»   » ಬೇಸಗೆಯಲ್ಲಿ ಕೊಯಿಲಿಗೆ ಬಂದ ಸಿನಿಮಾ ಸುಗ್ಗಿ

ಬೇಸಗೆಯಲ್ಲಿ ಕೊಯಿಲಿಗೆ ಬಂದ ಸಿನಿಮಾ ಸುಗ್ಗಿ

Posted By: Super
Subscribe to Filmibeat Kannada

ಶಾಲಾ ಕಾಲೇಜುಗಳು ಬೇಸಗೆ ರಜೆ ಘೋಷಿಸಿ ಬಾಗಿಲು ಹಾಕುತ್ತಿರುವಂತೆಯೇ, ಸ್ಯಾಂಡಲ್‌ವುಡ್‌ನಲ್ಲಿ ಒಂದೆಡೆ ನಿರ್ಮಾಪಕರ ಚಟುವಟಿಕೆಗಳು ಜೋರಾದರೆ, ಮತ್ತೊಂದೆಡೆ ಸಿನಿಮಾ ಮಂದಿರಗಳು ಹೊಸ ಸಿನಿಮಾ ಬಂದಿದೆ ಓ ಬಾ ಅತಿಥಿ ಎಂದು ಪ್ರೇಕ್ಷಕರತ್ತ ತೋಳು ಬೀಸುತ್ತಿವೆ. ರಜೆಯಲ್ಲಾದರೂ ಮಕ್ಕಳೊಂದಿಗೆ ಮನೆಮಂದಿ ಮನೆ ಬಿಟ್ಟಾರು, ಟೀವಿ ಕಣ್ಣು ಕಿತ್ತು ಸಿನಿಮಾ ಮಂದಿರಗಳಿಗೆ ಬಂದಾರು ಅನ್ನುವುದು ನಿರ್ಮಾಪಕರ ಲೆಕ್ಕಾಚಾರ. ಆ ನಿರೀಕ್ಷೆಯಲ್ಲೇ ಒಂದರ ಹಿಂದೊಂದು ಸಿನಿಮಾಗಳು ತೆರೆಗಪ್ಪಳಿಸಲು ರೆಡಿಯಾಗಿವೆ.

ಗಾಂಧಿನಗರದ ಸಂಪ್ರದಾಯದಂತೆ ವಾರಕ್ಕೆ ಒಂದು ಅಥವಾ ಎರಡು ಸಿನಿಮಾ ತೆರೆಕಾಣುತ್ತದೆ. ಕೆಲವೊಂದು ವಾರ ಹೊಸ ಸಿನಿಮಾ ಇಲ್ಲ ದೆ ಇರುವುದೂ, ಹಳೆಯ ಸಿನಿಮಾಗಳೇ ಮತ್ತೆ ತೆರೆಕಾಣುವುದೂ ಉಂಟು. ಈ ಬೇಸಗೆಯ ಮಟ್ಟಿಗೆ ಹೇಳುವುದಾದರೆ, ಸಿನಿಮಾ ಕೊಯಿಲು ಯಥೇಚ್ಛವಾಗಿದೆ. ಬಡಪಾಯಿ ಪ್ರೇಕ್ಷಕ ಎಷ್ಟನ್ನು ಅರಗಿಸಿಕೊಂಡಾನು ಅನ್ನುವುದು ಅಸಲು ವಿಷಯ. ಅದು ಸುಗ್ಗಿಯ ನಂತರದ ಸಮಾಚಾರ.

ಏಪ್ರಿಲ್‌ ಮೊದಲ ವಾರವೇ, ತೆರೆ ಕಾಣಲಿಕ್ಕೆ ಮೂರು ಸಿನಿಮಾ ಸಿದ್ಧವಾಗಿವೆ. ಗುರುವಾರ (ಏ.5) ರವಿಚಂದ್ರನ್‌, ಪ್ರಕಾಶ್‌ರೈ ಅಭಿನಯದ ಉಸಿರೇ ಸಿನಿಮಾ ತೆರೆಕಾಣಲಿದೆ. ಯಶಸ್ವಿ ಚಿತ್ರಗಳ ನಿರ್ಮಾಪಕನೆಂದೇ ಹೆಸರಾದ ರಾಕ್‌ಲೈನ್‌ ನಿರ್ಮಾಣದ ಈ ಸಿನಿಮಾ ಭಾರೀ ಬಜೆಟ್ಟಿನದು. ರಾಕ್‌ಲೈನ್‌, ರವಿಚಂದ್ರನ್‌ ಕಾಂಬಿನೇಷನ್‌ನ ಉಸಿರೇ ಭಾರೀ ನಿರೀಕ್ಷೆಯ ಚಿತ್ರವೂ ಹೌದು.

ಉಸಿರೇ.. ಮರು ಉಸಿರಿಗೇ (ಶುಕ್ರವಾರ ) ಗುಡ್‌ ಬ್ಯಾಡ್‌ ಅಗ್ಲಿ ಹಾಗೂ ನನ್ನ ಪ್ರೀತಿಯ ಹುಡುಗಿ ಬಿಡುಗಡೆಯಾಗುತ್ತಿವೆ. ಪ್ರಭಾಕರ್‌ ಅವರ ಕೊನೆಯ ಸಿನಿಮಾ ಅನ್ನುವ ಅನುಕಂಪದ ಲಾಭ ಗುಡ್‌ ಬ್ಯಾಡ್‌ ಅಗ್ಲಿಗಿದೆ. ಮೊನ್ನೆಯಷ್ಟೇ ನಿಧನರಾದ ಪ್ರಭಾಕರ್‌ ಅವರ ಬಹುಮುಖ, ಖಯಾಲಿಗಳಿಗೆ ಈ ಸಿನಿಮಾ ಕನ್ನಡಿ ಹಿಡಿದಂತಿದೆ ಅನ್ನುತ್ತಿದೆ ಉದ್ಯಮ. ಅದಕ್ಕೆ ಸರಿಯಾಗಿ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಛಾಯಾಗ್ರಹಣ, ನಿರ್ದೇಶನ, ಈ ಎಲ್ಲಾ ಜವಾಬ್ದಾರಿಗಳನ್ನು ಪ್ರಭಾಕರ್‌ ಹೊತ್ತಿದ್ದಾರೆ. ಆ ಭಾರಕ್ಕೆ ಹೆಗಲು ಕುಸಿದಿದೆಯೋ, ಯಶಸ್ವಿಯಾಗಿ ನಿರ್ವಹಿಸಿದೆಯೋ ಅನ್ನುವುದನ್ನು ತೆರೆಯ ಮೇಲೆಯೇ ಕಾಣಬಹುದು.

ನನ್ನ ಪ್ರೀತಿಯ ಹುಡುಗಿ ವಿಭಿನ್ನ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿರುವ ಸಿನಿಮಾ. ಅಮೆರಿಕ ಅಮೆರಿಕ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್‌ ಅಮೆರಿಕವನ್ನು ಮತ್ತೊಮ್ಮೆ ಮನೆಯಂಗಳಕ್ಕೆ ತಂದಿದ್ದಾರೆ. ಬಯಲು ಸೀಮೆಯ ಹುಡುಗ, ಮಲೆನಾಡಿನ ಹುಡುಗಿ ಅನ್ನುವ ತಮ್ಮ ಕಥೆಯನ್ನೇ ನಾಗತಿಹಳ್ಳಿ ಸಿನಿಮಾ ಆಗಿಸಿದ್ದಾರೆ. ದೀಪಾಲಿ, ಧ್ಯಾನ್‌ ಅನ್ನುವ ಫ್ರೆಶ್‌ ಮುಖಗಳಿವೆ. ಈ ಎಲ್ಲಾ ಕಾರಣಗಳಿಂದಾಗಿ , ಪ್ರೇಕ್ಷಕರು ಪ್ರೀತಿಯ ಹುಡುಗಿಯ ಕಾತರದಲ್ಲಿದ್ದಾರೆ.

ಈ ಭಾರೀ ಬಜೆಟ್ಟಿನ ಸಿನಿಮಾಗಳ ನಂತರ ಸದ್ದಿಲ್ಲದೆ ಸರದಿಯಲ್ಲಿ ನಿಂತಿರುವುದು ಹಾಲು ಸಕ್ಕರೆ ಅನ್ನುವ ಸಿನಿಮಾ. ಈ ಸಿನಿಮಾ ನಿರ್ದೇಶನದ ಮೂಲಕ ಯೋಗೀಶ್‌ ಹುಣಸೂರು ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಅಂದಹಾಗೆ, ಏಪ್ರಿಲ್‌ 13 ರಂದು ತೆರೆ ಕಾಣುತ್ತಿರುವ ಈ ಸಿನಿಮಾದಲ್ಲಿ ಸಂಸದನಾಗಿ ರೂಪಾಂತರ ಹೊಂದಿರುವ ಶಶಿಕುಮಾರ್‌, ನಿದೇಶನಕ್ಕಿಂಥ ನಟನೆಯಲ್ಲೇ ಸುದ್ದಿ ಮಾಡುತ್ತಿರುವ ಎಸ್‌.ನಾರಾಯಣ್‌, ಚಲಾವಣೆಯಲ್ಲಿಲ್ಲದ ದೇವರಾಜ್‌, ದೇವಿ ಮೂದೇವಿ ಖ್ಯಾತಿಯ ಪ್ರೇಮಾ ಮುಂತಾದವರ ಭಾರೀ ತಾರಾಗಣವೇ ಇದೆ. ತಾರಾಗಣದ ಆಕರ್ಷಣೆಯನ್ನೇ ನಿರ್ಮಾಪಕರು ನೆಚ್ಚಿಕೊಂಡಿರುವಂತಿದೆ.

