twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಟಾಪ್-10 ನಟರು

    By ರವೀಂದ್ರ ಕೊಟಕಿ
    |

    ಭಾರತೀಯ ಸಿನಿಮಾ ರಂಗದಲ್ಲಿ ನಾಯಕ ನಟರೇ ಪ್ರಧಾನ. ಯಾವುದೇ ಸಿನಿಮಾದ ಮೇಲೆ ಬಂಡವಾಳ ಹೂಡುವುದು ನಾಯಕನ ಸಾಮರ್ಥ್ಯದ ಆಧಾರದ ಮೇಲೆಯೇ. ಅದರಲ್ಲೂ ಮಾಸ್ ಇಮೇಜ್ ಇರುವ ನಾಯಕರೇ ಸಿನಿಮಾರಂಗದ ಅತಿಮುಖ್ಯ ಆಧಾರಸ್ತಂಭಗಳಾಗಿದ್ದಾರೆ. ಹೀಗಾಗಿಯೇ ನೂರಾರು ಕೋಟಿ ಬಂಡವಾಳ ನಾಯಕನ ಮೇಲಿನ ನಂಬಿಕೆಯಿಂದ ಹೂಡುತ್ತಿದ್ದಾರೆ ನಿರ್ಮಾಪಕರು. ಪ್ರತಿ ಭಾಷೆಯಲ್ಲೂ ನೂರು ಕೋಟಿಗೂ ಅಧಿಕ ಬಂಡವಾಳ ಹೂಡುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾದ ಕಾನ್ಸೆಪ್ಟ್ ಈಗ ಎಲ್ಲೆಡೆ ಮನೆ ಮಾಡಿದೆ.

    ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗ ಬೆಳೆದು ಬಂದ ಹಾದಿಯನ್ನು ಅವಲೋಕಿಸಿದಾಗ 50ರ ದಶಕದಿಂದ 80ರ ದಶಕವನ್ನು ಗೋಲ್ಡನ್ ಪಿರೆಡ್ ಅಂತಲೇ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕನ್ನಡ ಸಿನಿಮಾರಂಗದ ಅತ್ಯುತ್ತಮ ಕಲಾಕೃತಿಗಳು ಇಡೀ ದೇಶದ ಗಮನ ಸೆಳೆಯುತ್ತಿತ್ತು. ಕಥೆಯೇ ಪ್ರಧಾನವಾಗಿತ್ತು, ಸಂಗೀತಕ್ಕೆ ಆದ್ಯತೆ, ಇಡೀ ಕುಟುಂಬ ಒಟ್ಟಿಗೆ ಕೂತು ನೋಡುವ ಸದಾಭಿರುಚಿಯ ಚಿತ್ರಗಳು ಹೆಚ್ಚಿಗೆ ತಯಾರಾಗುತ್ತಿತ್ತು. ಈ ಸಮಯದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟರಾಗಿ ಅತ್ಯಂತ ಜನಪ್ರಿಯ ಪಡೆದಿದ್ದ ನಾಯಕ ನಾಯಕನಟರಲ್ಲಿ ಫಿಲ್ಮಿಬೀಟ್ ಕನ್ನಡ ಟಾಪ್-10 ನಾಯಕ ನಟರನ್ನು ಆಯ್ಕೆ ಮಾಡಿದೆ. ಹಿಂದಿನ ತಲೆಮಾರಿನ ನಟರನ್ನು ಮಾತ್ರ ಗೌರವಪೂರ್ವಕವಾಗಿ ಟಾಪ್ ಟೆನ್ ಕನ್ನಡ ನಾಯಕ ನಟರೆಂದು ಇಲ್ಲಿ ಆಯ್ಕೆ ಮಾಡಿದ್ದೇವೆ. ಮುಂದೆ ಓದಿ....

    ಫಿಲ್ಮಿಬೀಟ್ ಕನ್ನಡ ಟಾಪ್ 10 ಕನ್ನಡ ಚಿತ್ರಗಳು ಯಾವುದು? ಮತ್ತು ಯಾಕೆ?ಫಿಲ್ಮಿಬೀಟ್ ಕನ್ನಡ ಟಾಪ್ 10 ಕನ್ನಡ ಚಿತ್ರಗಳು ಯಾವುದು? ಮತ್ತು ಯಾಕೆ?

    1. ರಾಜ್ ಕುಮಾರ್

    1. ರಾಜ್ ಕುಮಾರ್

    ತೆಲುಗಿನ ಎನ್. ಟಿ. ರಾಮರಾವ್, ತಮಿಳಿನ ಎಂ.ಜಿ. ರಾಮಚಂದ್ರನ್ ಮತ್ತು ನಮ್ಮ ಕನ್ನಡದ ವರನಟ ಮುತ್ತುರಾಜ್ ಅಭಿಮಾನಿಗಳ ಹೃದಯದಲ್ಲಿ ಆರಾಧ್ಯ ದೈವಗಳಂತೆ ಸ್ಥಾನ ಪಡೆದಿದ್ದು ಮಾತ್ರವಲ್ಲ,ಆ ಸಿನಿಮಾ ರಂಗಗಳ ಏಕಮೇವಾದ್ವಿತೀಯ ಮಹಾಶಕ್ತಿಗಳಾಗಿ ಎಂದೆಂದಿಗೂ ಅಜರಾಮರರು. ಅಭಿಮಾನಿಗಳನ್ನು ಪ್ರೀತಿಯಿಂದ ಅಭಿಮಾನಿ ದೇವರುಗಳಾಗಿ ಕಂಡ ವರನಟನಿಗೆ ಅಭಿಮಾನಿಗಳು ಕೂಡ 'ಅಣ್ಣಾವ್ರು' ಅಂತಲೇ ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ. ಮೂಲತಃ ರಂಗಭೂಮಿಯ ಕಲಾವಿದರಾದ ರಾಜಕುಮಾರ್ ಅವರು 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಪೌರಾಣಿಕ-ಐತಿಹಾಸಿಕ-ಸಾಮಾಜಿಕ-ಸಾಂಸಾರಿಕ ಹೀಗೆ ಎಲ್ಲಾ ತರದ ಸಿನಿಮಾಗಳಲ್ಲಿ ಅಭಿನಯಿಸಿದ ಕನ್ನಡದ ಏಕಮಾತ್ರ ಅಭಿನಯ ಚಕ್ರವರ್ತಿ ಇವರು. 40ಕ್ಕೂ ಹೆಚ್ಚಿನ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದರು. ಅವರ 33 ಚಿತ್ರಗಳು 55 ಬಾರಿ, 7 ಭಾಷೆಗಳಲ್ಲಿ 32 ನಟರು ರಿಮೇಕ್ ಮಾಡಿದ್ದಾರೆ. ವರನಟ, ಗಾನಗಂಧರ್ವ, ರಸಿಕರ ರಾಜ, ನಟಸಾರ್ವಭೌಮ ಅಂತ ಅಭಿಮಾನಿಗಳು ಪ್ರೀತಿಯಿಂದ ಕರೆದರು. ಕೇಂದ್ರ ಸರ್ಕಾರ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ನೂರಾರು ಪ್ರಶಸ್ತಿಗಳು ಅವರನ್ನು ಒಲಿದು,ಆ ಪ್ರಶಸ್ತಿಗಳು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. 'ಕರ್ನಾಟಕ ರತ್ನ' ಪುರಸ್ಕೃತರಾದ ವರನಟನಿಗೆ 'ಭಾರತರತ್ನ' ಸಿಗಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಹಕ್ಕೊತ್ತಾಯವಾಗಿದೆ.

    ಮತ್ತೆ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಬಯೋಪಿಕ್?ಮತ್ತೆ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಬಯೋಪಿಕ್?

    2. ವಿಷ್ಣುವರ್ಧನ್

    2. ವಿಷ್ಣುವರ್ಧನ್

    ಕನ್ನಡ ಸಿನಿಮಾರಂಗಕ್ಕೆ ರಾಜ್ ಕುಮಾರ್ ಒಂದು ಕಣ್ಣಾದರೆ, ಮತ್ತೊಂದು ಕಣ್ಣು ವಿಷ್ಣುವರ್ಧನ್. ಅಭಿಮಾನಿಗಳ ಪಾಲಿನ ಸಾಹಸಸಿಂಹ ಅವರ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದಾದಾ. 'ನಾಗರಹಾವು' ಸಿನಿಮಾದ ರಾಮಾಚಾರಿಯ ಆ ಗತ್ತು, ರೆಬೆಲ್ ಗುಣ, ಆ ಮ್ಯಾನರಿಸಂ ಅದರ ಅನುಕರಣೆ ಇಂದಿನ ಹೀರೋಗಳು ಕೂಡ

    ಅನುಸರಿಸುತ್ತಿದ್ದಾರೆ ಎಂದರೆ ಅದು ವಿಷ್ಣು ಮಾಡಿದ ಮೋಡಿ. ಐತಿಹಾಸಿಕ, ಸಾಮಾಜಿಕ,ಟ್ರ್ಯಾಜಿಡಿ, ಆಂಗ್ರಿ ಯಂಗ್ ಮ್ಯಾನ್ ಕೌಟುಂಬಿಕ ಹೀಗೆ ಎಲ್ಲಾ ತರದ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ವಿಷ್ಣುವರ್ಧನ್ ಅವರನ್ನು 2008 ರಲ್ಲಿ ಖ್ಯಾತ ಇಂಗ್ಲಿಷ್ ಚಾನಲ್ ನ್ಯೂಸ್ ಚಾನಲ್ cnn-ibn ನಡೆಸಿದ ಸರ್ವೆಯಲ್ಲಿ 'the most popular

    Star in kannada industry' ಅಂತ ಕನ್ನಡ ಕಲಾರಸಿಕರು ಆಯ್ಕೆ ಮಾಡಿದ್ದರು. ಬನಶಂಕರಿಯಿಂದ ಕೆಂಗೇರಿ ಯವರಿಗೆ ಸುಮಾರು 14.5 ಕಿಲೋಮೀಟರ್ ಉದ್ದದ ರಸ್ತೆಗೆ ವಿಷ್ಣುವರ್ಧನ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಇದು ಏಷ್ಯಾದಲ್ಲೇ ಒಬ್ಬ ನಟನ ಹೆಸರಿನಲ್ಲಿರುವ ಅತಿ ದೊಡ್ಡ ರಸ್ತೆ. ಕನ್ನಡದ ಜೊತೆಗೆ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿಯಲ್ಲೂ ನಟಿಸಿದ್ದ ದಾದಾ ಕನ್ನಡ ಸಿನಿಮಾರಂಗದ ಶಾಶ್ವತ ಅಭಿನಯ ಭಾರ್ಗವ.

