ರೇಣುಕಾಸ್ವಾಮಿ ಕೊಲೆ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದ ಅಭಿಮಾನಿಗಳು
ಅಭಿಮಾನಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ದರ್ಶನ್ ತಮ್ಮ ಆಪ್ತರ ಮೂಲಕ ರೇಣುಕಾ ಸ್ವಾಮಿಯನ್ನ ಬೆಂಗಳೂರಿಗೆ ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಥಳಿಸಿ ಹತ್ಯೆ ಮಾಡಲಾಗಿದೆ.
ಮೈಸೂರಿನ ಹೋಟೆಲ್‌ನಲ್ಲಿದ್ದ ನಟ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ದರ್ಶನ್ ನಿವಾಸ ಹಾಗೂ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣದ ಸಂಬಂಧ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲ ಅಭಿಮಾನಿಗಳು ಈ ವಿಚಾರದಲ್ಲೂ ನೆಚ್ಚಿನ ನಟನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇನ್ನು ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಕರೆತಂದು ಥಳಿಸಿದ್ದಾರೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸ್ಥಳದಲ್ಲಿ ದರ್ಶನ್ ಇದ್ದರು, ಖುದ್ದು ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಗಳು ಹೇಳಿದ್ದಾರೆ. ಆದರೆ ದರ್ಶನ್ ಮಾತ್ರ ವಿಚಾರಣೆ ವೇಳೆ "ನಾನು ಆ ಸ್ಥಳದಲ್ಲಿ ಇರಲಿಲ್ಲ" ಎಂದಿದ್ದಾರೆ. ನಟ ದರ್ಶನ್ ವಿವಾದಗಳು, ಪ್ರಕರಣಗಳು ಇದೇ ಮೊದನೇನಲ್ಲ.
ಈ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ನಟ ದರ್ಶನ್ ಸೆರೆವಾಸ ಅನುಭವಿಸಿ ಬಂದಿದ್ದರು. ಬಳಿಕ ಕೂಡ ಸಾಕಷ್ಟು ವಿವಾದಗಳು ಸುತ್ತಿಕೊಂಡಿದ್ದವು. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ತ್ರೀ ಪೀಡಕ, ಸ್ಯಾಂಡಲ್‌ವುಡ್ ರೌಡಿ ಎಂದು ಕಾಮೆಂಟ್ ಮಾಡಲಾಗುತ್ತಿದೆ.
ಇಷ್ಟು ದಿನ ದರ್ಶನ್ ಅವರನ್ನು ವಹಿಸಿಕೊಂಡು ಮಾತನಾಡುತ್ತಿದ್ದ ಕೆಲ ಅಭಿಮಾನಿಗಳು ಕೂಡ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. "ನಾನು ಕೂಡ ದರ್ಶನ್ ಅಭಿಮಾನಿ, ಆದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ದರ್ಶನ್ ಬಂಧನ ವಿಚಾರದ ಬಗ್ಗೆ ಕನ್ನಡ ಸಿನಿಮಾ ತಾರೆಯರು ಮೌನ ವಹಿಸಿದ್ದಾರೆ. ನಟಿ ಸಂಜನಾ ಗರ್ಲಾನಿ ಮಾತ್ರ ವಿಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ.
"ಪೊಲೀಸರು ನಟ ದರ್ಶನ್ ಅವರನ್ನು ವಶಕ್ಕೆ ಪಡೆದ ವಿಚಾರ ಗೊತ್ತಾಯಿತು. ಟಿವಿಯಲ್ಲಿ ನ್ಯೂಸ್ ನೋಡಿದೆ. ಇದನ್ನು ಕೇಳಿ ನನಗೆ ಆಘಾತವಾಯಿತು. ದರ್ಶನ್ ಸರ್‌ನ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಬಂಧನ ಆಗಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರು ಶೀಘ್ರ ಬಿಡುಗಡೆ ಆಗುತ್ತಾರೆ ಎಂದುಕೊಂಡಿದ್ದೇನೆ. ನನಗೆ ಏನು ಹೇಳುವುದು ಗೊತ್ತಾಗುತ್ತಿಲ್ಲ" ಎಂದು ಸಂಜನಾ ವಿಡಿಯೋದಲ್ಲಿ ಹೇಳಿದ್ದಾರೆ.
"ಪವಿತ್ರ ಗೌಡ ಸಲುವಾಗಿ ಯಾವ ಹಂತ ಹೋಗಲೂ ಸಿದ್ದ ನಮ್ಮ ದರ್ಶನ್, He is the real 'ಪ್ರೇಮಿ' ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಮಾಡಿರುವ ಪೋಸ್ಟ್ ಸಹ ವೈರಲ್ ಆಗುತ್ತಿದೆ.


Click it and Unblock the Notifications











