'ಭೈರತಿ ರಣಗಲ್' ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳು ಬೇಸರ; ಮತ್ತೆ ಮತ್ತೆ..
ನರ್ತನ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಭೈರತಿ ರಣಗಲ್' ಸಿನಿಮಾ ತೆರೆಗಪ್ಪಳಿಸಿ ಧೂಳೆಬ್ಬಿಸಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಶಿವಣ್ಣನ ಮಾಸ್ ಮನರಂಜನೆಗೆ ಫಿದಾ ಆಗಿದ್ದಾರೆ. 'ರಣಗಲ್' ರಣ ರಣ ರಾಜ್ಯಭಾರ ನೋಡಿ ಹುಬ್ಬೇರಿಸುತ್ತಿದ್ದಾರೆ.
ಸೂಪರ್ ಹಿಟ್ 'ಮಫ್ತಿ' ಚಿತ್ರಕ್ಕೆ ಒಂದೊಳ್ಳೆ ಪ್ರೀಕ್ವೆಲ್ ಕಟ್ಟಿಕೊಟ್ಟು ನರ್ತನ್ ಗೆದ್ದಿದ್ದಾರೆ. ಪ್ರೇಕ್ಷಕರಿಂದ ನಿರ್ದೇಶಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಚಿತ್ರದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯೆ ವೈಶಾಲಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಮಿಂಚಿದ್ದಾರೆ. ಕೆಲವೇ ಸನ್ನಿವೇಶಗಳಲ್ಲಿ ನಟಿಸಿದರೂ ತೆರೆಮೇಲೆ ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ.

ಆರಂಭದಲ್ಲಿ ಗುಜ್ಜರಿಯಲ್ಲಿ ಲಾಯರ್ ಆಫೀಸ್ ನಿರ್ಮಿಸಿಕೊಂಡು ರೋಣಪುರದ ಜನರ ರಕ್ಷಣೆಗೆ ನಿಲ್ಲುವ ರಣಗಲ್ ನೋಡಿ ವೈಶಾಲಿ ಇಷ್ಟಪಡುತ್ತಾಳೆ. ಬಳಿಕ ಆತನ ಕ್ರೌರ್ಯ ಕಂಡು ಭಯಗೊಳ್ಳುತ್ತಾಳೆ, ಈತನನ್ನು ಮದುವೆ ಆಗಬೇಕೋ ಬೇಡವೋ ಎನ್ನುವ ಗೊಂದಲಕ್ಕೆ ಬೀಳುತ್ತಾಳೆ. ಆತನಿಗೆ ರಾಮಾಯಣ ಪುಸ್ತಕ ಕೊಟ್ಟು ಮನಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತಾಳೆ.
'ಭೈರತಿ ರಣಗಲ್' ಸಿನಿಮಾ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅರೇ, ಮತ್ತೆ ಅದೇನಾ? ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ರುಕ್ಮಿಣಿ ನಾಯಕಿಯಾಗಿ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಆಕೆಯ ಪಾತ್ರಕ್ಕೆ ಸ್ಯಾಡ್ ಎಂಡಿಂಗ್ ಸಿಗುತ್ತಿದೆ. ಈಗ ರಣಗಲ್ ಜೊತೆಗೂ ವೈಶಾಲಿ ಪ್ರೀತಿ ಯಶಸ್ವಿ ಆಗಿಲ್ಲ ಎನ್ನುವುದು ಈ ಬೇಸರಕ್ಕೆ ಕಾರಣ.

