'ಕಾಟೇರ' ಡೈಲಾಗ್ ಕುರಿತು ಆಕ್ಷೇಪ: 'KGF' ಡೈಲಾಗ್ ಬಗ್ಗೆ ಯಾಕೆ ಪ್ರಶ್ನಿಸಲಿಲ್ಲ? ಎಂದು ಫ್ಯಾನ್ಸ್ ಪ್ರಶ್ನೆ
ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಒಂದು ಸಮಸ್ಯೆ ಎದುರಾಗಿದೆ. ಚಿತ್ರದ ಟ್ರೈಲರ್‌ನಲ್ಲಿರುವ ಸಂಭಾಷಣೆ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ. ಕೂಡಲೇ ಆ ಡೈಲಾಗ್ ತೆಗೆಯುವಂತೆ ಸಿಎಂ ಹಾಗೂ ರಾಜ್ಯಪಾಲರಿಗೆ ಮೇಲ್ ಮೂಲಕ ಮನವಿ ಮಾಡಲಾಗಿದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಇದೆ. ಈಗಾಗಲೇ ಟ್ರೈಲರ್‌ನಲ್ಲಿರುವ ಡೈಲಾಗ್ಸ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರದಲ್ಲಿ "ಇವ್ರೆಲ್ಲ ಹಾವುಗಳಿದ್ದಂಗೆ. ವಿಷ ಇಲ್ಲ ಅಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು" ಡೈಲಾಗ್ ಇದೆ. ಇದೇ ಸಾಲುಗಳ ಬಗ್ಗೆ ಈಗ ಚರ್ಚೆ ನಡೀತಿದೆ. ಹಾವುಗಳನ್ನು ಹೊಡೆದು ಸಾಯಿಸಬೇಕು ಎನ್ನುವ ಡೈಲಾಗ್ ಕೆಟ್ಟ ಸಂದೇಶ ರವಾನೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ನಿಕಟಪೂರ್ವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ "ಅಳಿವಿನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು, ಕೊಲ್ಲೋಕೆ ಪ್ರಚೋದನೆ ನೀಡಬಾರದು. ಈ ಹೇಳಿಕೆ ಸಿನಿಮಾ ನೋಡುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸೆನ್ಸಾರ್ ಮಂಡಳಿ ಈ ಬಗ್ಗೆ ಗಮನ ಹರಿಸಬೇಕಿತ್ತು" ಎಂದು ಹೇಳಿದ್ದಾರೆ.
ಇದೇ ವಿಚಾರದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಒಕ್ಕೂಟದ ಈ ವಾದವನ್ನು ದರ್ಶನ್ ಅಭಿಮಾನಿಗಳು ಒಪ್ಪಲು ಸಿದ್ಧರಿಲ್ಲ. ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರದಲ್ಲಿ ಯಾವುದೇ ಪ್ರಾಣಿ ಹಿಂಸೆ ಮಾಡಿರುವುದಿಲ್ಲ. ಅಂತಹ ಸನ್ನಿವೇಶ ಇದ್ದರೆ ಗ್ರಾಫಿಕ್ಸ್ ಮಾಡಿರುತ್ತಾರೆ. 'ಕಾಟೇರ' ಚಿತ್ರದ ಡೈಲಾಗ್ ಕೇಳಿ ಜನ ಹಾವುಗಳನ್ನು ಹೊಡೆದು ಸಾಯಿಸುತ್ತಾರೆ ಎನ್ನುವುದು ಹಾಸ್ಯಾಸ್ಪದ ಎನ್ನುತ್ತಿದ್ದಾರೆ.

ಚಿತ್ರದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕ ಎಂದು ಮೊದಲೇ ಹೇಳಿರುತ್ತಾರೆ. ನಮ್ಮ ನೆಚ್ಚಿನ ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಕಾಳಜಿ ಮತ್ತು ಪ್ರೀತಿ ಇದೆ ಎನ್ನುವುದು ಇಡೀ ನಾಡಿಗೆ ಗೊತ್ತು. ಚಿಕ್ಕ ವಿಷಯವನ್ನು ದೊಡ್ಡದು ಮಾಡಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
'KGF' ಚಿತ್ರದಲ್ಲಿ "ಒಂದು ಆನೆ ಹೊಡೀಬೇಕು" ಎನ್ನುವ ಡೈಲಾಗ್ ಇತ್ತು. ಆಗ ಅದರ ಬಗ್ಗೆ ಯಾಕೆ ಯಾರು ಕೇಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸತ್ತಾಗ ಅದರ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಆದರೆ ಯಾರೂ ಕೂಡ ಅದರ ಬಗ್ಗೆ ದೂರು ನೀಡಲಿಲ್ಲ. ಈಗ 'ಕಾಟೇರ' ಚಿತ್ರದ ಡೈಲಾಗ್ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಕೇಳುತ್ತಿದ್ದಾರೆ.
'ಕಾಟೇರ' ಚಿತ್ರತಂಡ ಮಾತ್ರ ಈ ಡೈಲಾಗ್ ಚರ್ಚೆ ಬಗ್ಗೆ ಮೌನ ವಹಿಸಿದೆ. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಚಿತ್ರಕ್ಕೆ ಫೈನಲ್ ಟಚ್ ಕೊಡುವ ಜೊತೆಗೆ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಇನ್ನು ಎರಡು ದಿನದಲ್ಲಿ 'ಕಾಟೇರ' ಟ್ರೈಲರ್ ಒಂದು ಕೋಟಿ 60 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಜೊತೆಗೆ 4 ಲಕ್ಷದ 50 ಸಾವಿರ ಲೈಕ್ಸ್ ಗಿಟ್ಟಿಸಿದೆ.
'ಕಾಟೇರ' 70ರ ದಶಕದ ಕಥೆ ಆಧರಿಸಿದ ಸಿನಿಮಾ. ಪ್ರೇಕ್ಷಕರು ಇದನ್ನು ಮನಸ್ಸಿನಲ್ಲಿಟ್ಟಿಕೊಂಡು ಸಿನಿಮಾ ನೋಡಬೇಕು ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ. ಚಿತ್ರದಲ್ಲಿ ಆರಾಧನಾ ರಾಮು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮಾಸ್ ಸಾಂಗ್ ರಿಲೀಸ್‌ಗೆ ಸದ್ಯ ಚಿತ್ರತಂಡ ಮುಂದಾಗಿದೆ. ವರ್ಷದ ಕೊನೆಗೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











