ಅಪಘಾತವಾದ್ರೆ ಡ್ರೈವರ್ ಮೇಲೆ ಕೇಸ್ ಹಾಕ್ತಾರೆ, ಪಬ್ ಪ್ರಕರಣದಲ್ಲಿ ದರ್ಶನ್ ಹೆಸರೇಕೆ? ಎಂದು ಫ್ಯಾನ್ಸ್ ಪ್ರಶ್ನೆ
ಒಂದ್ಕಡೆ 'ಕಾಟೇರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದು ಕಡೆ ಪಬ್ ಪಾರ್ಟಿ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 8 ಜನರಿಗೆ ನೋಟಿಸ್ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಬೆಳಗಿನ ಜಾವದವರೆಗೂ ಪಾರ್ಟಿ ನಡೆಸಿದ್ದಕ್ಕಾಗಿ ಜೆಟ್‌ಲ್ಯಾಗ್ ಪಬ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಒಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಜನವರಿ 3ರಂದು ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ 'ಕಾಟೇರ' ಚಿತ್ರದ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಬಿ. ಸರೋಜಾ ದೇವಿ, ಉಪೇಂದ್ರ, ರಕ್ಷಿತ್ ಪ್ರೇಮ್, ಧನಂಜಯ್ ಸೇರಿದಂತೆ ಕನ್ನಡ ಚಿತ್ರರಂಗ ಕಲಾವಿದರು, ತಂತ್ರಜ್ಞರು ಬಂದು ಸಿನಿಮಾ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. 11 ಗಂಟೆ ವೇಳೆಗೆ ಎಲ್ಲರೂ ಅಲ್ಲಿಂದ ಹೊರಟರು.

ಬಳಿಕ 'ಕಾಟೇರ' ಚಿತ್ರತಂಡ ಹಾಗೂ ನಟ ದರ್ಶನ್ ಆಪ್ತರು ಒರಾಯನ್ ಮಾಲ್ ಮುಂಭಾಗದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಮೊದಲಿಗೆ ಕೇಕ್ ಕತ್ತರಿಸಿ 'ಕಾಟೇರ' ಸಕ್ಸಸ್ ಸೆಲಬ್ರೇಷನ್ ಮಾಡಿದ್ದರು. ಬಳಿಕ ಪಾರ್ಟಿ ಶುರುವಾಯಿತು ಎನ್ನಲಾಗಿದೆ. ಕೇಕ್ ತತ್ತರಿಸಿದ ಫೋಟೊ, ವಿಡಿಯೋಗಳು ವೈರಲ್ ಆಗಿದೆ. ಆದರೆ ನಂತರ ಶುರುವಾಗಿದ್ದ ಪಾರ್ಟಿ ಬೆಳಗಿನ ಜಾವ 3 ಗಂಟೆವರೆಗೂ ಮುಂದುವರೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಯಮದ ಪ್ರಕಾರ ರಾತ್ರಿ 1 ಗಂಟೆಯ ಬಳಿಕ ರೆಸ್ಟೋರೆಂಟ್, ಪಬ್‌ಗಳಲ್ಲಿ ಪಾರ್ಟಿ ನಡೆಸಲು, ಮದ್ಯ ಸರಬರಾಜು ಮಾಡಲು ಅನುಮತಿ ಇಲ್ಲ. ಅದನ್ನು ಮೀರಿ ಬೆಳಗಿನ 3 ಗಂಟೆಯವರೆಗೆ ಪಾರ್ಟಿ ನಡೆಸಲು ಅನುಮತಿ ನೀಡಿದ್ದಕ್ಕೆ ಈಗ ದೂರು ದಾಖಲಿಸಲಾಗಿದೆ. ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಉಲ್ಲಂಘನೆ ಆರೋಪದಡಿ FIR ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜನವರಿ 6ರಂದು ಪ್ರಕರಣ ಸಂಬಂಧ ಪಬ್ ಮಾಲೀಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್‌ಗೆ ನೋಟಿಸ್ ನೀಡಿದ್ದರು. ಅವರಿಬ್ಬರ ನೀಡಿದ ಮಾಹಿತಿ ಮೇರೆಗೆ ಯಾರೆಲ್ಲಾ ಬೆಳಗಿನ ಜಾವದವರೆಗೂ ಪಾರ್ಟಿಯಲ್ಲಿ ಇದ್ದರು ಅವರಿಗೆಲ್ಲಾ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿದೆ. ನಟ ದರ್ಶನ್ ಜೊತೆಗೆ ಡಾಲಿ ಧನುಂಜಯ್, ಚಿಕ್ಕಣ್ಣ, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ತರುಣ್ ಸುಧೀರ್ ಹಾಗೂ ಹರಿಕೃಷ್ಣ ಹೀಗೆ ಎಂಟು ಜನರಿಗೆ ನೊಟೀಸ್ ಕಳುಹಿಸಲಾಗಿದೆ. ಆದರೆ ಯಾರೊಬ್ಬರು ಪ್ರತಿಕ್ರಿಯಿಸಿಲ್ಲ.
'ಕಾಟೇರ' ಸಿನಿಮಾ ದುಬೈನಲ್ಲಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಅಲ್ಲಿಗೆ ತೆರಳಿದೆ. ಇನ್ನು ದರ್ಶನ್ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಹಿತಶತ್ರುಗಳಿಗೆ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ. ಪರೋಕ್ಷವಾಗಿ ತಮ್ಮ ವಿರುದ್ಧ ಷಡ್ಯಂತ್ರ ನಡೀತಿದೆ ಎನ್ನುವುದನ್ನು ಹೇಳಿದಂತೆ ಕಾಣುತ್ತಿದೆ.

"ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ" ಎಂದು ಬರೆದುಕೊಂಡಿದ್ದಾರೆ.
ನಟ ದರ್ಶನ್ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಎತ್ತಿದ್ದಾರೆ. "ಒಂದು ಕಾರಲ್ಲಿ ಐದು ಜನ ಹೋಗ್ತಾಯಿದ್ರೆ ಕಾರು ಅಪಘಾತವಾದ್ರೆ ಚಾಲಕನ ಮೇಲೆ ಮಾತ್ರ ಕೇಸ್ ಹಾಕ್ತಾರಾ ? ಉಳಿದ ನಾಲ್ಕು ಜನರ ಮೇಲೆ ಹಾಕ್ತಾರಾ ?, ಒಂದು ಕಟ್ಟಡ ಬಿದ್ರೆ ಅದರ ಮಾಲೀಕನ ಮೇಲೆ ಕೇಸ್ ಹಾಕ್ತಾರೆ , ಅಷ್ಟೇ ಯಾಕೆ ಕಳೆದ ತಿಂಗಳು ನಾಯಿ ಕಚ್ಚಿದೆ ಅಂತ ನಾಯಿ ಮಾಲೀಕನ ಮೇಲೆ ಕೇಸ್ ಹಾಕಿ , ಇವಾಗ ಪಾರ್ಟಿ ಮಾಡ್ತಿದ್ರೆ ಪಬ್ ಮಾಲೀಕನಿಗೆ ನೋಟಿಸ್ ನೀಡಬೇಕು ಹೊರೆತು ಗ್ರಾಹಕರ ಮೇಲೆ ಅಲ್ಲ ತಾನೇ ? ಇದರಲ್ಲಿ ಡಿ ಬಾಸ್ ಹೆಸರು ಯಾಕೆ ? ಇದರ ಹಿಂದಿರುವ ಪ್ರಭಾವಿಗಳು ಯಾರು ?" ಎಂದು ಬರೆಯುತ್ತಿದ್ದಾರೆ. ಈ ಪ್ರಶ್ನೆಗೆ ವೈರಲ್ ಮಾಡುತ್ತಿದ್ದಾರೆ.


Click it and Unblock the Notifications











