'ಟಾಕ್ಸಿಕ್' ಚಿತ್ರದಲ್ಲಿ ಅಮೇರಿಕನ್ ನಟ; ವಿಶೇಷವಾಗಿ ಆತನನ್ನು ಸ್ವಾಗತಿಸಿದ ತಂಡ
ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಮುಂದುವರೆದಿದೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಹಾಲಿವುಡ್‌ನ ಇಬ್ಬರು ತಂತ್ರಜ್ಞರು ತಂಡ ಸೇರಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ನಟನನ್ನು ಚಿತ್ರತಂಡ ಸ್ವಾಗತಿಸಿದೆ.
ಕಳೆದ 4 ದಿನಗಳಿಂದ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಲಾಗಿದೆ. ಅಲ್ಲೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಶುರುವಾಗಿದೆ. ಯಶ್ ಖಡಕ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿಯಾಗಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನುವ ಗುಸುಗುಸು ಹಿಂದೆ ಕೇಳಿಬಂದಿತ್ತು. ಬಳಿಕ ಆಕೆ ಆ ಚಿತ್ರದಲ್ಲಿ ನಟಿಸಲ್ಲ. ಬದಲಿಗೆ ನಯನತಾರ ಆ ಪಾತ್ರ ಮಾಡುತ್ತಾರೆ ಎಂದು ಹೇಳಲಾಯಿತು. ಇನ್ನು ನಾಯಕಿಯಾಗಿ ಕೈರಾ ಅದ್ವಾನಿ ನಟಿಸುತ್ತಾರೆ. ಹುಮಾ ಖುರೇಶಿ ಕೂಡ ತಾರಾಗಣದಲ್ಲಿರುತ್ತಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಚಿತ್ರತಂಡ ಈ ಬಗ್ಗೆ ಮೌನ ವಹಿಸಿತ್ತು.
ಇದೀಗ ಅಮೇರಿಕನ್ ನಟ ಅಕ್ಷನ್ ಒಬೆರಾಯ್ 'ಟಾಕ್ಸಿಕ್' ಚಿತ್ರತಂಡ ಸೇರಿಕೊಂಡಿದ್ದಾರೆ. ಖುದ್ದು ಅಕ್ಷಯ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಒಂದು ಕಿಟ್ ನೀಡಿ ತಂಡಕ್ಕೆ ಅಕ್ಷಯ್ ಒಬೆರಾಯ್ ಅವರನ್ನು ಚಿತ್ರತಂಡ ಸ್ವಾಗತಿಸಿದೆ. ಇದನ್ನು ಫೋಟೊ ಸಮೇತ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಅಕ್ಷಯ್ ನಟಿಸಿದ್ದಾರೆ.
ವಿವೇಕ್ ಒಬೆರಾಯ್ ಸಂಬಂಧಿಕನಾದ ಅಕ್ಷಯ್ ಒಬೆರಾಯ್ ಹುಟ್ಟಿ ಬೆಳೆದಿದ್ದು ಅಮೆರಿಕಾದಲ್ಲಿ. ಅಲ್ಲೇ ಓದಿ ಬೆಳೆದ ಅಕ್ಷಯ್ ಬಳಿಕ ಮುಂಬೈನಲ್ಲಿ ನಟನೆಯ ಪಟ್ಟುಗಳನ್ನು ಕಲಿತರು. 'ಅಮೆರಿಕನ್ ಚಾಯ್' ಚಿತ್ರದಲ್ಲಿ ಮೊದಲಿಗೆ ಅವರು ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇದೇ ವರ್ಷ ಬಂದ ಹೃತಿಕ್ ರೋಷನ್ ನಟನೆಯ 'ಫೈಟರ್' ಚಿತ್ರದಲ್ಲಿ ಕೂಡ ಅಕ್ಷಯ್ ಬಣ್ಣ ಹಚ್ಚಿದ್ದರು.

ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಯಶ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಸದ್ಯ ಚಿತ್ರದ ಕೆಲ ಮೇಕಿಂಗ್ ಫೋಟೊ, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಆದರೆ ಈ ರೀತಿ ಯಾವುದೇ ಫೋಟೊ, ವೀಡಿಯೋ ಹಂಚಿಕೊಳ್ಳದಂತೆ ಚಿತ್ರತಂಡ ಮನವಿ ಮಾಡಿದೆ. ಕಾನೂನು ಕ್ರಮದ ಎಚ್ಚರಿಕೆ ಕೂಡ ಕೊಟ್ಟಿದೆ.
ಇನ್ನು 'ಟಾಕ್ಸಿಕ್' ಚಿತ್ರದಲ್ಲಿ ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ ಖಳನಟನಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. 'ವ್ರಾತ್ ಆಫ್ ಮ್ಯಾನ್ ', 'ಇನ್ಫಾರ್ಮರ್' ಸೇರಿ ಕೆಲ ಸಿನಿಮಾಗಳಲ್ಲಿ ಆತ ನಟಿಸಿದ್ದಾನೆ. ಸ್ಟಂಟ್ ಡೈರೆಕ್ಟರ್ ಆಗಿ ಜೆ. ಜೆ ಪೆರ್ರಿ ಹಾಗೂ ಸೆಕೆಂಡ್ ಯೂನಿಟ್ ಡೈರೆಕ್ಟರ್ ಆಗಿ ಸ್ಟೀವನ್ ಗ್ರಿಫಿನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಮೇಕಿಂಗ್ ಹಂತದಲ್ಲೇ 'ಟಾಕ್ಸಿಕ್' ಸಿನಿಮಾ ಭಾರೀ ಸದ್ದು ಮಾಡ್ತಿದೆ.
ಚಿತ್ರದಲ್ಲಿ 60, 70ರ ದಶಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಇನ್ನು ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಅದು ಬಿಟ್ಟು ವಿದೇಶಿ ಭಾಷೆಗಳಲ್ಲಿ ಮುಖ್ಯವಾಗಿ ಯೂರೋಪ್ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತದೆ ಎನ್ನುವ ಚರ್ಚೆ ನಡೆಯುತ್ತಿದೆ. ಹಾಗಾಗಿ ಅಲ್ಲಿ ಪರಿಚಿತರಿರುವ ಕಲಾವಿದರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.


Click it and Unblock the Notifications