    3. ಅಂಬರೀಶ್

    3. ಅಂಬರೀಶ್

    ಅವರು ರೆಬಲ್ ಸ್ಟಾರ್ ಮಾತ್ರವಲ್ಲ, ಅವರ ಮಾತುಗಳು ಕೂಡ ರೆಬಲ್. ಅವರು ಸೌಮ್ಯವಾಗಿ ಹೇಳಿದರೆ ಅವರ ಅಭಿಮಾನಿಗಳು ಎಂದು ಕೇಳುತ್ತಿರಲಿಲ್ಲ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ನಾಲ್ಕು ಮಾತು ಬೈದರೆ ಅದೇ ಅವರಿಗೊಂದು ಆನಂದ. ಅಂಬರೀಶ್ ಅವರ ಮಾತುಗಳೇ ಹಾಗೆ ಅದು ಪ್ರೀತಿ ತುಂಬಿದ ಬೈಗಳು.ಎಲ್ಲವನ್ನು ನೇರವಾಗಿ ಹೇಳುತ್ತಿದ್ದ ಸ್ವಭಾವ, ಸಿನಿಮಾ, ರಾಜಕೀಯ ನಿಜಜೀವನದಲ್ಲೂ 'ರೆಬಲ್ ಸ್ಟಾರ್". ಹಾಗೆಯೇ ಬದುಕಿದವರು. ರಾಜಕುಮಾರ್ ಅವರ ನಂತರ ಸಿನಿಮಾರಂಗದ ಯಾವುದೇ ಸಮಸ್ಯೆ ಬಿಕ್ಕಟ್ಟುಗಳಿಗೆ ಅಂಬರೀಶ್ ಅವರ ಮಾತೇ ಅಂತಿಮವಾಗಿತ್ತು. ವಿಲನ್, ಪೋಷಕನಟ, ನಾಯಕನಟ ಹೀಗೆ ಎಲ್ಲಾ ತರದ ಅಭಿನಯಗಳಲ್ಲಿ ಸೈ ಎನಿಸಿಕೊಂಡಿದ್ದ ಅಂಬರೀಶ್ ಅವರು ದಾನ ಧರ್ಮದ ವಿಷಯದಲ್ಲಿ ಕರ್ಣನಾದರೆ, ಮಂಡ್ಯದ ಜನರ ಪಾಲಿಗೆ 'ಮಂಡ್ಯದ ಗಂಡು' ಸ್ನೇಹಿತರ ಪಾಲಿಗೆ ಬಿಂದಾಸ್ ಮ್ಯಾನ್, ಅಭಿಮಾನಿಗಳ ಪಾಲಿಗೆ ರೆಬಲ್ ಸ್ಟಾರ್ ಆಗಿ ಕನ್ನಡ ಸಿನಿಮಾರಂಗದಲ್ಲಿ ಅಜರಾಮರರಾಗಿದ್ದಾರೆ.

    4. ಶಂಕರ್ ನಾಗ್

    4. ಶಂಕರ್ ನಾಗ್

    ಇವತ್ತು ಎಲ್ಲರೂ ಪ್ಯಾನ್ ಇಂಡಿಯಾ, ಪ್ರಯೋಗಾತ್ಮಕ ಚಿತ್ರ, ಟೆಕ್ನಾಲಜಿ, ಮೇಕಿಂಗ್ ಅಂತೆಲ್ಲಾ ಮಾತನಾಡುತ್ತಾರೆ. ಆದರೆ ನಾಲ್ಕು ದಶಕಗಳ ಇದನ್ನೆಲ್ಲವನ್ನು ಮಾಡಿ ತೋರಿಸಿದ ನಟ -ನಿರ್ದೇಶಕ- ನಿರ್ಮಾಪಕ ಶಂಕರ್ ನಾಗ್. ಕನ್ನಡ ಸಿನಿಮಾರಂಗಕ್ಕೊಂದು ಶಾಶ್ವತವಾದ ಉನ್ನತಮಟ್ಟದ ಸ್ಟುಡಿಯೋ ಬೇಕು ಅಂತ ಹೇಳಿ ಸಂಕೇತ್ ಸ್ಟುಡಿಯೋ ಆರಂಭಿಸಿದರು. ವಿಶ್ವದರ್ಜೆಯ ಫಿಲಂ ನಗರ ಕಟ್ಟುವ ಕನಸು ಕಂಡರು. ಬೆಂಗಳೂರಿಗೆ ಮೆಟ್ರೋದ ಆಲೋಚನೆ ಮಾಡಿದ್ದರು. 'ಮಾಲ್ಗುಡಿ ಡೇಸ್' ಮೂಲಕ ದೂರದರ್ಶನದಲ್ಲಿ ಸಂಚಲನವನ್ನೇ ಮೂಡಿಸಿದರು. ಕೇವಲ 36 ವರ್ಷಕ್ಕೆಲ್ಲಾ ರಸ್ತೆ ಅಪಘಾತದಲ್ಲಿ ತೀರಿಕೊಂಡ ಶಂಕರಣ್ಣ, ಇಂದಿಗೂ ಕೂಡ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಕುತೂಹಲದ ಸಂಗತಿಯೆಂದರೆ ಶಂಕರ್ ನಾಗ್ ಅವರು 1990ರಲ್ಲಿ ತೀರಿಕೊಂಡರು. 30 ವರ್ಷಗಳ ನಂತರ ಕೂಡ ಅವರ ಅಭಿಮಾನಿಗಳ ಬಳಗ ಕುಂದಿಲ್ಲ, ಬದಲಾಗಿ ಬೆಳೆದಿದೆ. ಅವರು ಬದುಕಿದ್ದ ದಿನಗಳಲ್ಲಿ ಹುಟ್ಟದೆ ಇದ್ದವರು ಕೂಡ ನಾವು ಶಂಕರಣ್ಣ ಅಭಿಮಾನಿಗಳು ಅಂತ ಅಭಿಮಾನಪೂರ್ವಕವಾಗಿ ಹೇಳಿಕೊಳ್ಳುವಷ್ಟು ಮೋಡಿ ಶಂಕರ್ ನಾಗ್ ಅವರದು. ಬೆಂಗಳೂರಿನ ಶೇಕಡ 70ರಷ್ಟು ಆಟೋಗಳ ಮೇಲೆ ಶಂಕರ್ ನಾಗ್ ಅವರ ಭಾವಚಿತ್ರ ರಾರಾಜಿಸುತ್ತದೆ, ಅದು ಶಂಕರ್ ನಾಗ್ ಅವರ ತಾಕತ್ತು.

    5. ಅನಂತನಾಗ್

    5. ಅನಂತನಾಗ್

    ಅನಂತ್ ನಾಗ್ ಅವರು ಇಂದಿಗೂ ಕೂಡ ಪೋಷಕ ಕಲಾವಿದರಾಗಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರನ್ನೇ ಪ್ರಧಾನ ಪಾತ್ರಧಾರಿಯಾಗಿ ಸಿನಿಮಾ ಮಾಡಲು ಉತ್ಸಾಹ ತೋರುವ ಯುವ ನಿರ್ದೇಶಕರು ಕೂಡ ನಮ್ಮಲ್ಲಿದ್ದಾರೆ. ಇದು ಅನಂತನಾಗ್ ಅವರ ಜನಪ್ರಿಯತೆಗೆ ಸಾಕ್ಷಿ. ಎಪ್ಪತ್ತು ಎಂಬತ್ತರ ದಶಕದ ಕನ್ನಡ ಸಿನಿಮಾರಂಗದ ಅತ್ಯಂತ ಸುರದ್ರೂಪಿ, ಮಧ್ಯಮ ವರ್ಗದ ಹೆಣ್ಣು ಮಕ್ಕಳ ಫೇವರೆಟ್ ಹೀರೋ ಅಂದರೆ ಅದು ಅನಂತನಾಗ್. ಕನ್ನಡದ ಜೊತೆಗೆ ಹಿಂದಿ ತೆಲುಗು ತಮಿಳು ಮಲಯಾಳಂ ಚಿತ್ರರಂಗದಲ್ಲೂ ನಟಿಸಿರುವ, ಎಲ್ಲ ತರದ ಪಾತ್ರಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್ ಅವರಿಗೆ 'ಪದ್ಮಶ್ರೀ' ನೀಡಬೇಕೆಂದು ರಿಷಬ್ ಶೆಟ್ಟಿ ಅಂತ ಯುವ ನಿರ್ದೇಶಕರು ಕೆಲವು ದಿನಗಳ ಹಿಂದೆ ಅಭಿಯಾನ ಮಾಡಿದ್ದರು. ಇದಕ್ಕೆ ಪ್ರತಿಯೊಬ್ಬ ಕನ್ನಡಿಗನ ಬೆಂಬಲ ತೀರಾ ಅಗತ್ಯ. ಅನಂತ್ ನಾಗ್ ಖಂಡಿತ ಪದ್ಮಶ್ರೀ ಪ್ರಶಸ್ತಿಗೆ ಅರ್ಹರು, ಜೊತೆಗೆ ಈ ಪ್ರಶಸ್ತಿ ಅವರಿಗೆ ಸಲ್ಲಲೇಬೇಕು.