ಯಶಸ್ಸಿನ ಅಲೆಯಲ್ಲೇ ತೇಲುತ್ತಿರುವ ಎಸ್‌.ನಾರಾಯಣ್‌ ನಟನೆ- ನಿರ್ದೇಶನದ ಹೊಸಚಿತ್ರ ಅಂಜಲಿ ಗೀತಾಂಜಲಿ ಏ.20 ರಂದು ತೆರೆ ಕಾಣುತ್ತಿದೆ. ಸಿನಿಮಾದ ನಾಯಕಿ ಮೈನಾ ಮೈನಾ ಎಂದು ಕಾಡಿದ ನನ್ನವಳು ನನ್ನವಳುವಿನ ಪ್ರೇಮಾ. ಅಂಜಲಿ ಗೀತಾಂಜಲಿ ಶೂಟಿಂಗ್‌ನಲ್ಲಿ ಭಾಗವಹಿಸಿದವರು, ನನ್ನವಳು ನನ್ನವಳು - ಭಾಗ 2 ಎಂದು ಅಂಜಲಿಯನ್ನು ಬಣ್ಣಿಸುತ್ತಿರುವುದು ಹೊಗಳಿಕೆಯಾ ತೆಗಳಿಕೆಯಾ ತಿಳಿಯದೆ ನಾರಾಯಣ್‌ಗೆ ಗೊಂದಲಕ್ಕೆ ಸಿಲುಕಿದ್ದಾರೆ. ಭಾಮಾ ಸತ್ಯಭಾಮಾ, ನನ್ನವಳು ನನ್ನವಳು ಈಗ ಅಂಜಲಿ ಗೀತಾಂಜಲಿ, ಅಂದಹಾಗೆ ನಾಯಕಿಯರ ಸೀರೀಸ್‌ನ ನಾರಾಯಣ್‌ ಅವರ ಮುಂದಿನ ಸಿನಿಮಾ ಯಾವುದಿರಬಹುದು ? ಗೀತಾ ಸಂಗೀತಾ ಅನ್ನುತ್ತಾರೆ ನಾರಾಯಣ್‌ ಅಭಿಮಾನಿಯಾಬ್ಬರು.

ಬಾಬು ಹೆಸರಿನವರಿಗೆ ಈಗ ಯಮಗಂಡ ಕಾಲವಿರಬೇಕು . ದಿಗ್ಗಜರು ಸೋಲಿನಿಂದ ಡಿರಾ ಬಾಬು ದಿಕ್ಕೆಟ್ಟವರಂತೆ ಅಜ್ಞಾತವಾಸಕ್ಕೆ ತೆರಳಿದ್ದರೆ, ತಮ್ಮ ಹೊಸ ಸಿನಿಮಾಕ್ಕೆ ಪ್ರೇಕ್ಷಕರು ಥಿಯೇಟರ್‌ ಬರದೆ ತಾವು ಕುರಿಗಳಲ್ಲ ಎಂದು ಸಾಬೀತುಪಡಿಸಿದ್ದರಿಂದ ಸಿಂಗ್‌ ಬಾಬು ಕಂಗಾಲಾಗಿದ್ದಾರೆ. ಇದೇ ಸಾಲಿಗೆ ಮಲಯಾಳಿ ಬಾಬುವೂ ಸೇರುತ್ತಾರೆ. ಲಾಲಿ, ಅಮೃತವರ್ಷಿಣಿಯ ನಂತರ ಹುಡುಕಿಕೊಂಡು ಹೋದರೂ ಯಶಸ್ಸು ಹಾಗೂ ಸ್ಥಳೀಯ ನಿರ್ಮಾಪಕರು ದೂರವಾಗುತ್ತಿರುವುದರಿಂದ, ದಿನೇಶ್‌ಬಾಬು ಈ ಸಾರಿ ತೆಲುಗು ಸಿನಿಮಾರಂಗದ ತಿಮಿಂಗಲ ರಾಮೋಜಿರಾವ್‌ಗೇ ಗಾಳ ಹಾಕಿದ್ದಾರೆ. ಮಲಯಾಳಿ ನಿರ್ದೇಶಕ, ತೆಲುಗು ನಿರ್ಮಾಪಕ ಕಾಂಬಿನೇಷನ್‌ನ ಕನ್ನಡ ಸಿನಿಮಾದ ಹೆಸರು ಚಿತ್ರಾ. ಸಿನಿಮಾ ಸೆಟ್ಟೇರಿದ್ದು ಯಾವಾಗಲೋ ಸುದ್ದಿಯಾಗಿಲ್ಲ . ತೆರೆ ಮಾತ್ರ ಏಪ್ರಿಲ್‌ನಲ್ಲೇ ಅಂತೆ. ದಿನಾಂಕ ನಿಗದಿಯಾಗಿಲ್ಲ . ಥಿಯೇಟರ್‌ ಮಾತ್ರ ಕಲ್ಪನಾ ಎಂದು ಜಾಹೀರಾತುಗಳು ಹೇಳುತ್ತಿವೆ. ಏ.13 ರಂದು ತೆರೆಕಾಣುತ್ತಿರುವ ಹಾಲುಸಕ್ಕರೆ ಕೂಡ ಕಲ್ಪನಾದಲ್ಲೇ ತೆರೆ ಕಾಣುತ್ತಿದೆ. ನಂತರದ ವಾರವೋ, ತದನಂತರದ ವಾರವೋ ಚಿತ್ರ ಬಿಡುಗಡೆ ಆಗುವುದಾದರೆ, ಹಾಲುಸಕ್ಕರೆ ಆಯಸ್ಸು ಎಂಟರಿಂದ ಹದಿನೈದು ದಿನ ಮಾತ್ರ. ಅದು ಬೇಸಗೆ ಬಿಸಿಯ ಅಫಘಾತವಾ?

