Mahavatar Narasimha Day 4 Boxoffice: ಚಪ್ಪಲಿ ಬಿಟ್ಟು 'ಮಹಾವತಾರ್ ನರಸಿಂಹ' ದರ್ಶನ; ಬಾಕ್ಸಾಫೀಸ್ ಶೇಕ್
'ಎಕ್ಕ', 'ಸು ಫ್ರಂ ಸೋ' ಮಾತ್ರವಲ್ಲ 'ಮಹಾವತಾರ್ ನರಸಿಂಹ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಹಕಾರದೊಂದಿಗೆ ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಣ್ಣಾವ್ರ 'ಭಕ್ತ ಪ್ರಹ್ಲಾದ' ಚಿತ್ರದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಕಟ್ಟಿಕೊಡಲಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಹಾವತಾರ್ ನರಸಿಂಹ' ಸಿನಿಮಾ ಸಂಚಲನ ಸೃಷ್ಟಿಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿ ಹುಬ್ಬೇರಿಸುತ್ತಿದೆ. ಯಾವುದೇ ಪ್ರಚಾರ ಇಲ್ಲದೇ ಬಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಿನಿಮಾ ನೋಡಿದವರು ಭಾವಪರವಶರಾಗುತ್ತಿದ್ದಾರೆ. ಉತ್ತರ ಭಾರತದಲ್ಲಿ ಕೆಲವೆಡೆ ಪ್ರೇಕ್ಷಕರು ಚಿತ್ರಮಂದಿರದ ಹೊರಭಾಗದಲ್ಲಿ ಚಪ್ಪಲಿ ತೆಗೆದಿಟ್ಟು ಹೋಗಿ ಸಿನಿಮಾ ನೋಡುತ್ತಿದ್ದಾರೆ. ಚಿತ್ರಮಂದಿರಗಳ ಒಳಗೆ ಆರತಿ ಬೆಳಗಿ ನರಸಿಂಹನಿಗೆ ಜೈಕಾರ ಹಾಕುತ್ತಿದ್ದಾರೆ.

ಆನಿಮೇಷನ್ ಸಿನಿಮಾ ಆರ್ಭಟ ನೋಡಿ ಬಾಲಿವುಡ್ ಬಡಾ ಸ್ಟಾರ್‌ಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ಬಂದ 'ಕಣ್ಣಪ್ಪ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. 'ಮಹಾವತಾರ್ ನರಸಿಂಹ' ಚಿತ್ರಕ್ಕಿಂತ ಎಲ್ಲಾ ವಿಧದಲ್ಲೂ ಈ ಸಿನಿಮಾ ದೊಡ್ಡದಾಗಿತ್ತು. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್‌ಕುಮಾರ್ ರೀತಿಯ ಸ್ಟಾರ್ ನಟರು ಚಿತ್ರದಲ್ಲಿದ್ದರು. ಭಾರೀ ಪ್ರಚಾರ ಮಾಡಿದ್ದರು. ಆದರೆ ಅಂತಿಮವಾಗಿ ಸಿನಿಮಾ ಸೋಲಿನ ಸುಳಿಗೆ ಸಿಲುಕಿತ್ತು.
'ಕಣ್ಣಪ್ಪ' ರೀತಿಯಲ್ಲೇ ಭಕ್ತಿಪ್ರಧಾನ ಸಿನಿಮಾ ಆಗಿರುವ 'ಮಹಾವತಾರ್ ನರಸಿಂಹ' ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 2ಡಿ ಹಾಗೂ 3ಡಿ ಫಾರ್ಮೆಟ್‌ಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿದೆ. ಹೆಚ್ಚು ಆರ್ಭಟ ಇಲ್ಲದೇ ಕೇವಲ 100 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಮರುದಿನವೇ 200 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬಾಕ್ಸಾಫೀಸ್ ಕಲೆಕ್ಷನ್
ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. Sacnilk.com ವರದಿ ಪ್ರಕಾರ ಶುಕ್ರವಾರ ಕೇವಲ 1.75 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 4.6 ಕೋಟಿ ರೂ ಕೊಳ್ಳೆ ಹೊಡೆದು ಅಚ್ಚರಿ ಮೂಡಿಸಿತ್ತು. ಭಾನುವಾರ 9.5 ಕೋಟಿ ರೂ. ಸೇರಿ ಫಸ್ಟ್ ವೀಕೆಂಡ್‌ನಲ್ಲಿ ಒಟ್ಟು 15.85 ಕೋಟಿ ರೂ. ಬಾಚಿಕೊಂಡಿತ್ತು. ಸೋಮವಾರ ಪರೀಕ್ಷೆಯಲ್ಲಿ ಕೂಡ ಸಿನಿಮಾ ಪಾಸ್ ಆಗಿದೆ. 4ನೇ ದಿನ 6.1 ಕೋಟಿ ರೂ. ಗಳಿಕೆ ಕಂಡಿದೆ.
ಸಾಕಷ್ಟು ಜನ ಟಿಕೆಟ್ ಸಿಗದೇ ಪರದಾಡುತ್ತಿದ್ದಾರೆ. ನಿಧಾನವಾಗಿ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಫ್ಯಾಮಿಲಿ ಸಮೇತ ಪ್ರೇಕ್ಷಕರ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರ್ತಿದ್ದಾರೆ. ಹಾಗಾಗಿ 'ಮಹಾವತಾರ್ ನರಸಿಂಹ' ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ತ್ರೀಡಿಯಲ್ಲಿ ಅದ್ಭುತ ಅನುಭವ
ನಿರ್ದೇಶಕ ಅಶ್ವಿನ್ ಕುಮಾರ್ ಮತ್ತವರ ತಂಡದ 5 ವರ್ಷಗಳ ಪರಿಶ್ರಮದ ಫಲವಾಗಿ 'ಮಹಾವತಾರ್ ನರಸಿಂಹ' ಸಿನಿಮಾ ತೆರೆಗೆ ಬಂದಿದೆ. ಅದರಲ್ಲೂ ನರಸಿಂಹ ಅವತಾರದಲ್ಲಿ ವಿಷ್ಣು ಕೊನೆಗೆ ಕಂಬದಿಂದ ಹೊರಬಂದು ಹಿರಣ್ಯ ಕಶ್ಯಪು ಸಂಹಾರ ಮಾಡುವ ದೃಶ್ಯ ಅದ್ಭುತ ಎನ್ನಿಸುತ್ತದೆ. ಆನಿಮೇಷನ್ ಪಾತ್ರಗಳು, ಡಬ್ಬಿಂಗ್, ಸಂಗೀತ ಎಲ್ಲವೂ ಚಿತ್ರಕ್ಕೆ ಪ್ಲಸ್ ಆಗಿದೆ. ತ್ರಿಡೀ ಕನ್ನಡಕದಲ್ಲಿ ಸಿನಿಮಾ ನೋಡುಗರಿಗೆ ಅದ್ಭುತ ಅನುಭವ ನೀಡುತ್ತಿದೆ.
ಜಮ್ಮು ಕಾಶ್ಮೀರದಿಂದ ಹಿಡಿದು ದೇಶದ ಮೂಲೆ ಮೂಲೆಯಲ್ಲಿ 'ಮಹಾವತಾರ್ ನರಸಿಂಹ' ಚಿತ್ರ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ತಿದೆ. 5 ದಿನವೂ ಪ್ರೇಕ್ಷಕರ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬುಕ್‌ಮೈಶೋ ಬುಕ್ಕಿಂಗ್ ನೋಡಿದರೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಗಂಟೆಗೆ 16 ಸಾವಿರ ಟಿಕೆಟ್ ಬುಕ್ ಆಗುತ್ತಿದೆ.


Click it and Unblock the Notifications