    6. 'ಪ್ರಣಯರಾಜ' ಶ್ರೀನಾಥ್

    6. 'ಪ್ರಣಯರಾಜ' ಶ್ರೀನಾಥ್

    ಎಪ್ಪತ್ತು- ಎಂಬತ್ತರ ದಶಕದ ಮತ್ತೊಬ್ಬ ಪ್ರಮುಖ ನಟ 'ಪ್ರಣಯರಾಜ' ಶ್ರೀನಾಥ್. ಶ್ರೀನಾಥ್ ಚಿತ್ರಗಳು ಬಹುತೇಕ ಕೌಟುಂಬಿಕ ಕಥಾವಸ್ತುವನ್ನು ಒಳಗೊಂಡಿರುತ್ತಿತ್ತು. ಒಂದಷ್ಟು ಆಕ್ಷನ್ ದೃಶ್ಯಗಳು ಇದ್ದರೂ ಕೂಡ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಅಂತಲೇ ಇವರ ಎಲ್ಲಾ ಚಿತ್ರಗಳನ್ನು ಪರಿಗಣಿಸಲಾಗುತ್ತಿತ್ತು. ಶುಭಮಂಗಳ, ಮಾನಸ ಸರೋವರ,ಗರುಡ ರೇಖೆ ಮುಂತಾದ ಚಿತ್ರಗಳಲ್ಲಿ ಗಮನಾರ್ಹವಾದ ಪಾತ್ರಗಳನ್ನೇ ಶ್ರೀನಾಥ್ ನಿರ್ವಹಿಸಿದ್ದರು. 70ರ ದಶಕದಲ್ಲಿ ಹೆಚ್ಚು ರೋಮ್ಯಾಂಟಿಕ್ ಅಥವಾ ಪ್ರಣಯಭರಿತ ಚಿತ್ರಗಳಲ್ಲಿ ನಾಯಕನಟನಾಗಿ ನಟಿಸುತ್ತಿದ್ದ ಕಾರಣಕ್ಕೆ ಅಭಿಮಾನಿಗಳೇ ಇವರಿಗೆ "ಪ್ರಣಯರಾಜ 'ಅಂತ ಕರೆದು, ಗೌರವಿಸಿದ್ದರು.

    7.'ಕಲಾಕೇಸರಿ' ಉದಯ್ ಕುಮಾರ್

    7.'ಕಲಾಕೇಸರಿ' ಉದಯ್ ಕುಮಾರ್

    'ಕಲಾಕೇಸರಿ' ಉದಯ್ ಕುಮಾರ್ ಕನ್ನಡ ಸಿನಿಮಾರಂಗದ 'ಕುಮಾರ ತ್ರಯ' ರಲ್ಲಿ ಒಬ್ಬರು. 'ರತ್ನಗಿರಿ ರಹಸ್ಯ' ಚಿತ್ರದ ಮೂಲಕ ಅಪಾರವಾದ ಜನಪ್ರಿಯತೆಯನ್ನು ಗಳಿಸಿದ ಇವರು ಅಜಾನುಬಾಹು ದೇಹವನ್ನು ಹೊಂದಿದ್ದರು. ಹೀಗಾಗಿಯೇ ಇವರನ್ನು ತೆಲುಗು- ತಮಿಳು ಚಿತ್ರರಂಗಗಳು ಕೂಡ ಕೆಲವು ವಿಶೇಷ ಪಾತ್ರಗಳನ್ನು ಮಾಡಲು ಕೈಬೀಸಿ ಕರೆಯಿತು.

    ತೆಲುಗಿನ 'ಪಾಂಡಮುಲ ವನವಾಸಂ' ಚಿತ್ರದಲ್ಲಿ ಭೀಮನ ಪಾತ್ರದಲ್ಲಿ ಜೀವ ತುಂಬಿದರೆ, ಕನ್ನಡದ 'ಸತ್ಯ ಹರಿಶ್ಚಂದ್ರ' ಚಿತ್ರದ ವಿಶ್ವಾಮಿತ್ರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಬೆಟ್ಟದ ಹುಲಿ, ವಿಜಯನಗರದ ವೀರಪುತ್ರ ,ಮಿಸ್ ಲೀಲಾವತಿ, ಸಂಧ್ಯಾರಾಗ, ಸ್ಕೂಲ್ ಮಾಸ್ಟರ್, ಹೇಮಾವತಿ ಹೀಗೆ ಒಟ್ಟು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟರಾಗಿ ಪೋಷಕ ನಟರಾಗಿ, ಖಳನಾಯಕನಾಗಿ ನಟಿಸಿ ಅತ್ಯಂತ ಜನಪ್ರಿಯತೆಯನ್ನು ಪಡೆದ ಕಲಾವಿದರು ಉದಯ್ ಕುಮಾರ್.

