ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕಣ ಕಾವೇರುತ್ತಿದೆ. ಸಿನಿಮಾ ಕಲಾವಿದರನ್ನು ಪ್ರಚಾರಕ್ಕೆ ಕರೆತರುವ ಪ್ರಯತ್ನ ಶುರುವಾಗಿದೆ. ಈಗಾಗಲೇ ನಟ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಸ್ಪರ್ಧಿಸಿ ತಮ್ಮ ಪತ್ನಿ ಗೀತಾ ಪರ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಮತಯಾಚನೆ ಆರಂಭಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಇದೇ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸಿದ್ದರು. ಇಬ್ಬರ ಬೆಂಬಲದಿಂದ ಸುಮಲತಾ ಗೆದ್ದು ಬೀಗಿದ್ದರು. ಆದರೆ ಬದಲಾದ ರಾಜಕೀಯದಲ್ಲಿ ಸುಲಮತಾ ಅಂಬರೀಶ್ ಬಿಜೆಪಿ ಪಕ್ಷ ಸೇರಿದ್ದಾರೆ. ಮಂಡ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್. ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ.

ಮೈತ್ರಿ ಅಭ್ಯರ್ಥಿ ಎದುರು ಕಾಂಗ್ರೆಸ್‌ನಿಂದ ಸ್ಟಾರ್ ಚಂದ್ರು ಅಖಾಡಕ್ಕೆ ಇಳಿದಿದ್ದಾರೆ. ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಮತಬೇಟೆ ಆರಂಭಿಸಿದ್ದಾರೆ. ಮಂಡ್ಯದ ಹುಸ್ಕೂರು ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದರು. ರೋಡ್ ಶೋ ವೇಳೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು. ಇನ್ನು ಭಾಷಣದ ಅರಂಭದಲ್ಲಿ ನಟ ದರ್ಶನ್ ತಾವು ಪ್ರಚಾರ ನಡೆಸುತ್ತಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.
"ನಾನು ಯಾವುದೇ ಪಕ್ಷದ ಪರ ಬರಲ್ಲ. ಬರೋದೂ ಇಲ್ಲ. ಬರೀ ವ್ಯಕ್ತಿಗಳು ಅಷ್ಟೇನೆ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯವನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತೇನೆ. ಮೊದಲೇ ನಮ್ಮ ಉದಯ್ ಗೌಡರು ಹೇಳಿದ್ದರು. ಏನಾದರೂ ನಮ್ಮ ಸುಮಮ್ಮಂಗೆ ಆಗಲಿಲ್ಲ ಅಂದರೆ, ನೀವು ನಮಗೆ ಸಹಾಯ ಮಾಡಬೇಕು ಅಂತ. ಫಸ್ಟ್ ಕಮ್ ಫಸ್ಟ್ ಸರ್ವ್ ಅಂದ್ಮೇಲೆ ಕೇಳಲೇಬೇಕಲ್ವ ಅಣ್ಣ. ನಾನು ಕೇಳಿಕೊಳ್ಳುವುದು ಇಷ್ಟೇ. ಇದೇ ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ಚಂದ್ರು ನಿಂತಿದ್ದಾರೆ. ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.
ರಾಜಕೀಯ ಪಕ್ಕಕ್ಕಿಟ್ಟರೆ ನಟ ದರ್ಶನ್ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಅದಕ್ಕೆ ಕಾರಣ ಅವರ ಎಡಗೈ ಸರ್ಜರಿ. ಇತ್ತೀಚೆಗಷ್ಟೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಅದಕ್ಕಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡಿದ್ದರು. ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದರು. ಇಷ್ಟು ಬೇಗ ಯಾಕೆ ಪ್ರಚಾರಕ್ಕೆ ಬಂದ್ರಿ ಬಾಸ್ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ಧಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆ ದರ್ಶನ್ ಬಲಗೈಗೆ ಪೆಟ್ಟಾಗಿತ್ತು. ಆದರೂ ಪ್ರಚಾರದಲ್ಲಿ ಭಾಗಿ ಆಗಿದ್ದರು. ಈ ಬಾರಿ ಎಡಗೈಗೆ ಸರ್ಜರಿ ಆಗಿದೆ. ಇನ್ನು ಪ್ರಚಾರದ ವೇಳೆ ಅಭಿಮಾನಿಗಳ ನೂಕು ನುಗ್ಗಲು ಇರುತ್ತದೆ. ಕೆಲವರು ಪ್ರೀತಿಯಿಂದ ಕೈ ಕುಲುಕರು ಬರುತ್ತಾರೆ. ಕೈ ಹಿಡಿದು ಎಳೆಯುತ್ತಾರೆ. ಹಾಗಾಗಿ ಪ್ರಚಾರಕ್ಕೆ ಬಂದಿದ್ದು ಸರಿಯಲ್ಲ. ಅವರು ಒಪ್ಪಿದರೂ ಪ್ರಚಾರಕ್ಕೆ ಕರೆಯುವುದು ಸರಿಯಲ್ಲ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
"ನನಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ" ಎಂದು ಹೇಳಿದ ದರ್ಶನ್ ಮಾತು ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 'ಕಾಟೇರ' ಸಕ್ಸಸ್ ಬಳಿಕ ನಟ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಐದಾರು ದಿನಗಳ ಸಣ್ಣ ಶೆಡ್ಯೂಲ್ ಮುಕ್ತಾಯವಾಗಿದೆ. ಸಣ್ಣ ಆಕ್ಷನ್ ಸನ್ನಿವೇಶ ಸೆರೆಹಿಡಿಯಲಾಗಿದೆ. ಫೈಟ್ ಶೂಟಿಂಗ್ ವೇಳೆಗೆ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಪುನರಾರಂಭವಾಗಲಿದೆ.


Click it and Unblock the Notifications











