'ಸಲಗ', 'ಕೋಟಿಗೊಬ್ಬ 3' ಸಿನಿಮಾಗಳಿಗೆ ಸಂಭ್ರಮದ ಸ್ವಾಗತ
ಸುದೀಪ್ ನಟನೆಯ 'ಕೋಟಿಗೊಬ್ಬ 3' ಮತ್ತು ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ 'ಸಲಗ' ಸಿನಿಮಾ ಇಂದು ಬಿಡುಗಡೆ ಆಗಿದೆ. ಕೊರೊನಾ ಎರಡನೇ ಅಲೆಯ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಎರಡು ದೊಡ್ಡ ಸಿನಿಮಾಗಳು ಇವಾಗಿದ್ದು, ಎರಡೂ ಸಿನಿಮಾಕ್ಕೆ ಅಭಿಮಾನಿಗಳು ಸಂಭ್ರಮದ ಸ್ವಾಗತ ಬಯಸಿದ್ದಾರೆ.
ಹಲವೆಡೆ 'ಕೋಟಿಗೊಬ್ಬ 3' ಹಾಗೂ 'ಸಲಗ' ಸಿನಿಮಾದ ಫ್ಯಾನ್ಸ್ ಶೋ, ಬೆಳ್ಳಂಬೆಳಿಗ್ಗೆ ಶೋಗಳನ್ನು ಹಾಕಲಾಗಿದ್ದು, ಸುದೀಪ್ ಹಾಗೂ ದುನಿಯಾ ವಿಜಯ್ ಅಭಿಮಾನಿಗಳು ಬೆಳಿಗ್ಗೆ 5 ಗಂಟೆಯಿಂದಲೇ ಚಿತ್ರಮಂದಿರಗಳ ಮುಂದೆ ನಿಂತು ಕಾದು ಸಿನಿಮಾ ವೀಕ್ಷಿಸಲು ತೆರಳಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಇನ್ನೂ ಕೆಲವೆಡೆ, ಕೆಲವು ಚಿತ್ರಮಂದಿಗಳಲ್ಲಿ 'ಕೋಟಿಗೊಬ್ಬ 3' ಸಿನಿಮಾದ ಬೆಳಿಗಿನ ಶೋ ರದ್ದಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಬೆಂಗಳೂರಿನ ಪ್ರಸನ್ನ, ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿದ್ದ ಬೆಳ್ಳಂಬೆಳಿಗ್ಗೆ ಶೋ ರದ್ದಾಗಿದೆ. 'ಸಲಗ' ಸಿನಿಮಾ ಅರ್ಲಿ ಮಾರ್ನಿಂಗ್ ಶೋಗಳು ರದ್ದಾದ ಬಗ್ಗೆ ವರದಿ ಇಲ್ಲ.
ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸುದೀಪ್, ದುನಿಯಾ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್‌ಗಳನ್ನು ನಿಲ್ಲಿಸಿ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಕೊರೊನಾ ಎರಡನೇ ಅಲೆಯ ಬಳಿಕ ನಂತರ ಜನ ಚಿತ್ರಮಂದಿರಗಳಿಗೆ ಬರುತ್ತಾರೊ ಇಲ್ಲವೊ ಎಂಬ ಆತಂದಲ್ಲಿದ್ದ ನಿರ್ಮಾಪಕರ ಆತಂಕ ಮಂಜಿನಂತೆ ಕರಗಿದೆ. ಬೆಂಗಳೂರಿನ ಬಹುತೇಕ ಎಲ್ಲ ಚಿತ್ರಮಂದಿಗಳ ಮುಂದೆಯೂ ಜನ ಜಾತ್ರೆಯೇ ನಡೆದಿದೆ.

ಬೆಂಗಳೂರಿನಲ್ಲಿ ಕೋಟಿಗೊಬ್ಬ ಸಿನಿಮಾದ 307 ಶೋಗಳು ಮೊದಲ ದಿನ ಪ್ರದರ್ಶನಗೊಳ್ಳಲಿವೆ. 'ಸಲಗ' ಸಿನಿಮಾದ 233 ಶೋಗಳು ಪ್ರದರ್ಶನಗೊಳ್ಳಲಿವೆ. ಮೈಸೂರಿನಲ್ಲಿ ಮೊದಲ ದಿನ 'ಕೋಟಿಗೊಬ್ಬ 3' ಸಿನಿಮಾದ ಮೂವತ್ತು ಶೋ ಪ್ರದರ್ಶನಗೊಳ್ಳಲಿದೆ. 'ಸಲಗ' ಸಿನಿಮಾದ 27 ಶೋ ಪ್ರದರ್ಶನಗೊಳ್ಳಲಿದೆ. ಮೈಸೂರಿನಲ್ಲಿ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಚಿತ್ರಪ್ರದರ್ಶನ ನಿಲ್ಲಿಸಿವೆ ಹಾಗಾಗಿ ಮೈಸೂರಿನಲ್ಲಿ ಹೆಚ್ಚು ಪ್ರದರ್ಶನಗಳು ಇಲ್ಲ. ಇಂದಿನ ಶೋ 6 ಗಂಟೆಗೆ ಮುಗಿಯಲಿದೆ. ಕೋವಿಡ್ ನಿಯಮಾವಳಿಗಳು ಇರುವ ಕಾರಣ ಬೆಂಗಳೂರು, ಮೈಸೂರು ಹಾಗೂ ಇನ್ನೂ ಕೆಲವು ಜಿಲ್ಲೆಗಳಲ್ಲಿ ರಾತ್ರಿ 8 ರ ಶೋ ಪ್ರದರ್ಶನ ಮಾಡುವಂತಿಲ್ಲ.
ಬೆಂಗಳೂರು ಒಂದರಲ್ಲಿಯೇ 'ಕೋಟಿಗೊಬ್ಬ 3' ಸಿನಿಮಾದ 18 ಅರ್ಲಿ ಮಾರ್ನಿಂಗ್ ಶೋ ಆಯೋಜಿಸಲಾಗಿತ್ತು. 'ಸಲಗ' ಸಿನಿಮಾದ 13 ಅರ್ಲಿ ಮಾರ್ನಿಂಗ್ ಶೋ ಆಯೋಜಿಸಲಾಗಿದೆ. ಅರ್ಲಿ ಮಾರ್ನಿಂಗ್ ಶೋಗಳು ಪ್ರಸ್ತುತ ನಡೆಯುತ್ತಿದ್ದು, ಇನ್ನೊಂದು ಗಂಟೆಯಲ್ಲಿ ಸಿನಿಮಾದ ಮೊದಲ ಅಭಿಪ್ರಾಯಗಳು ಹೊರಗೆ ಬರಲಿವೆ.


Click it and Unblock the Notifications