    8. 'ಕಲಾತಪಸ್ವಿ' ರಾಜೇಶ್

    8. 'ಕಲಾತಪಸ್ವಿ' ರಾಜೇಶ್

    ರಾಜಕುಮಾರ್ ಅವರ ಸಮಕಾಲೀನ ನಟರಾದ ರಾಜೇಶ್ ಮೂಲತಃ ರಂಗಭೂಮಿಯ ಕಲಾವಿದರು.ಇವರ ಮೂಲ ಹೆಸರು ವಿದ್ಯಾಸಾಗರ್, ಖ್ಯಾತ ನಿರ್ದೇಶಕ -ನಿರ್ಮಾಪಕ ಹುಣಸೂರು ಕೃಷ್ಣಮೂರ್ತಿಯವರು ಇವರ ಸಿನಿಮಾ ನಾಮಕರಣ ರಾಜೇಶ್ ಅಂತ ಮಾಡಿ 'ವೀರಸಂಕಲ್ಪ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪರಿಚಯಿಸಿದರು. 'ಸೊಸೆ ತಂದ ಸೌಭಾಗ್ಯ' 'ಬೋರೇಗೌಡ ಬೆಂಗಳೂರಿಗೆ ಬಂದ' 'ದೇವರ ದುಡ್ಡು' 'ದೇವರ ಗುಡಿ' 'ಬದುಕು ಬಂಗಾರವಾಯಿತು' ಹೀಗೆ ಹಲವು ಯಶಸ್ವಿ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿದರು. ಮುಂದೆ ಪೋಷಕ ನಟರಾಗಿ ಕೂಡ ಉತ್ತಮ ಪಾತ್ರಗಳನ್ನು ನಿರ್ವಹಿಸಿದರು. ಕಲೆಯನ್ನು ತಪಸ್ಸಿನಂತೆ ಸ್ವೀಕರಿಸಿದ ಅವರು 'ಕಲಾ ತಪಸ್ವಿ ರಾಜೇಶ್' ಎಂಬ ಹೆಸರಿನಲ್ಲಿ ಆತ್ಮಚರಿತ್ರೆಯನ್ನು ರಚಿಸಿದ್ದಾರೆ.

    9. ಗಂಗಾಧರ್

    9. ಗಂಗಾಧರ್

    60ರ ದಶಕದಲ್ಲಿ ಕನ್ನಡ ಸಿನಿಮಾರಂಗ ಕಂಡ ಅತ್ಯಂತ ಸುಂದರ- ಸುರದ್ರೂಪಿ ನಟ ಗಂಗಾಧರ್. ರೋಮ್ಯಾಂಟಿಕ್ ಹೀರೋ ಆಗಿ ಆಗಿನಕಾಲದಲ್ಲಿ ಅತ್ಯಂತ ಜನಪ್ರಿಯ ನಾಯಕ ನಟರಾಗಿದ್ದರು. ಎಪ್ಪತ್ತರ ದಶಕದಲ್ಲೂ ಕೂಡ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದರು. ಗಂಗಾಧರ್' ಕಲ್ಪನಾ ಜೋಡಿ (ಶರಪಂಜರ, ಗೆಜ್ಜೆಪೂಜೆ, ಸೋತು ಗೆದ್ದವಳು) ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಜೋಡಿಯಾಗಿತ್ತು. ಸುಮಾರು 80 ಚಿತ್ರಗಳಲ್ಲಿ ಗಂಗಾಧರ್ ನಟಿಸಿದ್ದಾರೆ.

