ಪುನೀತ್ ಕೊನೆಯ 'ಪ್ರದರ್ಶನ': ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರ
ಕನ್ನಡಿಗರ ಹೃದಯದಲ್ಲಿ ರಾಜನಂತೆ ಮೆರಿದಿದ್ದ ನಟ ಪುನೀತ್ ರಾಜ್‌ಕುಮಾರ್ ಕಂಠೀರವ ಸ್ಟೇಡಿಯಂನಲ್ಲಿ 7 ಅಡಿ ಉದ್ದದ 3 ಅಡಿ ಅಗಲದ ಶವಪೆಟ್ಟಿಗೆಯಲ್ಲಿ ಮಲಗಿದ್ದಾರೆ.
ಕಂಠೀರವ ಸ್ಟೇಡಿಯಂಗೆ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಮಳೆ, ಕತ್ತಲು ಯಾವುದರ ಪರಿವೆಯೂ ಇಲ್ಲದೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ಮುರಗೇಶ ನಿರಾಣಿ, ಎಂಟಿಬಿ ನಾಗರಾಜು, ಬೈರತಿ ಬಸವರಾಜು, ಬಿಸಿ ಪಾಟೀಲ್, ಎಸ್.ಟಿ. ಸೋಮಶೇಖರ್ ಇನ್ನೂ ಹಲವರು ಹೂಗುಚ್ಛ ಇರಿಸಿ ಅಂತಿಮ ದರ್ಶನ ಪಡೆದರು.

ಪುನೀತ್ ಪಾರ್ಥಿವ ಶರೀರದ ಬಳಿಯೇ ಕುಟುಂಬಸ್ಥರೆಲ್ಲರೂ ನೆರೆದಿದ್ದಾರೆ. ಪುನೀತ್ ಅನ್ನು ಕೊನೆಯ ಬಾರಿ ಕಣ್ಣು ತುಂಬಿಕೊಳ್ಳಲು ಕಣ್ಣಲ್ಲಿ ನೀರು ತುಂಬಿಕೊಂಡೆ ಅಭಿಮಾನಿಗಳು ಧಾವಿಸಿ-ಧಾವಿಸಿ ಬರುತ್ತಿದ್ದಾರೆ. ಪುನೀತ್ ಅವರೊಟ್ಟಿಗೆ ಕೆಲಸ ಮಾಡಿದ ನಿರ್ದೇಶಕರು, ನಿರ್ಮಾಪಕರು ನಿರ್ಲಿಪ್ತವಾಗಿ ಮಲಗಿರುವ ಪುನೀತ್ ಅವರನ್ನು 'ಮಾತನಾಡಿಸುತ್ತಿರುವ' ದೃಶ್ಯ ಕಲ್ಲು ಹೃದಯದವರಿಗೂ ಕಣ್ಣೀರು ತರಿಸುವಂತಿದೆ.
ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ನಾಳೆ ಪೂರ್ಣ ಕಂಠೀರವ ಸ್ಟೇಡಿಯಂನಲ್ಲಿ ಇಟ್ಟಿರುತ್ತಾರೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಿಂದ ಅಭಿಮಾನಿಗಳು ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ.
ಕಂಠೀರವ ಸ್ಟೇಡಿಯಂ ಹೊರಗಡೆ ಜನಸಾಗರವೇ ನೆರೆದಿದೆ. ಈಗಾಗಲೇ ಸಾವಿರಾರು ಜನ ಪುನೀತ್ ಅವರ ಅಂತಿಮ ದರ್ಶನ್ ಪಡೆದಿದ್ದಾರೆ. ಈನ್ನೂ ಸಾವಿರಾರು ಮಂದಿ ಕಂಠೀರವ ಸ್ಟೇಡಿಯಂ ಹೊರಗೆ ಅಂತಿಮ ದರ್ಶನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಬೆಂಗಳೂರಿನ ಬಹುತೇಕ ಪೊಲೀಸ್ ಸಿಬ್ಬಂದಿ ಕಂಠೀರವ ಸ್ಟೇಡಿಯಂ ಬಳಿಯೇ ಇದೆ ಆದರೆ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯುವ ಕಾತುರದಲ್ಲಿರುವ ಅಭಿಮಾನಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.


Click it and Unblock the Notifications











