'ಕೌಂತೇಯ' ಚಿತ್ರದಲ್ಲಿ ಪೊಲೀಸ್ ಪವರ್ ತೋರಿಸಲಿದ್ದಾರೆ ಬಿಗ್ ಬಾಸ್ ನೀತು, ಇಲ್ಲಿದೆ ಸಂದರ್ಶನ..!
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ನೀತು ವನಜಾಕ್ಷಿ ಅತ್ಯುತ್ತಮ ಉದಾಹರಣೆ.
ಹೌದು, ಬಹುತೇಕರಿಗೆ ನೀತು ಕೇವಲ ಬಿಗ್ ಬಾಸ್ ಸ್ಫರ್ಧಿಯೆಂದು ಮಾತ್ರ ಗೊತ್ತು. ಆದರೆ.. ನೀತು ಅಂದರೆ ಕೇವಲ ಬಿಗ್ ಬಾಸ್ ಅಷ್ಟೇ ಅಲ್ಲ ಬಿಗ್ ಬಾಸ್ ಆಚೆಯೂ ಕೂಡ ನೀತು ಅಪ್ರತಿಮ ಸಾಧಕಿ ಅನ್ನುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ನಿಮಗೆ ಗೊತ್ತಿರಲಿ .. ಹೂವು ಕಟ್ಟುವ ಕುಟುಂಬದಿಂದ ಬಂದವರು ನೀತು ವನಜಾಕ್ಷಿ. ಮೂಲತಃ ಗದಗದವರಾದ ನೀತು ತಮ್ಮ ಬದುಕಿನ ಅಡಿಗಡಿಗೂ ಅವಮಾನಗಳನ್ನು ಎದುರಿಸಿದ್ದಾರೆ. ಸಮಾಜದ ಕೊಂಕು ಮಾತುಗಳಿಂದ ನೊಂದು ಬೆಂದಿದ್ದಾರೆ.
ಆದರೆ.. ಆರಂಭದಲ್ಲಿ ಗಂಡಾಗಿ ಹುಟ್ಟಿದ್ದ ನೀತು ಯಾವುದಕ್ಕೂ ಹೆದರಲಿಲ್ಲ. ಬೆದರಲಿಲ್ಲ. ಬದಲಿಗೆ ತಮ್ಮ ಮನಸ್ಸು ಹೇಳಿದಂತೆ ಹೆಜ್ಜೆಯನ್ನೂ ಹಾಕಿದ ನೀತು, ಕಾಲೆಳೆಯುವ.. ಕುಹುಕದ ಮಾತುಗಳನ್ನು ಆಡುವ.. ಇದೇ ಸಮಾಜದ ಮುಂದೆ ತಲೆ ಎತ್ತಿ ನಿಂತರು. ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕೂಡ ಗುರುತಿಸಿಕೊಂಡರು. 2019ರ ಮಿಸ್ ಇಂಟರ್‌ನ್ಯಾಷನಲ್ ಟ್ರಾನ್ಸ್‌ಜೆಂಡರ್ ಕ್ವೀನ್ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡರು. ಇಂಥಾ ನೀತು ಸದ್ಯ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲು ಹತ್ತುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಹೌದು.. ಬಿಗ್ ಬಾಸ್ ಸ್ಫರ್ಧಿಯಾಗಿ..ಮಾಡೆಲ್ ಆಗಿ.. ಉದ್ಯಮಿಯಾಗಿ.. ಇಲ್ಲಿಯವರೆಗೆ ಗುರುತಿಸಿಕೊಳ್ಳುತ್ತಿದ್ದ ನೀತು, ತೆಲುಗು ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದರು. ತಮಿಳಿನಲ್ಲಿ ಕೂಡ ಅಭಿನಯಿಸಿದ್ದರು. ಕನ್ನಡದಲ್ಲಿ ಉಪೇಂದ್ರ ಅಭಿನಯಿಸಿ ನಿರ್ದೇಶಿಸಿದ್ದ 'ಯುಐ' ಚಿತ್ರದಲ್ಲಿ ಕೂಡಾ ಪಾತ್ರವನ್ನು ನೀತು ನಿರ್ವಹಿಸಿದ್ದರು.
ಇಂತಿಪ್ಪಾ ನೀತು ಸದ್ಯ ಚಿತ್ರರಂಗದಲ್ಲಿ ಮತ್ತೊಂದು ಮೆಟ್ಟಿಲನ್ನೇರಿದ್ದು, ''ಕುಂಭರಾಶಿ''.. ''ದಂಧೆ ಬಾಯ್ಸ್'' ಚಿತ್ರಗಳನ್ನು ನಿರ್ದೇಶಿಸಿದ್ದ ಬಿ ಕೆ ಚಂದ್ರಹಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ''ಕೌಂತೇಯ'' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ವಿಶೇಷ ಅಂದರೆ ಈ ಚಿತ್ರದಲ್ಲಿ ನೀತು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದು ಚಿತ್ರದ ಕುರಿತು ತಮ್ಮ ಪಾತ್ರದ ಕುರಿತು ನೀತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ವೆಬ್ ಸೈಟ್ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ನೀತು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಕೌಂತೇಯ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಮಾತನಾಡೋದಾರೆ ?
