ಫೈಟರ್ ವಿವೇಕ್ ಸಾವಿನ ಪ್ರಕರಣ: ತಲೆಮರೆಸಿಕೊಂಡ ನಿರ್ಮಾಪಕ ಗುರು ದೇಶಪಾಂಡೆ
ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ (ಸಾಹಸ ಕಲಾವಿದ) ವಿವೇಕ್ ಮೃತಪಟ್ಟ ಪ್ರಕರಣ ಸಂಬಂಧ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸಿನಿಮಾ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
Recommended Video
ಈ ಸಂಬಂಧ ನಿರ್ದೇಶಕ ಶಂಕರ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ಮೂವರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ನಿರ್ಮಾಪಕ ಗುರುದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದುವರೆಗೂ ನಿರ್ಮಾಪಕ ಗುರು ದೇಶಪಾಂಡೆ ಯಾವ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
ಲವ್ ಯು ರಚ್ಚು ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣ ಬಿಡದಿಯ ಜೋಗರಪಾಳ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಹೈ ಟೆನ್ಷನ್ ವಿದ್ಯುತ್ ಲೈನ್ ಕೆಳಗೆ ಅನುಮತಿ ಪಡೆಯದೆ ಚಿತ್ರೀಕರಣ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯುತ್ ತಂತಿಗೆ ರೋಪ್ ತಗುಲಿದ ಪರಿಣಾಮ ಈ ದುರಂತ ಸಂಭವಿಸಿದೆ. ಈ ದರ್ಘಟನೆಯಲ್ಲಿ ರಂಜಿತ್ ಎನ್ನುವ ಮತ್ತೋರ್ವ ವ್ಯಕ್ತಿಗೂ ಗಂಭೀರ ಗಾಯಗಳಾಗಿದೆ. ಅವರನ್ನು ಆರ್ ಆರ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಬಗ್ಗೆ ರಂಜಿತ್ ಪ್ರತಿಕ್ರಿಯೆ ನೀಡಿದ್ದು, ದುರಂತದ ಸಂಪೂರ್ಣ ವಿವರ ನೀಡಿದ್ದಾರೆ. ''ಇದು ಕ್ರೇನ್ ಆಪರೇಟರ್ ಅಜಾಗರೂಕತೆಯಿಂದ ಆಗಿರುವ ಘಟನೆ. ಇದರಲ್ಲಿ ಫೈಟ್ ಮಾಸ್ಟರ್ ಆಗಲಿ ಅಥವಾ ಬೇರೆ ಯಾರದ್ದೇ ಅಗಲಿ ತಪ್ಪಿಲ್ಲ. ಕ್ರೇನ್ ಆಪರೇಟರ್ ಅಚಾನಕ್ ಆಗಿ ವೈರ್ ತಗುಲಿಸಿದ ಕಾರಣ ದುರಂತ ನಡೆಯಿತು'' ಎಂದಿದ್ದಾರೆ.
''ನಾನು ಏಳು ವರ್ಷದಿಂದ ಮಾಸ್ಟರ್ ಬಳಿ ಕೆಲಸ ಮಾಡ್ತಿದ್ದೇನೆ. ಅವರು ಈ ರೀತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿಯಿಲ್ಲ. ಶೂಟಿಂಗ್ ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ಆಗ್ತಿತ್ತು. ಟೇಕ್ ಮಾಡೋದಕ್ಕೆ ರಿಹಾರ್ಸಲ್ ಮಾಡ್ತಿದ್ವಿ. ಪಕ್ಕದಲ್ಲೇ ಮಾಸ್ಟರ್ ಹೀರೋ ಅವರದ್ದು ಶೂಟ್ ಮಾಡ್ತಿದ್ರು. ಮೊದಲೇ ಆ ತೋಟದೊಳಗೆ ಕ್ರೇನ್ ಬರಲ್ಲ ಅಂತ ಹೇಳಿದ. ಆಮೇಲೆ ಹೇಗೋ ಒಳಗೆ ಬಂದ. ಮೊದಲು ಒಂದು ಸಲ ಮರ ಟಚ್ ಮಾಡಿದ. ಆಗಲೇ ನಾವು ಎಚ್ಚರಿಸಿದ್ವಿ. ಆದರೆ ಇನ್ನೊಂದು ಅಚಾನಕ್ ಆಗಿ ಹೈಟೆನ್ಷನ್ ವೈರ್ ಟಚ್ ಮಾಡಿದಾಗ ಹೀಗೆ ಆಯಿತು. ಇಲ್ಲಿ ಮಾಸ್ಟರ್‌ನ ಆರೋಪಿ ಮಾಡುವುದು ಸರಿಯಿಲ್ಲ'' ಎಂದು ಹೇಳಿದ್ದಾರೆ.
ಇನ್ನು ವಿವೇಕ್ ಮೃತದೇಹ ಆರ್ ಆರ್ ನಗರದ ಆಸ್ಪತ್ರೆಯಲ್ಲಿದ್ದು, ಇಂದು (ಆಗಸ್ಟ್ 10) ವಿವೇಕ್ ಮರಣೋತ್ತರ ನಡೆಯಲಿದೆ. ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುವುದು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಟ ಅಜಯ್ ರಾವ್ ''ದೃಶ್ಯದ ಚಿತ್ರೀಕರಣದಲ್ಲಿ ನಾನು ಇರಲಿಲ್ಲ. ಆದರೆ ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಇದ್ದೆ. ಜೋರಾಗಿ ಸದ್ದು ಬಂದಾಗಲೇ ಏನೋ ನಡೆದಿದೆ ಎನ್ನುವುದು ಗೊತ್ತಾಗಿದ್ದು. ನಾನು ಸದಾ ಸುರಕ್ಷತೆಗೆ ಮಹತ್ವ ನೀಡುತ್ತೇನೆ. ಇತ್ತೀಚೆಗಷ್ಟೆ ಮೆಟಲ್ ರೋಪ್ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಹಾಗೆ ಪ್ರಶ್ನೆ ಮಾಡಿದ್ದರಿಂದ ನಾನು ಕೆಟ್ಟವನಾಗಿದ್ದೆ. ಹೀಗೆ ಪ್ರಶ್ನೆಗಳನ್ನು ಮಾಡಿದರೆ ಕೆಲಸದಲ್ಲಿ ಮೂಗು ತೂರಿಸುತ್ತಾರೆ ಎಂಬ ನಿಂದನೆ ಅನುಭವಿಸಬೇಕಾಗುತ್ತದೆ'' ಎಂದಿದ್ದಾರೆ.


Click it and Unblock the Notifications











