»   » ಆಸ್ಕರ್‌ ಪ್ರಶಸ್ತಿ ಮನೆಯ ಕದ ತಟ್ಟುತ್ತಿರುವ ಲಗಾನ್‌

ಆಸ್ಕರ್‌ ಪ್ರಶಸ್ತಿ ಮನೆಯ ಕದ ತಟ್ಟುತ್ತಿರುವ ಲಗಾನ್‌

Posted By: Staff
Subscribe to Filmibeat Kannada

ಬೆಸ್ಟ್‌ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ಮಾಣಿಕ್‌ಚಂದ್‌ 47ನೇ ವಾರ್ಷಿಕ ಫಿಲ್ಮ್‌ಫೇರ್‌ನ 7 ಪ್ರಶಸ್ತಿಗಳು ಲಗಾನ್‌ ಬುಟ್ಟಿಗೆ. ಆಸ್ಕರ್‌ ಪ್ರಶಸ್ತಿ ಮನೆಯ ಕದ ತಟ್ಟುತ್ತಿರುವ ಭಾರತೀಯರ ಹೆಮ್ಮೆಯ ಸಿನಿಮಾ ಲಗಾನ್‌ಗೆ ಭಾನುವಾರ ಮುಂಬಯಿಯಲ್ಲಿ ಶಹಬ್ಭಾಸ್‌ ಮೇಲೆ ಶಹಬ್ಬಾಸ್‌.

ಆದರೆ ಪ್ರಶಸ್ತಿ ಸ್ವೀಕರಿಸಲು ಲಗಾನ್‌ ಸಿನಿಮಾ ಕ್ರಿಕೆಟ್‌ ತಂಡದ ನಾಯಕ ಅಮೀರ್‌ ಇರಲಿಲ್ಲ. ಇವರ ಬದಲಿಗೆ ಪ್ರಶಸ್ತಿ ಸ್ವೀಕರಿಸಿದ್ದು ರಾಣಿ ಮುಖರ್ಜಿ. ಎವರ್‌ಗ್ರೀನ್‌ ಸುಂದರಿ ರೇಖಾ ಮಿನುಗುತ್ತಿದ್ದರು. ಅವರ ಪಕ್ಕದಲ್ಲೇ ಪ್ರೀತಿ ಜಿಂಟಾ ಸೆರೆ ಹಿಡಿಯುತ್ತಿದ್ದ ಕೆಮೆರಾಮನ್‌ಗೆ ಬೇಡಪ್ಪಾ ಅನ್ನುತ್ತಿದ್ದರು. ಬಿಗ್‌ ಬಿ ಅಮಿತಾಬ್‌ ಫ್ರೆಂಚ್‌ ಗಡ್ಡದಲ್ಲಿ ನಕ್ಕಾಗ, ಅವರ ಪತ್ನಿ ಜಯಾ ಕೂಡ ನಗುತ್ತಿದ್ದರು. ನಗಿಸಲು ಜಾನಿ ಲಿವರ್‌ ಇದ್ದರು. ನಿರೂಪಣೆಯ ನಡುವೆಯೇ ಒಸಾಮ, ಜಾರ್ಜ್‌ ಬುಷ್‌, ಮ್ಯಾಡ್‌ ಆ್ಯಡ್‌ಗಳನ್ನು ತಂದು ಕಚಗುಳಿ ಇಡಲು ಜಾವೆದ್‌ ಜಾಫ್ರಿ ಹಾಗೂ ಅರ್ಚನಾ ಪೂರಣ್‌ ಸಿಂಗ್‌ ಇದ್ದರು.

ಹಾಡು ಹಸೆ, ಕುಣಿತದ ನಡುವೆ ಪ್ರಶಸ್ತಿಗೆ ಇದಿರು ನೋಡುವವರಲ್ಲಿ ಉಗುರು ಕಡಿವಷ್ಟು ತಲ್ಲಣ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸಿನ ಮೈದಾನದಲ್ಲಿನ ದಿವ್ಯ ವೇದಿಕೆಯಲ್ಲಿ ಬಣ್ಣ ಬಣ್ಣದ ಬೆಳಕು. ಅದ ನೋಡಲು ಕಚಾಖಚಿ ತುಂಬಿದ್ದ ಜನ. ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯಾಳಗೆ ಮುಗಿಸಬೇಕೆಂಬ ಸುಪ್ರಿಂಕೋರ್ಟ್‌ ಆದೇಶಕ್ಕೆ ಬದ್ಧವಾದ ನಿರೂಪಣಾ ನಡೆ. ಚುಟುಕು ಮಾತುಗಳು ಭಾರೀ ಚುರುಕು.

