ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ
ಚಿತ್ರರಂಗದಲ್ಲಿ ಆತ್ಮೀಯವಾಗಿದ್ದರೂ ದಿಢೀರ್ ದೂರಾಗಿರುವುದು, ಅದೇ ರೀತಿ ಮಾತು ಬಿಟ್ಟವರು ಎಲ್ಲಾ ಮರೆತು ಒಂದಾಗಿರುವ ಉದಾಹರಣೆಗಳಿವೆ. ತೂಗುದೀಪ ಹಾಗೂ ಸರ್ಜಾ ಕುಟುಂಬದ ನಡುವೆ ಒಂದ್ಕಾಲದಲ್ಲಿ ಉತ್ತಮ ಒಡನಾಟ ಇತ್ತು. ಆದರೆ ಬಹಳ ಅದು ಮುರಿದು ಬಿದ್ದಿತ್ತು.
ನಟ ಧ್ರುವ ಸರ್ಜಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ನನಗೆ ದರ್ಶನ್ ಸರ್ ಬಳಿ ಕೇಳಲು ಕೆಲವು ಪ್ರಶ್ನೆಗಳಿವೆ ಎಂದಿದ್ದರು. ಅಲ್ಲಿಂದ ಮುಂದೆ ದರ್ಶನ್ ಹಾಗೂ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಕೆಸರೆರಚಾಟ ಶುರುವಾಗಿತ್ತು. 'ಪ್ರೇಮಬರಹ' ಸಿನಿಮಾ ವಿತರಣೆ ವಿಚಾರದಲ್ಲಿ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು.

ಅಂದಹಾಗೆ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ನಟ ಅರ್ಜುನ್ ಸರ್ಜಾ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಮಲ್ಲಿಕಾರ್ಜುನ್ ನಾಪತ್ತೆಯಾದ ಬಳಿಕ ಅರ್ಜುನ್ ಸರ್ಜಾ ಹಾಗೂ ದರ್ಶನ್ ನಡುವೆ ಮಾತುಕತೆ ಮುರಿದುಬಿದ್ದಿತ್ತು. ಅದಕ್ಕೂ ಮುನ್ನ ಇಬ್ಬರು ಬಹಳ ಅನ್ಯೋನ್ಯವಾಗಿದ್ದರು. 'ಪ್ರೇಮಬರಹ' ಚಿತ್ರದ ಹಾಡೊಂದರಲ್ಲಿ ಸರ್ಜಾ ಫ್ಯಾಮಿಲಿ ಸ್ಟಾರ್ಸ್ ಜೊತೆ ದರ್ಶನ್ ಹೆಜ್ಜೆ ಹಾಕಿದ್ದರು. 'ಕುರುಕ್ಷೇತ್ರ' ಚಿತ್ರದಲ್ಲಿ ಕೂಡ ದುರ್ಯೋದನ ಹಾಗೂ ಕರ್ಣನ ಪಾತ್ರಗಳಲ್ಲಿ ದರ್ಶನ್- ಅರ್ಜುನ್ ಸರ್ಜಾ ನಟಿಸಿದ್ದರು.
ಅರ್ಜುನ್ ಸರ್ಜಾ ಅವರನ್ನು ಸೀನಿಯರ್ ಎಂದೇ ದರ್ಶನ್ ಕರೆಯುತ್ತಾರೆ. ಆದರೆ 'ಪ್ರೇಮಬರಹ' ಸಿನಿಮಾ ವಿಚಾರದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ದೂರಾಗಿಬಿಟ್ಟರು. ಆ ಬಳಿಕ ಧ್ರುವ ಸರ್ಜಾ ನೀಡಿದ ಕೆಲ ಹೇಳಿಕೆ ಈ ಕಂದಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಕಾವೇರಿ ನೀರಿಗಾಗಿ ಚಿತ್ರರಂಗದಿಂದ ನಡೆದ ಹೋರಾಟದ ವೇದಿಕೆಯಲ್ಲಿ ದರ್ಶನ್ ಹಾಗೂ ಧ್ರುವ ನಡುವಿನ ಶೀತಲ ಸಮರ ಜಗಜ್ಜಾಹೀರಾಗಿತ್ತು.
