'ದರ್ಶನ್' ಹೆಸರು ಕೇಳಿ ಕಾಲಾಯ ತಸ್ಮೈ ನಮಃ ಎಂದ ಶ್ರೀಮುರಳಿ..!
ಕನ್ನಡ ಚಿತ್ರರಂಗ ಒಂದು ಚಿಕ್ಕ ಮನೆ. ಈ ಮನೆಯಲ್ಲಿ ಅಲ್ಲೊಂದು..ಇಲ್ಲೊಂದು ಭಿನ್ನಾಭಿಪ್ರಾಯಗಳಿವೆ. ಮಿಕ್ಕಂತೆ ಎಲ್ಲರೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಇದ್ದಾರೆ. ಆದರೆ ಈ ವಿಚಾರವನ್ನು ಅರಿಯದ ಅನೇಕರು ಅಭಿಮಾನದ ಸೋಗಿನಲ್ಲಿ ಮಾಡಬಾರದ ಅನಾಚಾರವನ್ನೆಲ್ಲ ಮಾಡುತ್ತಿದ್ದಾರೆ. ಟ್ರೋಲು .. ಕಿಂಡಲ್ಲು .. ಸ್ಟಾರ್ ವಾರು .. ಎಂದೆಲ್ಲ ಜೇನುಗೂಡಿನಂತೆ ಇರುವ ಮನೆಯನ್ನು ಒಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಫ್ಯಾನ್ ವಾರ್ ಎಂಬ ಹೆಸರಿನಲ್ಲಿ ಮನೋ ರೋಗಿಯಂತೆ ವರ್ತನೆ ಮಾಡುತ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿವೆ.
ಸಮಾಧಾನದ ವಿಚಾರ ಎಂದರೆ ನಮ್ಮಲ್ಲಿ ಅನೇಕ ಸ್ಟಾರ್‌ಗಳಿಗೆ ಈ ಹುನ್ನಾರದ ಅರಿವು ಇದೆ. ನಮ್ಮ ನಮ್ಮಲ್ಲಿಯೇ ತಂದಿಡುವ ಕೆಲಸವನ್ನು ಇವರೆಲ್ಲ ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಶ್ರೀಮುರಳಿ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿದ್ದಾರೆ. ತಾಳ್ಮೆಯನ್ನು ಕಳೆದುಕೊಳ್ಳದೇ ಪ್ರೀತಿಯಿಂದ ಮಾತನಾಡುವ ಮೂಲಕ ನಾವೆಲ್ಲ ಚೆನ್ನಾಗಿಯೇ ಇದ್ದೇವೆ ಎನ್ನುವ ಸಂದೇಶವನ್ನು ಇನ್ನೊಮ್ಮೆ ರವಾನೆ ಮಾಡಿದ್ದಾರೆ.

ಹೌದು, ಅಸಲಿಗೆ ನಿಮಗೆ ಗೊತ್ತಿರಬೇಕು ಶ್ರೀಮುರಳಿ ಅಭಿನಯದ ಬಘೀರ ಇದೇ ಅಕ್ಟೋಬರ್ 31ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗುತ್ತಿದೆ. ಕೇವಲ ಕನ್ನಡ ಮಾತ್ರವಲ್ಲ ಚಿತ್ರ ತೆಲುಗಿನಲ್ಲಿ ಕೂಡ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೆ ಇನ್ನೇನು ಕೆಲವೇ ದಿನ ಇರುವ ಹಿನ್ನೆಲೆ ಶ್ರೀಮುರಳಿ ಕೂಡ ಚಿತ್ರದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತೆರಳಿ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಕೆಲವರು ಶ್ರೀಮುರಳಿ ಹೋದಲೆಲ್ಲ ಬೇಕು ಬೇಕಂತಲೇ ಜೈಲಿನಲ್ಲಿರುವ ದರ್ಶನ್ ಹೆಸರನ್ನು ಕೂಗುತ್ತಿದ್ದಾರೆ. ಈ ಮೂಲಕ ತಮ್ಮ ಅಂಧಾಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ದಾರೆ.ಬೇರೆಯವರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಿರುವವರಿಗೆ ಶ್ರೀಮುರಳಿ ಈಗ ಉತ್ತರವನ್ನು ನೀಡಿದ್ದಾರೆ. ನನ್ನ ಮತ್ತು ದರ್ಶನ್ ಸಂಬಂಧ ಎಂದಿಗೂ ಬದಲಾಗಲ್ಲ ಎಂದು ಹೇಳಿದ್ದಾರೆ.
ಬಘೀರ ಚಿತ್ರದ ಪ್ರಚಾರದ ಸಮಯದಲ್ಲಿ ಡಿ ಬಾಸ್.. ಡಿ ಬಾಸ್.. ಎಂದು ಕೂಗಿದವರನ್ನು ಉದ್ದೇಶಿಸಿ ಮಾತನಾಡಿರುವ ಶ್ರೀಮುರಳಿ ತಲೆನೇ ಕೆಡಿಸಿಕೊಳ್ಳಲ್ಲ ನನ್ನ ಸಂಬಂಧ, ನನ್ನ ಸ್ನೇಹ ಯಾವತ್ತು ಚೇಂಜ್ ಆಗಲ್ಲ, ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದಿದ್ದಾರೆ. ಅದರ ಬಗ್ಗೆ ಯಾರು ತಲೆಯನ್ನು ಕೆಡಿಸಿಕೊಳ್ಳಬೇಕಾಗಿಲ್ಲ, ಪದೇ ಪದೇ ಅದನ್ನು ಯಾರು ಹೇಳಲೂ ಬೇಕಾಗಿಲ್ಲ ಎಂದಿದ್ದಾರೆ. ಆ ಗೌರವ ನಮ್ಮಲ್ಲಿದೆ. ಅವರು ಆದಷ್ಟು ಬೇಗ ಹೊರ ಬರ್ತಾರೆ, ಕಾಲಾಯ ತಸ್ಮೈ ನಮಃ ಎಂದು ಹೇಳಿದ್ದಾರೆ. ಈ ಮೂಲಕ ಬೆಂಕಿ ಹಚ್ಚಲು ಪ್ರಯತ್ನ ಮಾಡುತ್ತಿರುವವರಿಗೆ ಪ್ರತ್ಯುತ್ತರವನ್ನು ಕೂಡ ಶ್ರೀಮುರಳಿ ನೀಡಿದ್ದಾರೆ.
ಸದ್ಯಕ್ಕೆ ಶ್ರೀಮುರಳಿ ಅವರು ದರ್ಶನ್ ಕುರಿತು ಮಾತನಾಡಿರುವ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರೆಲ್ಲ ಚೆನ್ನಾಗಿ ಇದ್ದಾರೆ ನೀವ್ಯಾಕೇ ಈ ತರ ಕಾಲೆಳೆಯುತ್ತಿದ್ದೀರಾ ಎಂದು ಕಿಡಿ ಕಾರುತ್ತಿದ್ದಾರೆ. ಇದು ಆ ಸ್ಟಾರ್ ಈ ಸ್ಟಾರ್ ವಿಚಾರವಲ್ಲ ಕನ್ನಡ ಚಿತ್ರರಂಗದ ವಿಚಾರ ಎನ್ನುವುದನ್ನು ಮರೆಯಬೇಡಿ ಎನ್ನುತ್ತಿದ್ದಾರೆ. ನಮ್ಮಲ್ಲಿರುವ ಬೆರಳಣಿಕೆಯ ಹೀರೋಗಳ ನಡುವೆ ತಂದಿಡುವ ಕೆಲಸ ಮಾಡಬೇಡಿ ಎನ್ನುವ ಮನವಿಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ.
ಅಂದ್ಹಾಗೇ ಶ್ರೀಮುರಳಿಯ ಮುಂದೆ ದರ್ಶನ್ ಹೆಸರನ್ನು ಅಭಿಮಾನಿಗಳು ಕೂಗಿದ್ದು ಇದು ಮೊದಲೇನಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಮೈಸೂರಿನಲ್ಲಿ ಯುವ ದಸರಾ ಕಾರ್ಯಕ್ರಮದಲ್ಲಿ ಶ್ರೀಮುರಳಿ ಭಾಗಿಯಾದಾಗ ಕೂಡ ಅನೇಕರು ದರ್ಶನ್ ಹೆಸರನ್ನು ಶ್ರೀಮುರಳಿ ಎದುರು ಕೂಗಿದ್ದರು. ಆಗಲೂ ಕೂಡ ಶ್ರೀಮುರಳಿ ನಾನು ಯಾರ ಬಗ್ಗೆಯೂ ಏನು ಹೇಳಲ್ಲ. ಎಲ್ಲರ ಜೀವನದಲ್ಲಿ ಕೂಡ ಕೆಟ್ಟ ಸಮಯ ಬರುತ್ತೆ. ನಂತರ ಒಳ್ಳೆಯ ಸಮಯ ಕೂಡ ಬರುತ್ತೆ ಎಲ್ಲರಿಗೂ ಶುಭವಾಗಲಿ ಎಂದಿದ್ದರು. ಕಾಲಾಯ ತಸ್ಮೈ ನಮಃ ಎಂದು ಹೇಳಿದ್ದರು.


Click it and Unblock the Notifications