ಕೌಂತೇಯ ಚಿತ್ರದಲ್ಲಿ ನನ್ನದು ಪೊಲೀಸ್ ಆಫೀಸರ್ ಪಾತ್ರ. ಇದೇ ಮೊದಲ ಬಾರಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ. ಈ ಜುಲೈ 7ರಿಂದ ಚಿತ್ರೀಕರಣ ಶುರುವಾಗಿದೆ. ಹಾಗೇ ನೋಡಿದರೆ ಕೆಲ ದಿನಗಳ ಹಿಂದೆಯೇ ನನ್ನ ಪಾತ್ರದ ಚಿತ್ರೀಕರಣ ನಡೆಯಬೇಕಿತ್ತು. ಆದರೆ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಸರ್ ಅವರ ಜೊತೆ ನನ್ನ ಸೀನ್‌ಗಳು ಹೆಚ್ಚಿವೆ. ಹೀಗಾಗಿ ಅವರು ಬ್ಯುಸಿ ಇದ್ದರು. ಈಗ ಅವರ ಕಾಲ್ ಶೀಟ್ ಸಿಕ್ಕಿದೆ. ಹೀಗಾಗಿ ಅವರ ಜೊತೆ ಈಗ ನನ್ನ ಭಾಗದ ಚಿತ್ರೀಕರಣ ಶುರುವಾಗಲಿದೆ ಎಂದು ನೀತು ಹೇಳಿದ್ದಾರೆ.
ಅಚ್ಯುತ್ ಸರ್ ಜೊತೆ ಸಿನಿಮಾ, ಎಷ್ಟು ಉತ್ಸುಕರಾಗಿದ್ದೀರಾ ?
ಅಚ್ಯುತ್ ಸರ್ ಅವರು ಎಲ್ಲರಿಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗದ ಲೆಜೆಂಡ್‌ಗಳಲ್ಲಿ ಒಬ್ಬರು. ಅವರ ಜೊತೆ ಚಿತ್ರ ಮಾಡುವ ಕನಸು ನನಗೂ ಇತ್ತು. ಆ ಕನಸು ನನಸಾಗಿದೆ. ಅವರಿಂದ ತುಂಬಾ ಕಲಿಯುವ ಅವಕಾಶ ನನಗೆ ಸಿಗುತ್ತೆ. ಕಾಂತಾರದಲ್ಲಿ ಒಳ್ಳೆಯ ಪಾತ್ರ ಮಾಡಿದ್ದಾರೆ. ಇನ್ನು ಪೊಲೀಸ್ ಅಂತಾ ಬಂದಾಗ ನನಗೆ ನೆನಪಾಗುವುದು ಅವರ ದೃಶ್ಯ ಚಿತ್ರ. ದೃಶ್ಯ ಚಿತ್ರದಲ್ಲಿ ಅವರದ್ದು ಮನೋಜ್ಞ ಅಭಿನಯ. ಇಂತಹ ಅಚ್ಯುತ್ ಸರ್ ಜೊತೆ ನಾನು ತೆರೆ ಹಂಚಿಕೊಳ್ಳುತ್ತಿರುವುದೇ ನನಗೆ ಹೆಮ್ಮೆಯ ವಿಷಯ, ಅವರ ಜೊತೆ ಅಭಿನಯಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಬಹುದು ಎಂದು ನೀತು ಹೇಳಿದ್ದಾರೆ.
ನಿರ್ದೇಶಕ ಬಿಕೆ ಚಂದ್ರಹಾಸ್ ಮೊದಲು ಸಂಪರ್ಕಿಸಿದಾಗ ?
ನಿನಗೆ ಪೊಲೀಸ್ ಪಾತ್ರ ತುಂಬಾ ಸೂಕ್ತವಾಗುತ್ತೆ ಎಂದು ನನಗೆ ನನ್ನ ಸ್ನೇಹಿತರೆಲ್ಲ ಮೊದಲಿಂದ ಹೇಳುತ್ತಿದ್ದರು, ಆ ಯುನಿಫಾರ್ಮ್ ನಿನಗೆ ತುಂಬಾ ಚೆನ್ನಾಗಿ ಕಾಣುತ್ತೆ ಒಂದು ಫೋಟೊಶೂಟ್ ಆದರೂ ಮಾಡಿಸು ಎನ್ನುವ ಸಲಹೆ ಕೊಡ್ತಿದ್ದರು, ಅವರು ಹೇಳಿದಾಗ ನಾನು ಕೂಡ ಫೋಟೊಶೂಟ್ ಮಾಡಿಸೋಣ ಎನ್ನುವ ಆಲೋಚನೆ ಮಾಡ್ತಿದ್ದೆ ಅಷ್ಟರಲ್ಲಿ ಈ ಚಿತ್ರ ಸಿಕ್ತು, ಈ ಚಿತ್ರದಲ್ಲಿ ನನ್ನದು ಪೊಲೀಸ್ ಪಾತ್ರ ಅಂದಾಗ ನನಗೆ ಶಾಕ್ ಆಯ್ತು, ಒಂದು ರೀತಿಯಲ್ಲಿ ನನ್ನ ಪಾಲಿಗೆ ನಾವು ಅಂದುಕೊಂಡಂತೆ ಆದಂತೆ ಆಗಿದೆ ಇದು ಎಂದು ''ಫಿಲ್ಮಿಬೀಟ್ ಕನ್ನಡ''ಗೆ ನೀತು ಹೇಳಿದ್ದಾರೆ.
ಬೇರೆ ಪ್ರಾಜೆಕ್ಟ್‌ಗಳ ಕುರಿತು !
ಮತ್ತೊಂದು ಸಿನಿಮಾ ಮಾಡ್ತಿದ್ದೀನಿ, ಆ ಚಿತ್ರದ ಕುರಿತು ಶೀಘ್ರದಲ್ಲಿಯೇ ವಿವರವಾಗಿ ಮಾತನಾಡ್ತೀನಿ, ಆ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಅನ್ನುವುದು ವಿಶೇಷ ಎಂದು ತಮ್ಮ ಮುಂದಿನ ಯೋಜನೆಯ ಕುರಿತು ಕೂಡ ನೀತು ಮಾತನಾಡಿದ್ಧಾರೆ.


Click it and Unblock the Notifications