ನಮ್ಮ ರುಕ್ಕು ಯಾರಿಗೂ ಸಿಗಲ್ವಾ? ಮಾಯಾ ಜಿಂಕೆನಾ? ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೆ ಹಿಂದಿನ ಸಿನಿಮಾಗಳ ಉದಾಹರಣೆ ಕೂಡ ಕೊಟ್ಟಿದ್ದಾರೆ. 'ಬಾನ ದಾರಿಯಲಿ'ಯಲ್ಲಿ ಸಿದ್ದಾರ್ಥ್(ಗಣೇಶ್)ಗೆ ಲೀಲಾ(ರುಕ್ಮಿಣಿ) ಸಿಗಲಿಲ್ಲ. 'ಸಪ್ತಸಾಗರದಾಚೆ ಎಲ್ಲೋ'-A ಚಿತ್ರದಲ್ಲಿ ಮನು(ರಕ್ಷಿತ್ ಶೆಟ್ಟಿ)ಗೆ ಪ್ರಿಯಾ(ರುಕ್ಮಿಣಿ) ಜೊತೆಯಾಗಲಿಲ್ಲ.
ಡಾ. ಸೂರಿ ನಿರ್ದೇಶನದ 'ಬಘೀರ' ಚಿತ್ರದಲ್ಲಿ ವೇದಾಂತ್ ಪ್ರಭಾಕರ್(ಶ್ರೀಮುರಳಿ)ಗೆ ಡಾ. ಸ್ನೇಹಾ(ರುಕ್ಮಿಣಿ) ಸಿಗಲಿಲ್ಲ. ಇದೀಗ 'ಭೈರತಿ ರಣಗಲ್' ಚಿತ್ರದ ವಿಚಾರದಲ್ಲೂ ಹೀಗೆ ಆಗಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ರುಕ್ಮಿಣಿಗೆ ತ್ಯಾಗರಾಣಿಯ ಪಟ್ಟ ಸಿಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ತನ್ನ ಸ್ನಿಗ್ಧ ಸೌಂದರ್ಯ ಹಾಗೂ ನಟನೆಯಿಂದ ರುಕ್ಮಿಣಿಗೆ ಭರವಸೆ ಮೂಡಿಸಿದ್ದಾರೆ. ಕನ್ನಡ ಸಿನಿರಸಿಕರ ಮನಗೆದ್ದಿದ್ದಾರೆ. ಅಭಿಮಾನಿಗಳ ಬಳಗ ಸೃಷ್ಟಿಯಾಗಿದೆ. ಹಾಗಾಗಿ ಅಭಿಮಾನಿಗಳ ಪ್ರೀತಿಯಿಂದ ಹೀಗೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಮುಂದೆ ತಮಿಳಿನ 'ಏಸ್' ಎನ್ನುವ ಚಿತ್ರದಲ್ಲಿ ವಿಜಯ್ ಸೇತುಪತಿಗೆ ನಾಯಕಿಯಾಗಿ ರುಕ್ಮಿಣಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಕೂಡ ಹೀಗೆ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಇನ್ನು ಒಂದೇ 15 ದಿನಗಳ ಅಂತರದಲ್ಲಿ ರುಕ್ಮಿಣಿ ನಟಿಸಿದ 3 ಸಿನಿಮಾಗಳು ತೆರೆಗೆ ಬಂದಿದೆ. ಅಕ್ಟೋಬರ್ 30ಕ್ಕೆ ಬಘೀರ, ನವೆಂಬರ್ 8ಕ್ಕೆ ತೆಲುಗಿನ 'ಅಪುಡೋ ಇಪುಡೋ ಎಪುಡೋ' ಇದೀಗ ನವೆಂಬರ್ 15ಕ್ಕೆ 'ಭೈರತಿ ರಣಗಲ್' ಎಂಟ್ರಿ ಆಗಿದೆ.
ಬೆಂಗಳೂರಿನಲ್ಲೇ ಓದಿ ಬೆಳೆದ ರುಕ್ಮಿಣಿ ವಸಂತ್ ಮೊದಲಿಗೆ 'ಬೀರ್‌ಬಲ್' ಚಿತ್ರದಲ್ಲಿ ನಟಿಸಿದ್ದರು. ಶ್ರೀನಿ ನಿರ್ದೇಶಿಸಿ ನಟಿಸಿದ್ದ ಚಿತ್ರದಲ್ಲಿ ಮಿಂಚಿ ಮೋಡಿ ಮಾಡಿದ್ದರು. ಲಾಯರ್ ಮಹೇಶ್ ದಾಸ್(ಶ್ರೀನಿ) ಪ್ರೇಯಸಿ ಜಾಹ್ನವಿ ಆಗಿ ಗಮನ ಸೆಳೆದಿದ್ದರು. ಮುಂದೆ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ರುಕ್ಮಿಣಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್- ಪ್ರಶಾಂತ್ ನೀಲ್ ಜೋಡಿ ಚಿತ್ರಕ್ಕೂ ನಾಯಕಿ ಆಗುವ ನಿರೀಕ್ಷೆ ಇದೆ.


Click it and Unblock the Notifications











