ್ತಿಯ ಹಿನ್ನೆಲೆ ಏನು ಎನ್ನುವ ಕುರಿತು ಮಾಹಿತಿಯನ್ನು ನೀಡಬೇಕು. ನೀವು ಮಾಹಿತಿ ನೀಡದಿದ್ದರೆ ಆ ವ್ಯಕ್ತಿಯ ಕುರಿತು ನಾನೇ ಎಲ್ಲ ವಿವರವನ್ನೂ ಹಂಚಿಕೊಳ್ಳುತ್ತೇನೆ ಎಂದು ಎಚ್ಚರಿಕೆಯನ್ನು ಕೂಡ ಕೆ.ಎನ್.ಜಗದೀಶ್ ನೀಡಿದರು. ಆದರೆ ಈಗ ದರ್ಶನ್‌ಗೆ ನ್ಯಾಯ ಕೊಡಿಸಬೇಕಾದ ಕೆ ಎನ್ ಜಗದೀಶ್ ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ನಡು ನೀರಿನಲ್ಲಿ ಕೈ ಬಿಟ್ಟು ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಮನೆಯಲ್ಲಿ ಉಳಿಯಲು ನಿಮ್ಮ ಅಮೂಲ್ಯವಾದ ಮತ ನನಗೆ ನೀಡಿಯೆಂದು ಮುಂದೆ ಮನವಿಯನ್ನೂ ಮಾಡಿಕೊಳ್ಳಲಿದ್ದಾರೆ.
ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು, ಬಿಗ್ ಬಾಸ್ ಮನೆ ತಲುಪಲು ಜಗದೀಶ್ ಅವರಿಗೆ ಸಹಕಾರಿಯಾದ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ನೀವು ಮಾಡಿದ್ದು ಸರೀನಾ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಲೆಂದೇ ಇಷ್ಟೆಲ್ಲಾ ಸರ್ಕಸ್ ನೀವು ಮಾಡಿದ್ದಾ ಎಂದು ತಪರಾಕಿ ಹಾಕುತ್ತಿದ್ದಾರೆ. ನಮ್ಮ ಬಾಸ್ ಹೆಸರಿನಲ್ಲಿ ಜನಪ್ರಿಯತೆಯನ್ನು ಪಡೆದ್ರಲ್ಲ ಎಂದು ಛೀಮಾರಿಯನ್ನು ಹಾಕುತ್ತಿದ್ದಾರೆ.
ಇನ್ನೂ ಕೆಲವರು ಜಗದೀಶ್ ಅವರ ಈ ನಡೆಯಿಂದ ದಿಕ್ಕೆಟ್ಟು ತಮ್ಮ ಅಸಮಾಧಾನವನ್ನೂ ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕುತ್ತಿದ್ದಾರೆ. ನ್ಯಾಯಕ್ಕೋಸ್ಕರ ನಾನು ಯಾವ ಮಟ್ಟಕ್ಕೆ ಬೇಕಾದ್ರೂ ಹೋಗುತ್ತೇನೆ, ಒಂದು ಸಲ ಡಿಸೈಡ್ ಮಾಡಿದ್ರೆ ನನ್ನ ಮಾತು ನಾನೇ ಕೇಳಲ್ಲ ಎಂದು ಹೇಳಿ ಹೇಳಿ ಕೊನೆಗೆ ಬಿಗ್ ಬಾಸ್ ಮನೆಗೆ ಹೋದರಲ್ಲ ಎನ್ನುತ್ತಿದ್ದಾರೆ. ಅಲ್ಲಾ ಸ್ವಾಮಿ ನ್ಯಾಯ ಕೊಡಿಸಬೇಕಾದ ನೀವೇ ಬಿಗ್ ಬಾಸ್ ಮನೆಯಲ್ಲಿ ಕುಂತರೆ ನಮ್ಮ ಬಾಸ್ ದರ್ಶನ್ ಅವರ ಕಥೆ ಏನು, ಅವರನ್ನು ಹೊರಗಡೆ ಕರೆದುಕೊಂಡು ಬರುವವರು ಯಾರು ಎಂದು ತಮ್ಮ ಮನದ ನೋವನ್ನು ಕೂಡ ಕೆಲವರು ಹೊರ ಹಾಕುತ್ತಿದ್ದಾರೆ. ಮತ್ತೂ ಕೆಲವರು ಜಗದೀಶ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಯಾರು ಜಗದೀಶ್ ಅವರಿಗೆ ವೋಟ್ ಮಾಡಬೇಡಿ ಎಂಬ ಮನವಿಯನ್ನೂ ಕೂಡ ಮಾಡಿಕೊಳ್ಳುತ್ತಿದ್ದಾರೆ. ಏನೇ ಇರಲಿ.. ಈ ಜಗತ್ತೇ ನಾಟಕ ರಂಗ.. ನೀವೇನಂತೀರಿ..?


Click it and Unblock the Notifications











