ಮಂಗಳೂರಿಗೆ ಬಂದ ಮಿಸ್ ಇಂಡಿಯಾ: ಮಿಸ್ ವರ್ಲ್ಡ್‌ಗೆ ತಯಾರಿ ಜಾರಿ
ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಸಿನಿ ಶೆಟ್ಟಿ ಮಿಸ್ ಇಂಡಿಯಾ ಆದ ಬಳಿಕ ಮೊದಲ ಬಾರಿಗೆ ತನ್ನ ತವರು ಊರು ಮಂಗಳೂರಿಗೆ ಆಗಮಿಸಿದ್ದಾರೆ. ಅಪ್ಪಟ ತುಳುನಾಡಿನ ಬಂಟ ಮನೆತನ ಹೆಣ್ಣಮಗಳ ರೀತಿ ಸೀರೆಯನ್ನುಟ್ಟು ಹಣೆಗೆ ತಿಲಕವನ್ನಿಟ್ಟು, ಲಕ್ಷ್ಮಿ ಪದಕವಿರುವ ಕೈಗೆ ಬಳೆ ಮತ್ತು ಕಿವಿಯೋಲೆ ಧರಿಸಿ ಮಿಂಚಿದ ಸಿನಿ ಶೆಟ್ಟಿ ಎಲ್ಲರ ಮನಸೂರೆಗೊಳಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ ದಲ್ಲಿ ಸಿನಿಶೆಟ್ಟಿಗೆ ಸಿನಿಶೆಟ್ಟಿ ಕುಟುಂಬಿಕರು,ಸ್ನೇಹಿತರು ಅದ್ಧೂರಿ ಸ್ವಾಗತ ಕೋರಿದ್ದು,ಮಿಸ್ ಇಂಡಿಯಾ ಆದರೂ ಎಲ್ಲರ ಜೊತೆ ಸರಳವಾಗಿ ಬೆರೆತು, ಎಲ್ಲರ ಜೊತೆ ಯಾವುದೇ ಹಮ್ಮುಬಿಮ್ಮಿಲ್ಲದೇ ಫೋಟೋ ಗೆ ಫೋಸ್ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಮಂಗಳೂರು ವಿಮಾನನಿಲ್ದಾಣ ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿನಿಶೆಟ್ಟಿ,ಮಿಸ್ ಇಂಡಿಯಾ ಆಗಿರುವ ಬಗ್ಗೆ ಸಂತಸವಿದೆ. ಮುಂದಕ್ಕೆ ಮಿಸ್ ವರ್ಲ್ಡ್ ಆಗುವ ಗುರಿ ಹೊಂದಿದ್ದೇನೆ. ಇದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್ ದೊರಕಿದ್ದಲ್ಲಿ ಬಾಲಿವುಡ್ ನಲ್ಲಿ ನಟಿಸುತ್ತೇನೆ ಎಂದು ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿರುವ ಸಿನಿ ಶೆಟ್ಟಿ ಹೇಳಿದ್ದಾರೆ.

ವಿಮಾನನಿಲ್ದಾಣದಲ್ಲಿ ಸೆಲ್ಫಿ
ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆದ ಬಳಿಕ ಮೊದಲ ಬಾರಿಗೆ ತಾಯ್ನಾಡಿಗೆ ಆಗಮಿಸಿದ ಸಿನಿ ಶೆಟ್ಟಿಯವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಕ್ದಾಣದಲ್ಲಿ ಆಕೆಯ ಕುಟುಂಬ ವರ್ಗ ಆರತಿ ಎತ್ತಿ ಸ್ವಾಗತಿಸಿದರು. ಬಳಿಕ ಕುಟುಂಬ ವರ್ಗ, ಏರ್ಪೋಟ್ ಬಂದಿರುವ ಪ್ರಯಾಣಿಕರು ಆಕೆಯೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ನಾನಿನ್ನೂ ಶಿಕ್ಷಣ ಮುಗಿಸಬೇಕು: ಸಿನಿ ಶೆಟ್ಟಿ
ಈ ವೇಳೆ ಮಾತನಾಡಿದ ಸಿನಿ ಶೆಟ್ಟಿ, ''ನಾನು ಇನ್ನೂ ವಿದ್ಯಾರ್ಥಿನಿ. ಮೊದಲಾಗಿ ನಾನು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಬೇಕು. ಫೆಮಿನಾ ಮಿಸ್ ಇಂಡಿಯಾ ಒಂದು ಬಹುದೊಡ್ಡ ಪ್ರಯಾಣ. ಇದು ನನಗೆ ಜೀವನದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ದೊರಕಿಸಿಕೊಟ್ಟಿತು'' ಎಂದು ಹೇಳಿದರು.

ಮಿಸ್ ವರ್ಲ್ಡ್‌ಗೆ ತಯಾರಿ ನಡೆಸುತ್ತಿದ್ದೇನೆ: ಸಿನಿ ಶೆಟ್ಟಿ
''ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಈ ಸಂದರ್ಭ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್ ಆಗುವ ಉದ್ದೇಶವಿಲ್ಲ. ಐದು ವರ್ಷಗಳ ಕಾಲ ಫೈನಾನ್ಸಿಯಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿ ಹೊಂದಿದ್ದೇನೆ. ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್ ಆಗುವ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭ ಸಿನಿ ಶೆಟ್ಟಿ ಅಪ್ಪಟ ಉಡುಪಿ ತುಳುವಿನಲ್ಲಿ ಮಾತನಾಡಿ, ''ನನ್ನನ್ನು ಈ ರೀತಿಯಲ್ಲಿ ಎಲ್ಲರೂ ಸ್ವಾಗತಿಸಿರುವುದು ಬಹಳ ಖುಷಿ ತಂದಿದೆ. ಮುಂದಕ್ಕೆ ನಾನು ಮಿಸ್ ವರ್ಲ್ಡ್ ಗೆ ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ ನನಗೆ ಎಲ್ಲರ ಆಶೀರ್ವಾದ ಬೇಕು'' ಎಂದು ಹೇಳಿದರು.

ಮುಂಬಯಿಯಿಂದ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಆಗಮನ
ಮಾಡರ್ನ್ ಉಡುಗೆಯಲ್ಲಿ ಮುಂಬಯಿಯಿಂದ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ ಸಿನಿಶೆಟ್ಟಿ, ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಅಪ್ಪಟ ಭಾರತೀಯ ಉಡುಗೆಯಲ್ಲಿ ಆಗಮಿಸಿದರು. ವಿಮಾನ ನಿಲ್ದಾಣ ದ ಒಳಭಾಗದಲ್ಲಿರುವ ಯಕ್ಷಗಾನ ವೇಷಧಾರಿ ಪ್ರತಿಮೆಯ ಮುಂದೆ ಸಿನಿಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡರು. ವಿಮಾನ ನಿಲ್ದಾಣ ದ ಹೊರಗೆ ಕಾದುಕುಳಿತಿದ್ದ ಸಂಬಂಧಿಕರು, ಸ್ನೇಹಿತರ ಜೊತೆಗೂ ಫೋಟೋ, ಸೆಲ್ಫಿಗೆ ಫೋಸ್ ನೀಡಿದರು. ಚೆಂಡೆ ವಾದನ ಮಾಡಿದವರ ಜೊತೆಗೂ ಫೋಟೋಗೆ ಸಿನಿ ಶೆಟ್ಟಿ ಫೋಸ್ ನೀಡಿದ್ದಾರೆ.


Click it and Unblock the Notifications