ಇನ್ನೂ ಒಂದಷ್ಟು ಸಿನಿಮಾಗಳು ಬೇಸಗೆಯಲ್ಲೇ ತೆರೆ ಕಾಣಲಿಕ್ಕೆ ಕೊನೆ ಹಂತದ ಸಿದ್ಧತೆ ನಡೆಸುತ್ತಿವೆ. ಅವುಗಳಲ್ಲಿ ಮುಖ್ಯವಾದುದು ಕುಮಾರಸ್ವಾಮಿ ನಿರ್ದೇಶನದ, ಜಗ್ಗೇಶ್‌ ಅಭಿನಯದ ಜಿತೇಂದ್ರ. ಸೆನ್ಸಾರ್‌ ಅಡಕತ್ತರಿ ಇಲ್ಲದಿದ್ದಲ್ಲಿ ಅದು ಈಗಾಗಲೇ ತೆರೆಕಾಣಬೇಕಿತ್ತು . ಇದಿಷ್ಟು ಹೊಸ ಸಿನಿಮಾಗಳ ಕಥೆಯಾದರೆ, ಹಳೆ ಸಿನಿಮಾಗಳು ಕೂಡ ಮತ್ತೊಮ್ಮೆ ತೆರೆ ಕಾಣಲು ಸಿದ್ಧತೆ ನಡೆಸುತ್ತಿವೆ. ಜೊಳ್ಳೋ ಗಟ್ಟಿಯೋ, ಪ್ರೇಕ್ಷಕನಿಗಂತೂ ಆಯ್ಕೆಯ ಅವಕಾಶ ಧಾರಾಳವಾಗಿದೆ.

ಬೇಸಗೆ ರಜೆ ಕಾರಣವಾಗಿ ಸಿನಿಮಾರಂಗದಲ್ಲಿ ಇಷ್ಟೆಲ್ಲ ಉತ್ಸಾಹ ಕಾಣಿಸಿಕೊಂಡಿದ್ದರೂ, ಈ ಬೇಸಗೆಗೆ ಪುಟ್ಟ, ಪುಟ್ಟಿಯನ್ನು ಯಾವ ಸಿನಿಮಾಕ್ಕೆ ಕರೆದೊಯ್ಯವುದು ಎನ್ನುವ ಸಮಸ್ಯೆ ನಿಮಗೆದುರಾದರೆ, ಉತ್ತರ ಸ್ಯಾಂಡಲ್‌ವುಡ್‌ನಲ್ಲಿಲ್ಲ . ಕೊಸರಿಗಾದರೂ ಒಂದು ಮಕ್ಕಳ ಸಿನಿಮಾ ಮಾರ್ಕೆಟ್‌ನಲ್ಲಿಲ್ಲ . ಅಂದರೆ, ಕನ್ನಡ ಚಿತ್ರೋದ್ಯಮ ಮಕ್ಕಳನ್ನು ಮರೆತಿದೆಯಾ ?

English summary
Brisk activity and new releases in kannada film market, this summer

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada