ಮೋಜು-ಮಸ್ತಿ-ಕುಸ್ತಿ ; ಗೋವಾದಲ್ಲಿ ಕನ್ನಡ ಚಿತ್ರರಂಗದ ಮರ್ಯಾದೆ ಹರಾಜು ಹಾಕಿದ ನಿರ್ಮಾಪಕರು..!
ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬ ಹಿರಿಯರ ಮಾತು ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ ಕನ್ನಡ ಚಿತ್ರರಂಗ ಕಡು ಕಷ್ಟದಲ್ಲಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ದೊಡ್ಡ ದೊಡ್ಡವರ ಚಿತ್ರಗಳಿಲ್ಲದೇ ಚಿತ್ರಮಂದಿರದ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಅನ್ನುವ ಮಾತು ಇದೆ.
ಇನ್ನೂ ಮಲ್ಟಿಪ್ಲೆಕ್ಸ್‌ನವರ ಧೋರಣೆ, ಅಲ್ಲಿನ ಟಿಕೆಟ್ ದರದ ಬಗ್ಗೆ ಹೆಚ್ಚು ಕಡಿಮೆ ಕಳೆದ ಒಂದು ದಶಕದಿಂದ ಚರ್ಚೆ ನಡೆಯುತ್ತಾನೇ ಇದೆ. ಸ್ಯಾಟ್‌ಲೈಟ್ ಹಕ್ಕುಗಳಿಂದ ಹಿಡಿದು ಓಟಿಟಿವರೆಗೆ ಹತ್ತಾರು ಸಮಸ್ಯೆಗಳಿಂದ ಕನ್ನಡ ಚಿತ್ರರಂಗ ನಲುಗಿ ಹೋಗಿದೆ. ಆದರೆ, ಇದ್ಯಾವುದರ ಪರಿವೆ ಇಲ್ಲದಂತೆ, ನಮ್ಮಲ್ಲಿನ ನಿರ್ಮಾಪಕರು ಆರಾಮಾಗಿ ಕಾಲ ಕಳಿಯುತ್ತಿದ್ದಾರೆ. ಚಿತ್ರರಂಗದ ಅಳಿವು ಉಳಿವಿನ ಯೋಚನೆ ಮಾಡದೇ ಅಮಲಿನಲ್ಲಿ ಕಡಲ ಕಿನಾರೆಯಲ್ಲಿ ವಾಲಾಡಿದ್ದಾರೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ

ಹೌದು, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನ ಗಂಭೀರವಾಗಿ ಚರ್ಚೆ ಮಾಡಲು, ಹೆಚ್ಚು ಕಡಿಮೆ ಕನ್ನಡದ 40 ನಿರ್ಮಾಪಕರು ನಿನ್ನೆ ಗೋವಾ ಕಡೆ ಹೋಗಿದ್ದರು. ಕಡಲ ಕಿನಾರೆಯ ಬಳಿ ಸುತ್ತಾಡಿ ಅಲ್ಲಿನ ರೆಸಾರ್ಟ್ ನಲ್ಲಿ ಕಾಲವನ್ನೂ ಕಳೆದರು. ಆದರೆ ಈ ಸಮಯದಲ್ಲಿ.. ಅದೇನಾಯ್ತೋ ಗೊತ್ತಿಲ್ಲ. ನಿರ್ಮಾಪಕ ಎ ಗಣೇಶ್, ರಥಾವರ ಮಂಜುನಾಥ್ ಮತ್ತು ಸತೀಶ್ ಆರ್ಯ ಅಲ್ಲಿಯೇ ರಂಪ ರಾಮಾಯಣ ಮಾಡಿಕೊಂಡಿದ್ದಾರೆ. ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಅನ್ನುವುದು ಸದ್ಯದ ಬ್ರೇಕಿಂಗ್ ನ್ಯೂಸು.
ಸದ್ಯಕ್ಕೆ ಪಾಂಡುರಂಗ ವಿಠ್ಠಲ, ದಂಡಂ ದಶಗುಣಂ, ಯುಗಾದಿ, ಮಿಸ್ಟರ್ ಪೈಂಟರ್ ನಂತಹ ಅತ್ಯದ್ಭುತ- ಅತ್ಯಮೋಘ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ನಿರ್ಮಾಪಕ ಎ.ಗಣೇಶ್ ಅವರ ತಲೆಗೆ ಈ ಗಲಾಟೆಯಲ್ಲಿ ಪೆಟ್ಟಾಗಿದೆ ಎಂಬ ಸುದ್ದಿ ಇದೆ. ವಾದ-ವಿವಾದ-ಹೊಡೆದಾಟ-ಬಡೆದಾಟದ ನಂತರ ಹೋಗುವಾಗ ಬಸ್ಸಿನಲ್ಲಿ ತೆರಳಿದ್ದ ನಿರ್ಮಾಪಕ ಮಂಜುನಾಥ್ ಫ್ಲೈಟ್ ನಲ್ಲಿ ವಾಪಸ್ಸಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಉಳಿದಂತೆ ಗೋವಾದಲ್ಲಿ ಕನ್ನಡ ಚಿತ್ರ ನಿರ್ಮಾಪಕರು ಮಾಡಿದ ಈ ಸಾಧನೆಯ ಹಾದಿಗೆ ಕಾರಣ ಏನು ಅನ್ನುವುದು ಇನ್ನೂ ಗೊತ್ತಾಗಬೇಕಿದೆ. ಆರೋಪ-ಪ್ರತ್ಯಾರೋಪದ ಸರಣಿ ಇನ್ನೂ ಆರಂಭವಾಗಬೇಕಿದೆ. ಇನ್ನೂ ಈ ಪ್ರಕರಣಕ್ಕೆ ಸಾಕ್ಷಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಎನ್.ಎಂ.ಸುರೇಶ್ ತಮ್ಮ ಆಪ್ತರಾದ ಉಮೇಶ್ ಬಣಕಾರ್, ಆಸ್ಕರ್ ಕೃಷ್ಣ, ಭಾಮಾ ಹರೀಶ್, ಭಾಮಾ ಗಿರೀಶ್, ಟೇಶಿ ವೆಂಕಟೇಶ್ ಮತ್ತು ಮುಂತಾದ ಸದಸ್ಯರು ಮತ್ತು ಪದಾಧಿಕಾರಿಗಳ ಜೊತೆ ನಾಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಒಟ್ನಲ್ಲಿ ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ. ಹಂಗಾಯ್ತು ಕನ್ನಡ ಚಿತ್ರರಂಗದ ಪರಿಸ್ಥಿತಿ


Click it and Unblock the Notifications