ಅಂದು ದರ್ಶನ್ ವೇದಿಕೆ ಏರುತ್ತಿದ್ದಂತೆ ಧ್ರುವ ಸರ್ಜಾ ಸಪ್ಪಗಾಗಿದ್ದರು. ದರ್ಶನ್ ಬಂದು ಕೂರುತ್ತಿದ್ದಂತೆ ಆಕ್ಷನ್ ಪ್ರಿನ್ಸ್ ಎದ್ದು ಹೊರಟುಬಿಟ್ಟರು. ಇದು ಇಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ಕನ್ನಡಿ ಹಿಡಿದಂತೆ ಇತ್ತು. ಧ್ರುವ ಸರ್ಜಾ ನಟನೆಯ ಸಿನಿಮಾಗಳನ್ನು ದರ್ಶನ್ ಬೆಂಬಲಿಸಿದ್ದರು. ದರ್ಶನ್ ಅವರನ್ನು ಡಿ ಬಾಸ್ ಎಂದೇ ಧ್ರುವ ಕರೆಯುತ್ತಿದ್ದರು.

ಅರ್ಜುನ್ ಸರ್ಜಾ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲಿಗೆ ಹೋಗಿ ಬಂದಿದ್ದು ಗೊತ್ತೇಯಿದೆ. ಸದ್ಯ ಬೆನ್ನು ನೋವಿನಿಂದ ಚೇತರಿಸಿಕೊಂಡು 'ಡೆವಿಲ್' ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಗ್ಯಾರೆಂಟಿ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. "ದರ್ಶನ್ ಜೊತೆ ಮಾತನಾಡಿ ಬಹಳ ದಿನಗಳಾಯಿತು. ಮಾತನಾಡಬೇಕು. 'ಡೆವಿಲ್' ಚಿತ್ರಕ್ಕೆ ಒಳ್ಳೆಯದಾಗಲಿ, ಆ ಸಿನಿಮಾ ದೊಡ್ಡ ಯಶಸ್ಸು ಸಾಧಿಸಲಿ" ಎಂದು ಶುಭ ಹಾರೈಸಿದ್ದಾರೆ.
ಧ್ರುವ ಅಂದು ಹೇಳಿದ್ದೇನು?
"ದರ್ಶನ್ ಅವರು ನಮ್ಮ ಹಿರಿಯ ಕಲಾವಿದರು, ಅವರ ಬಗ್ಗೆ ನಮಗೆ ಯಾವಾಗಲೂ ಗೌರವ ಇರುತ್ತದೆ. ನನಗೆ ಎರಡ್ಮೂರು ಪ್ರಶ್ನೆಗಳಿವೆ, ಅದನ್ನು ಕೇಳಿ ಕ್ಲಾರಿಟಿ ಪಡೆದುಕೊಳ್ಳಬೇಕಿದೆ. ಅದನ್ನು ಕ್ಲಿಯರ್ ಮಾಡಿಕೊಳ್ಳದೇ ಮನಸ್ಸಿನಲ್ಲಿ ಒಂದು, ಹೊರಗಡೆ ಒಂದು ಇಟ್ಕೊಂಡು ನಾಟಕ ಮಾಡುವುದು ಸರಿಯಲ್ಲ. ಯಾಕೆ ಫೇಕ್ ಆಗಿ ಇರಬೇಕು, ನಮಗೂ ಸ್ವಾಭಿಮಾನ ಎನ್ನುವುದು ಇರುತ್ತದೆ" ಎಂದು ಧ್ರುವ ಸರ್ಜಾ ಹೇಳಿದ್ದರು.
ಮಾತು ಮುಂದುವರೆಸಿದ್ದ ಧ್ರುವ ಸರ್ಜಾ "ನಮ್ಮ ಸಿನಿಮಾಗಳಿಗೆ ದರ್ಶನ್ ಸರ್ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ಈ ಬೆಳವಣಿಗೆ ಬಳಿಕ ಸಾಕಷ್ಟು ಜನ ಫೇಕ್ ಅಕೌಂಟ್ ಮಾಡಿಕೊಂಡು ಏನೇನೋ ಮೆಸೇಜ್ ಮಾಡುತ್ತಿದ್ದಾರೆ. ದಯವಿಟ್ಟು ಅದನ್ನೆಲ್ಲಾ ಮಾಡೋಕೆ ಹೋಗಬೇಡಿ. ಒಂದು ವೇಳೆ ಮಾಡಿದರೂ ತಗಲಾಕಿಕೊಳ್ಳೋಕೆ ಹೋಗಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರು.
ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣ?
ದರ್ಶನ್ ಆಪ್ತ ಮಲ್ಲಿಕಾರ್ಜುನ್ ಏಳೆಂಟು ವರ್ಷಗಳಿಂದ ಕಾಣೆಯಾಗಿದ್ದಾರೆ. 'ಪ್ರೇಮಬರಹ' ಸಿನಿಮಾ ವಿತರಣೆ ಸಂಬಂಧ ತಮಗೆ ಮಲ್ಲಿ ಮೋಸ ಮಾಡಿರುವುದಾಗಿ ಅರ್ಜುನ್ ಸರ್ಜಾ ಹೇಳುತ್ತಿದ್ದಾರೆ. ಆದರೆ ಮಲ್ಲಿ ದಿಢೀರನೆ ನಾಪತ್ತೆ ಆದಾಗ ದರ್ಶನ್ ನಮ್ಮ ಜೊತೆಗೆ ನಿಲ್ಲಲಿಲ್ಲ ಎನ್ನುವ ಅಸಮಾಧಾನ ಅರ್ಜುನ್ ಸರ್ಜಾ ಅವರಿಗೆ ಇದೆ ಎನ್ನಲಾಗ್ತಿದೆ.
'ಪ್ರೇಮಬರಹ' ಚಿತ್ರದ ಕಾರ್ಯಕಾರಿ ನಿರ್ಮಾಪಕ ಅನಿರುದ್ದ್ ಕೆಲ ತಿಂಗಳ ಮಾಧ್ಯಮಗಳ ಜೊತೆ ಈ ಬಗ್ಗೆ ಮಾತನಾಡಿದ್ದರು. ದರ್ಶನ್ ಸರ್ ಅಂದು ಮಲ್ಲಿಕಾರ್ಜುನ್ ವಿಚಾರದಲ್ಲಿ ಸಹಾಯ ಮಾಡಲಿಲ್ಲ. ತನಿಖೆ ವೇಳೆ ನಮ್ಮ ಸಿಬ್ಬಂದಿ ಸಂಪರ್ಕಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರನ್ನು ದರ್ಶನ್ ಸರ್ ಕೆಟ್ಟ ಪದಗಳಿಂದ ನಿಂದಿಸಿದ್ದರು. ನಿಮ್ಮದು ನೀವು ನೋಡಿಕೊಂಡು ಹೋಗಿ ಎಂದಿದ್ದರಂತೆ. ಇದು ಅರ್ಜುನ್ ಸರ್ಜಾ ಅವರಿಗೆ ಬೇಸರವಾಗಿತ್ತು. ಮುಂದೆ ಇವರೊಟ್ಟಿಗೆ ಯಾವುದೇ ನಂಟು ಬೇಡ, ಕಾನೂನಾತ್ಮಕವಾಗಿ ಹೋರಾಡೋಣ ಎಂದು ನಿರ್ಧರಿಸಿದ್ದಾಗಿ ಅನಿರುದ್ಧ್ ಹೇಳಿದ್ದರು.
'ಪ್ರೇಮಬರಹ' ಸಿನಿಮಾ
ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯ ಸರ್ಜಾಗಾಗಿ ಮಾಡಿದ್ದ ಸಿನಿಮಾ 'ಪ್ರೇಮಬರಹ'. ತಾವೇ ನಿರ್ಮಿಸಿ ಸಿನಿಮಾ ನಿರ್ದೇಶನ ಮಾಡಿದ್ದರು. ಚಂದನ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಇದೇ ಸಿನಿಮಾ ಚಿತ್ರೀಕರಣದ ವೇಳೆ ಮತ್ತೊಂದು ಕಡೆ 'ಕುರುಕ್ಷೇತ್ರ' ಸಿನಿಮಾ ಕೂಡ ನಿರ್ಮಾಣವಾಗುತ್ತಿತ್ತು. 'ಪ್ರೇಮಬರಹ' ಚಿತ್ರದ 'ಜೈ ಹನುಮಂತ' ಹಾಡಿಗೆ ದರ್ಶನ್ ಕೂಡ ಹೆಜ್ಜೆ ಹಾಕಿದ್ದರು.
ಮಲ್ಲಿಕಾರ್ಜುನ್ ನಾಪತ್ತೆ
ದರ್ಶನ್ ಆಪ್ತರಾಗಿದ್ದ ಮಲ್ಲಿಕಾರ್ಜುನ್, ತೂಗುದೀಪ ಸಂಸ್ಥೆ ಮೂಲಕ ಸಿನಿಮಾ ವಿತರಣೆ ಮಾಡುವುದಾಗಿ ಹೇಳಿ ತಾವೇ ಸಿನಿಮಾ ತೆರೆಗೆ ತಂದಿದ್ದರು. ದರ್ಶನ್ ಆತನನ್ನು ಬಹಳ ನಂಬಿದ್ದರು. ಆದರೆ ಅರ್ಜುನ್ ಸರ್ಜಾ ಅವರಿಗೆ 1 ಕೋಟಿ ರೂ.ವರೆಗೆ ಹಣ ಕೊಡದೇ ತಲೆ ಮರೆಸಿಕೊಂಡಿದ್ದಾರೆ. ಈ ಸಂಬಂಧ ದೂರು ಸಹ ದಾಖಲಾಗಿದೆ. ಕೆಲ ದಿನಗಳ ಹಿಂದೆ ಗೋವಾದಲ್ಲಿ ಮಲ್ಲಿಕಾರ್ಜುನ್ ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಬಳಿಕ ಆ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಮಲ್ಲಿ ಹಿನ್ನೆಲೆ
ಗದಗ ಮೂಲದ ಮಲ್ಲಿಕಾರ್ಜುನ್ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. ಆತನ ನಿಯತ್ತು ನೋಡಿ ದರ್ಶನ್ ತಮ್ಮ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಬಿಟ್ಟಿದ್ದರು. ಬಹಳ ನಂಬಿಕಸ್ಥನಾಗಿ ಕೆಲಸ ಮಾಡಿಕೊಂಡು ಇದ್ದರು. ಹಾಗಾಗಿ ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ನಟ ದರ್ಶನ್‌ಗೆ ಕೂಡ ಮಲ್ಲಿಕಾರ್ಜುನ್ 10 ಕೋಟಿ ರೂ.ವರೆಗೆ ಮೋಸ ಮಾಡಿದ್ದಾನೆ ಎನ್ನುವ ಆರೋಪಗಳಿವೆ.
'ಮೊದಲ ಸಲ' ಮೋಸ?
ಅರ್ಜುನ್ ಸರ್ಜಾ, ದರ್ಶನ್ ಮಾತ್ರವಲ್ಲ ಅದಕ್ಕೂ ಮುನ್ನ ಕೆಲವರಿಗೆ ಮಲ್ಲಿಕಾರ್ಜುನ್ ಮೋಸ ಮಾಡಿದ್ದ ಎನ್ನುವ ಆರೋಪಗಳಿವೆ. ಯಶ್ ನಟಿಸಿದ್ದ 'ಮೊದಲ ಸಲ' ಚಿತ್ರಕ್ಕೆ ಸಹನಿರ್ಮಾಪಕನಾಗಿ ಮಲ್ಲಿ ಹಣ ಹೂಡಿದ್ದ. ಆ ಚಿತ್ರದಲ್ಲಿ ನಷ್ಟವಾಗಿತ್ತು. ಆದರೆ ಆ ಚಿತ್ರದ ನಿರ್ಮಾಪಕರಾಗಿದ್ದ ಯೋಗೇಶ್ ನಾರಾಯಣ್ ತಮಗೆ ಮಲ್ಲಿಕಾರ್ಜುನ್ ಮೋಸ ಮಾಡಿದ್ದಾಗಿ ಹೇಳಿಕೊಂಡಿದ್ದರು.
ದರ್ಶನ್ ಕ್ಯಾಂಪ್ ಸೇರಿದ್ದೇಗೆ?
ಅಂದಹಾಗೆ ದರ್ಶನ್‌ಗೂ ಮುನ್ನ ಮಲ್ಲಿಕಾರ್ಜುನ್ ದಿನಕರ್‌ಗೆ ಹತ್ತಿರವಾಗಿದ್ದರು. ಗದಗದಲ್ಲಿ ಓದು ಮುಗಿಸಿದ ಬಳಿಕ ಮಲ್ಲಿ ಸಿನಿಮಾ ಕನಸು ಕಂಡು ಗಾಂಧಿನಗರಕ್ಕೆ ಬಂದಿದ್ದರು. ಎಂ. ಎಸ್ ರಮೇಶ್ ಬಳಿ ಸಹಾಯಕ ನಿರ್ದೇಶಕನಾಗಿದ್ದ, 'ವಾಲ್ಮೀಕಿ' ಚಿತ್ರಕ್ಕೆ ದಿನಕರ್ ಜೊತೆ ಸೇರಿ ಕೆಲಸ ಮಾಡಿದ್ದ. ಬಳಿಕ 'ಜೊತೆ ಜೊತೆಯಲಿ' ಚಿತ್ರಕ್ಕೆ ಸಹ ನಿರ್ದೇಶಕನಾಗಿದ್ದ. ನಂತರ 'ನವಗ್ರಹ' ಚಿತ್ರಕ್ಕೂ ಕೆಲಸ ಮಾಡಿದ್ದ. ಹೀಗೆ ದರ್ಶನ್ ಹಾಗೂ ದಿನಕರ್ ಒಡನಾಟ ಬೆಳೆದಿತ್ತು.


Click it and Unblock the Notifications