    10.ಕಲ್ಯಾಣ್ ಕುಮಾರ್

    10.ಕಲ್ಯಾಣ್ ಕುಮಾರ್

    ಐವತ್ತರ ದಶಕದ ಕನ್ನಡ ಸಿನಿಮಾ ರಂಗವನ್ನು ಅಕ್ಷರಶಃ ಆವರಿಸಿಕೊಂಡಿದ್ದರು ಕಲ್ಯಾಣ್ ಕುಮಾರ್. ಕನ್ನಡ ಸಿನಿಮಾರಂಗದ 'ಕುಮಾರ ತ್ರಯ'ರಲ್ಲಿ ಮೊದಲನೆಯ ಕುಮಾರ್, ಕಲ್ಯಾಣ್ ಕುಮಾರ್. ಕನ್ನಡ ಸಿನಿಮಾ ರಂಗದಲ್ಲಿ ಅವರು ಉತ್ತುಂಗದಲ್ಲಿ ಇರಬೇಕಾದರೆ, ದುರದೃಷ್ಟವಶಾತ್ ಕನ್ನಡ ಚಿತ್ರರಂಗವನ್ನು ಕಡೆಗಣಿಸಿ ತಮಿಳು ಚಿತ್ರರಂಗಕ್ಕೆ ಆದ್ಯತೆ ಕೊಟ್ಟಿದ ಪರಿಣಾಮ ಅವರು ಕನ್ನಡದಲ್ಲಿ ಅಗ್ರ ನಾಯಕನ ಪಟ್ಟವನ್ನು ಕಳೆದುಕೊಂಡರು. ತಮಿಳಿನಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣದೆ ಮತ್ತೆ ಕನ್ನಡ ಸಿನಿಮಾರಂಗದ ಕಡೆಗೆ ಮುಖಮಾಡಿ ಮತ್ತೆ ಸಕ್ರಿಯರಾದರು ನಾಯಕನ ಸ್ಥಾನದ ಬದಲಾಗಿ ಪೋಷಕನಟನ ಸ್ಥಾನಕ್ಕೆ ಬಂದು ನಿಂತರು. ಸುಬ್ಬಾಶಾಸ್ತ್ರಿ, ಬೆಳ್ಳಿಮೋಡ, ಬೆಟ್ಟದ ಕಳ್ಳ, ಅಮರಶಿಲ್ಪಿ ಜಕಣಾಚಾರಿ (ಕನ್ನಡದ ಪ್ರಪ್ರಥಮ ವರ್ಣಚಿತ್ರ) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದರು. ಸ್ವ ಭಾಷೆಯನ್ನು ಕಡೆಗಣಿಸಿದರೆ ಎಂಥ ದೊಡ್ಡ ನಟನಾದರೂ ಕೊನೆಗೆ ಸಾಮಾನ್ಯ ನಟನಾಗಿ ಉಳಿದು ಹೋಗುತ್ತಾನೆ ಎಂಬುವುದಕ್ಕೆ ಕಲ್ಯಾಣ್ ಕುಮಾರ್ ಒಂದು ಒಳ್ಳೆಯ ಉದಾಹರಣೆ.

    ಒಟ್ಟಾರೆ 50ರಿಂದ 80ರ ದಶಕದ ಮಧ್ಯೆ ಅತ್ಯಂತ ಜನಪ್ರಿಯರಾಗಿದ್ದ ಕನ್ನಡ ಸಿನಿಮಾ ರಂಗವನ್ನು ಶ್ರೀಮಂತಗೊಳಿಸಿದ ನಾಯಕ ನಟರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದ್ದೇವೆ. ಈ ಕಲಾವಿದರ ಜೊತೆಗೆ ಇದೇ ಸಮಯದಲ್ಲಿ ಕನ್ನಡ ಸಿನಿಮಾರಂಗದಲ್ಲಿ ನಾಯಕ ನಟರಾಗಿ ಗುರುತಿಸಿಕೊಂಡಿದ್ದ ಇತರ ಎಲ್ಲ ನಾಯಕ ನಟರನ್ನು ಗೌರವಪೂರ್ವಕವಾಗಿ ಫಿಲ್ಮಿಬೀಟ್ ಕನ್ನಡ ಸ್ಮರಿಸುತ್ತಿದೆ.

    English summary
    Oneindia Kannada, Filmibeat Kannada Top 10 Senior Actor List.
    Saturday, September 25, 2021, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X