ಅಭಿಮಾನಿಗಳಿಂದ ದರ್ಶನ್ ಹುಟ್ಟುಹಬ್ಬಕ್ಕೆ ಹರಿದು ಬರ್ತಿದೆ ಬೆಲೆಕಟ್ಟಲಾಗದ ಉಡುಗೊರೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. 'ಕ್ರಾಂತಿ' ಸಕ್ಸಸ್ ಹಿನ್ನೆಲೆಯಲ್ಲಿ ಈ ಬಾರಿ ಡಿಬಾಸ್ ಉತ್ಸವ ಮತ್ತಷ್ಟ ಕಳೆ ಕಟ್ಟಲಿದೆ. ಈಗಾಗಲೇ ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ಬ್ಯಾನರ್ ತರುವ ಬದಲು ದವಸ ಧಾನ್ಯ ತನ್ನಿ ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇನೆ ಎಂದಿದ್ದಾರೆ.
ದರ್ಶನ್ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು ಈಗಾಗಲೇ ಅಕ್ಕಿ ಸೇರಿದಂತೆ ಸಾಕಷ್ಟು ದವಸ ಧಾನ್ಯವನ್ನು ಅವರ ಮನೆಗೆ ತಲುಪಿಸುತ್ತಿದ್ದಾರೆ. ಇಂದು(ಫೆಬ್ರವರಿ 9) ಕೆಲ ಅಭಿಮಾನಿಗಳು ಖುದ್ದಾಗಿ ನಟ ದರ್ಶನ್ ಅವರಿಗೆ ಅಕ್ಕಿ ಮೂಟೆಗಳನ್ನು ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಕಳೆದ ಕೆಲ ವರ್ಷಗಳಿಂದ ಈ ರೀತಿ ದರ್ಶನ್ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಅಭಿಮಾನಿಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ. ಕೊರೊನಾ, ಕೊಡಗು ಪ್ರವಾಹ, ಉತ್ತರ ಕರ್ನಾಟಕ ಪ್ರವಾಹ ಸಮಯದಲ್ಲೂ ದರ್ಶನ್ ಅಭಿಮಾನಿಗಳು ಇದೇ ರೀತಿ ಅವಶ್ಯಕ ಇರುವವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ.
"ಬ್ಯಾನರ್, ಕೇಕ್ ಹಾಗೂ ಹಾರಗಳನ್ನು" ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು" ಎಂದು ದರ್ಶನ್ ಇತ್ತೀಚೆಗೆ ಸಂದೇಶ ನೀಡಿದ್ದರು. ಇದನ್ನೇ ತಮ್ಮ ಮನೆಯ ಮುಂಭಾಗದಲ್ಲಿ ಬ್ಯಾನರ್ ಮಾಡಿಸಿ ಹಾಕಿದ್ದಾರೆ. ಹಾಗಾಗಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ದವಸ, ಧಾನ್ಯವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಇನ್ನು ನಟ ದರ್ಶನ್ ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಕೂಡ ಮಾಡಿಕೊಂಡಿದ್ದಾರೆ. "ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂ ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು, ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗು ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ" ಎಂದಿದ್ದಾರೆ.

ಪ್ರತಿ ವರ್ಷ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತಾರೆ. ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭಾಶಯ ಕೋರಲು ಆರ್. ಆರ್ ನಗರದ ದರ್ಶನ್ ನಿವಾಸದ ಬಳಿ ಜಮಾಯಿಸುತ್ತಾರೆ. ಆದರೆ ಕೊರೊನಾ ಹಾವಳಿಯಿಂದ ಎರಡು ವರ್ಷದ ಹಿಂದೆ ಅದು ಸಾಧ್ಯವಾಗಿರಲಿಲ್ಲ.ಅಪ್ಪು ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ಕಳೆದ ವರ್ಷವೂ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳಿಗೆ ದರ್ಶನ್ ನಿರಾಸೆ ಮಾಡುವುದಿಲ್ಲ.


Click it and Unblock the Notifications