ಪ್ರಶಸ್ತಿ ಪಡೆದವರ ಸಂಕ್ಷಿಪ್ತ ಪಟ್ಟಿ ಹೀಗಿದೆ...

ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿ- ಗುಲ್ಜಾರ್‌
ಸ್ವಿಸ್‌ ಗೌರ್ನ್‌ಮೆಂಟ್‌ನ ವಿಶೇಷ ಪ್ರಶಸ್ತಿ- ಯಶ್‌ ಚೋಪ್ರಾ
ಅತ್ಯುತ್ತಮ ಚಿತ್ರ- ಲಗಾನ್‌
ಒಳ್ಳೆಯ ಕ್ರಿಟಿಕ್ಸ್‌ ಚಿತ್ರ- ದಿಲ್‌ ಚಾಹ್ತಾ ಹೈ
ಭಲೇ ನಿರ್ದೇಶಕ- ಆಶುತೋಷ್‌ ಗೌರೀಕರ್‌ (ಲಗಾನ್‌)
ವೈನಾದ ನಟ- ಅಮೀರ್‌ ಖಾನ್‌ (ಲಗಾನ್‌)
ಅಭಿನಯದಲ್ಲಿ ಮಿಂಚಿದ ನಟಿ- ಕಾಜೋಲ್‌ (ಕಭಿ ಖುಷಿ ಕಭಿ ಗಮ್‌)
ಕ್ರಿಟಿಕ್ಸ್‌ ವಿಭಾಗದ ಅತ್ಯುತ್ತಮ ನಟಿ- ಕರಿಷ್ಮಾ ಕಪೂರ್‌ (ಝುಬೇದಾ)

ಕ್ರಿಟಿಕ್ಸ್‌ ವಿಭಾಗದ ಅತ್ಯುತ್ತಮ ನಟ- ಅಮಿತಾಬ್‌ ಬಚ್ಚನ್‌ (ಅಕ್ಸ್‌)
ಸಿರಿ ಸಾಹಿತ್ಯ- ಜಾವೆದ್‌ ಅಖ್ತರ್‌ (ಲಗಾನ್‌)
ಹಸನಾದ ಸಂಗೀತ- ಎ.ಆರ್‌.ರೆಹಮಾನ್‌ (ಲಗಾನ್‌)
ಚೆನ್ನಾಗಿ ಹಾಡಿದ ಗಾಯಕ- ಉದಿತ್‌ ನಾರಾಯಣ್‌ (ಓ ಮಿಥುವಾ- ಲಗಾನ್‌)
ಮನಸೂರೆಗೊಂಡ ಗಾಯಕಿ- ಅಲ್ಕಾ ಯಾಗ್ನಿಕ್‌ (ಓ ರೆ ಚೋರಿ- ಲಗಾನ್‌)
ಉತ್ತಮ ಪೋಷಕ ನಟಿ- ಜಯಾ ಬಚ್ಚನ್‌ (ಕಭಿ ಖುಷಿ ಕಭಿ ಗಮ್‌)
ಅತ್ಯುತ್ತಮ ಖಳ ನಾಯಕ- ಅಕ್ಷಯ್‌ ಕುಮಾರ್‌ (ಅಜ್‌ನಬಿ)
ಭರವಸೆಯ ಹೊಸ ಮುಖಗಳು- ಬಿಪಾಶ ಬಸು (ಅಜ್‌ನಬಿ), ತುಷಾರ್‌ (ಮುಝೆ ರುಚ್‌ ಕೆಹನಾ ಹೈ)

English summary
Lagaan bags 7 filmfare awards
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada