ದರ್ಶನ್ ನಟನೆಯ 'ಕುರುಕ್ಷೇತ್ರ' ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಗಲೇ ಇಲ್ಲ, ಅಭಿಮಾನಿಗಳಿಗೆ ನಿರಾಸೆ
ಪ್ರತಿ ಬಾರಿ ಯಾವುದೇ ಪ್ರಶಸ್ತಿ ಘೋಷಣೆ ಆದಾಗ ಕೆಲವರಿಗೆ ನಿರಾಸೆ ಆಗುತ್ತಿದೆ. ಕೆಲವೊಮ್ಮೆ ಬಹಿರಂಗವಾಗಿಯೇ ಬೇಸರ ಹಾಕುವುದನ್ನು ನೋಡಿದ್ದೇವೆ. ಚಿತ್ರರಂಗದಲ್ಲಿ ಕೂಡ ಇದು ಆಗಾಗ್ಗೆ ನಡೆಯುತ್ತಿರುತ್ತದೆ. ಸದ್ಯ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ.
ಆ ವರ್ಷ ತೆರೆಗೆ ಬಂದ 172ಕ್ಕೂ ಅಧಿಕ ಸಿನಿಮಾಗಳನ್ನು ವೀಕ್ಷಿಸಿ ತೀರ್ಪುಗಾರರು 18ಕ್ಕೂ ಅಧಿಕ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಅದೇ ವರ್ಷ ದರ್ಶನ್ ನಟಿಸಿದ್ದ 'ಕುರುಕ್ಷೇತ್ರ' ಚಿತ್ರ ಕೂಡ ಬಿಡುಗಡೆ ಆಗಿತ್ತು. ಆದರೆ ಆ ಚಿತ್ರಕ್ಕೆ ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಸಿಗದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಾಗಣ್ಣ ನಿರ್ದೇಶನದ ಈ ಪೌರಾಣಿಕ ಕಥಾಹಂದರದ ಚಿತ್ರದಲ್ಲಿ ದುರ್ಯೋದನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದರು.

'ಕುರುಕ್ಷೇತ್ರ' ಚಿತ್ರವನ್ನು ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡಿದ್ದರು. 3ಡೀ ಹಾಗೂ 2ಡಿಯಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಕರ್ಣನಾಗಿ ಅರ್ಜುನ್ ಸರ್ಜಾ, ಶ್ರೀಕೃಷ್ಣನಾಗಿ ರವಿಚಂದ್ರನ್, ಅರ್ಜುನನಾಗಿ ಸೋನುಸೂದ್, ಭೀಮನಾಗಿ ದ್ಯಾನಿಶ್ ಸೇಠ್, ಅಭಿಮನ್ಯು ಆಗಿ ನಿಖಿಲ್, ಶಕುನಿಯಾಗಿ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಬಹಳ ವರ್ಷಗಳ ಬಳಿಕ ಕನ್ನಡದಲ್ಲಿ ಮೂಡಿ ಬಂದಿದ್ದ ಪೌರಾಣಿಕ ಸಿನಿಮಾ ಇದು. ಸುಯೋಧನನಾಗಿ ದರ್ಶನ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಜಿ. ಕೆ ಭಾರವಿ ಚಿತ್ರಕಥೆ, ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದಿದ್ದರು. ವಿ. ಹರಿಕೃಷ್ಣ ಸಂಗೀತ 'ಕುರುಕ್ಷೇತ್ರ' ಚಿತ್ರಕ್ಕಿತ್ತು. ಆದರೆ ಯಾವುದೇ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಗೆ ಚಿತ್ರವನ್ನು ಪರಿಗಣಿಸಲಿಲ್ಲವೇ? ಅಥವಾ ಪ್ರಶಸ್ತಿ ಕೊಡದೇ ಇರಲು ಬೇರೆ ಏನಾದರೂ ಕಾರಣ ಇದ್ಯಾ ಎನ್ನುವ ಚರ್ಚೆ ಶುರುವಾಗಿದೆ. ಪ್ರಶಸ್ತಿಗಾಗಿ 180 ಚಿತ್ರಗಳು ಅರ್ಜಿ ಸಲ್ಲಿದಿದ್ದವು. 'ಕುರುಕ್ಷೇತ್ರ' ಚಿತ್ರತಂಡ ಅರ್ಜಿ ಸಲ್ಲಿಸಿರಲಿಲ್ಲವೇ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.

180 ಚಿತ್ರಗಳ ಪೈಕಿ 8 ಚಿತ್ರಗಳು ನಿಯಮಾನಸಾರ ಇರಲಿಲ್ಲ ಎಂದು ಕೈಬಿಡಲಾಗಿತ್ತು. ಇನ್ನುಳಿದ 172 ಚಿತ್ರಗಳನ್ನು ವೀಕ್ಷಿಸಿ ವಿಜೇತರನ್ನು ಘೋಷಿಸಿದ್ದಾರೆ. ಆ 8 ಚಿತ್ರಗಳಲ್ಲಿ 'ಕುರುಕ್ಷೇತ್ರ' ಚಿತ್ರ ಕೂಡ ಇದ್ಯಾ? ಎನ್ನುವುದು ಗೊತ್ತಿಲ್ಲ. ಒಟ್ಟಾರೆ 'ಕುರುಕ್ಷೇತ್ರ' ಚಿತ್ರಕ್ಕೆ ಯಾವುದೇ ಪ್ರಶಸ್ತಿ ಬರದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ನಟ ದರ್ಶನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಬೇಕಿತ್ತು ಎಂದು ಕೆಲ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ವಿಜೇತರನ್ನು ಆಯ್ಕೆ ಮಾಡುವಲ್ಲಿ ರಾಜಕೀಯ ನಡೀತಾ? ಎನ್ನುವ ಊಹಾಪೋಹ ಕೆಲವರನ್ನು ಕಾಡುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದ್ದು ಗೊತ್ತೇಯಿದೆ. ಇನ್ನು ಗಂಭೀರ ಪ್ರಕರಣಗಳಲ್ಲಿ ನಿರ್ಮಾಪಕ, ಮಾಜಿ ಸಚಿವ ಮುನಿರತ್ನ ಹೆಸರು ಕೇಳಿಬಂದಿದೆ. ಇದೇ ಕಾರಣಕ್ಕೆ 'ಕುರುಕ್ಷೇತ್ರ' ಚಿತ್ರಕ್ಕೆ ಯಾವುದೇ ಪ್ರಶಸ್ತಿ ನೀಡಲು ಹಿಂದೇಟು ಹಾಕಿದ್ರಾ? ಎನ್ನುವ ಅನುಮಾನ ಕೆಲವರದ್ದು.
ಮೂರು ಅತ್ಯುತ್ತಮ ಸಿನಿಮಾ ಪ್ರಶಸ್ತಿ, ಒಂದು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ರಾಜ್ಯ ಪ್ರಶಸ್ತಿ ಕೂಡ ಘೋಷಣೆ ಆಗಿದೆ. ಈ ವಿಭಾಗಗಳಲ್ಲಿ ಕೂಡ ತೀರ್ಪುಗಾರರು 'ಕುರುಕ್ಷೇತ್ರ' ಚಿತ್ರವನ್ನು ಪರಿಗಣಿಸಲಿಲ್ಲವೇ? ಅಥವಾ ನಿಜಕ್ಕೂ ವಿಜೇತರ ಆಯ್ಕೆಯಲ್ಲಿ ರಾಜಕೀಯ ನಡೀತಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
ದರ್ಶನ್ ನಟನೆಯ 'ಯಜಮಾನ' ಚಿತ್ರಕ್ಕೆ ಒಂದು ಪ್ರಶಸ್ತಿ ಸಿಕ್ಕಿದೆ. ವಿ. ಹರಿಕೃಷ್ಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕನ ಪ್ರಶಸ್ತಿ ಸಿಕ್ಕಿದೆ. ದರ್ಶನ್ ಅಭಿನಯದ 'ಯಜಮಾನ' ಚಿತ್ರವನ್ನು ಪರಿಗಣಿಸಿ ಪ್ರಶಸ್ತಿ ಕೊಡುವುದಾದರೆ 'ಕುರುಕ್ಷೇತ್ರ' ಚಿತ್ರಕ್ಕೆ ಯಾಕಿಲ್ಲ? ಎನ್ನುವುದು ಮತ್ತೆ ಕೆಲವರ ಪ್ರಶ್ನೆಯಾಗಿದೆ.


Click it and Unblock the Notifications











