ನಟಿ ರುಕ್ಮಿಣಿ ವಸಂತ್‌ಗೆ ಕಪಾಳಮೋಕ್ಷ!; ಫ್ಯಾನ್ಸ್ ಬೇಸರ
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್. ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ತೆಲುಗು ಚಿತ್ರರಂಗಕ್ಕೂ ಅಡಿ ಇಡಲಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಜೊತೆ 'ಭೈರತಿ ರಣಗಲ್' ಹಾಗೂ ಶ್ರೀಮುರಳಿ' ಜೋಡಿಯಾಗಿ 'ಬಘೀರ' ಚಿತ್ರದಲ್ಲಿ ಮಿಂಚಿದ್ದಾರೆ.
ಶ್ರೀನಿ ನಿರ್ದೇಶಿಸಿ ನಟಿಸಿದ 'ಬೀರ್‌ಬಲ್' ಚಿತ್ರದಲ್ಲಿ ರುಕ್ಮಿಣಿ ಮೊದಲಿಗೆ ನಟಿಸಿದ್ದರು. 'ಸಪ್ತ ಸಾಗರದಾಚೆ ಎಲ್ಲೋ' ಸರಣಿ ಚಿತ್ರಗಳಲ್ಲಿ ಆಕೆಯ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಫಿಲ್ಮ್‌ಫೇರ್, ಐಫಾ ಪ್ರಶಸ್ತಿಗಳು ಆಕೆಯ ಮುಡಿಗೇರಿದೆ. ಸದ್ಯ ಸೌತ್ ಸಿನಿದುನಿಯಾದಲ್ಲಿ ರುಕ್ಮಿಣಿ ಕ್ರೇಜ್ ಜೋರಾಗಿದೆ. ನಿಧಾನವಾಗಿ ಆಕೆ ತನ್ನ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಅಂದ ಹಾಗೂ ಅಭಿನಯದಿಂದ ಮೋಡಿ ಮಾಡಿರುವ ರುಕ್ಮಿಣಿ ಕನ್ನಡ ಚಿತ್ರರಂಗದ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ವಾರವೇ 'ಬಘೀರ' ಚಿತ್ರ ತೆರೆಗೆ ಬರಲಿದೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್, ಗರುಡಾ ರಾಮ್, ಅಚ್ಯುತ್ ಕುಮಾರ್, ಸುಧಾರಾಣಿ, ರಂಗಾಯಣ ರಘು ತಾರಗಣದಲ್ಲಿದ್ದಾರೆ.
ಆಕ್ಷನ್ ಎಂಟರ್‌ಟೈನರ್ 'ಬಘೀರ' ಚಿತ್ರದಲ್ಲಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಶ್ರೀಮುರಳಿ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ಅದರ ಝಲಕ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಅದ್ಧೂರಿ ಮೇಕಿಂಗ್ ಹಾಗೂ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸನ್ನಿವೇಶಗಳಿಂದ 'ಬಘೀರ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ. ಅಜಿನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
'ಬಘೀರ' ಚಿತ್ರದಲ್ಲಿ ರುಕ್ಮಿಣಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ಆಕೆಯ ಕೆನ್ನೆಗೆ ಬಾರಿಸುವ ಸನ್ನಿವೇಶವೂ ಇದೆ. ಸದ್ಯ ಟ್ರೈಲರ್‌ನಲ್ಲಿ ಕೂಡ ಇದನ್ನು ನೋಡಬಹುದು. ನಿಜವಾಗಿಯೂ ಚಿತ್ರೀಕರಣದ ವೇಳೆ ಆಕೆ ಹೊಡೆದಿಲ್ಲ, ಆದರೆ ಅಷ್ಟು ನೈಜವಾಗಿ ಆ ಸನ್ನಿವೇಶ ಮೂಡಿ ಬಂದಿದೆ. ಇದೇ ಸೀನ್ ಬಗ್ಗೆ ರುಕ್ಮಿಣಿ ವಸಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಯ್ಯೋ ಪಾಪ ಯಾಕೆ ರುಕ್ಕುಗೆ ಹೀಗೆ ಹೊಡೆದುಬಿಟ್ರಿ ಶ್ರೀಮುರಳಿ? ಎಂದು ಕೇಳುತ್ತಿದ್ದಾರೆ.
ಸದ್ಯ ಆ ಸನ್ನಿವೇಶದ ವೀಡಿಯೋ ಕ್ಲಿಪ್ ವೈರಲ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ರುಕ್ಮಿಣಿಗೆ ನ್ಯಾಯಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುವುದು ವೈರಲ್ ಆಗ್ತಿದೆ. ಎಕ್ಸ್ ವೇದಿಕೆಯಲ್ಲಿ ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಪೋಸ್ಟ್ ಮಾಡಿದ್ದಾರೆ. ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿರುವ ಫೋಟೊ ಎಡಿಟ್ ಮಾಡಿ 'ರುಕ್ಮಿಣಿಗೆ ನ್ಯಾಯ ಬೇಕು' ಎಂದು ಅಭಿಮಾನಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗ್ತಿದೆ.
ಹಾಲಿವುಡ್ ಬ್ಯಾಟ್‌ಮನ್ ಸಿನಿಮಾ ನೆನಪಿಸುವಂತೆ 'ಬಘೀರ' ಸಿನಿಮಾ ಮೂಡಿ ಬರ್ತಿದೆ. ಪೊಲೀಸ್ ಆಫೀಸರ್ ವೇದಾಂತ್ ಆಗಿ ಶ್ರೀಮುರಳಿ ಅಬ್ಬರಿಸಿದ್ದಾರೆ. ಆದರೆ ಆತ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು, ದುಷ್ಟರಿಗೆ ಶಿಕ್ಷೆ ಕೊಡಲು ಮುಸುಕುಧಾರಿಯಾಗಿ ಅವತಾರ ತಾಳುವುದನ್ನು ನೋಡಬಹುದು.
'ಬಘೀರ' ಚಿತ್ರಕ್ಕಾಗಿ ದೇಹ ದಂಡಿಸಿ ಶ್ರೀಮುರಳಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕಥೆ ಎನ್ನುವ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರದಿಂದ ರುಕ್ಮಿಣಿಗೂ ಒಳ್ಳೆ ಬ್ರೇಕ್ ಸಿಗುವ ನಿರೀಕ್ಷೆಯಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಮಾತ್ರ ಸದ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಿಂದಿ ಪ್ರೇಕ್ಷಕರು ಕೂಡ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.


Click it and Unblock the Notifications











