ನಾಡಪ್ರಭು ಕೆಂಪೇಗೌಡ ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದಿದ್ದ ನಟ ಚೇತನ್ ಅಹಿಂಸಾ: ದೂರು ದಾಖಲು
ಇತ್ತೀಚೆಗೆ ನಟ ಚೇತನ್ ಅಹಿಂಸಾ ಮಾತಾಡುವುದೇಲ್ಲಾ ವಿವಾದವೇ ಆಗುತ್ತಿದೆ ಎನಿಸುತ್ತಿದೆ. ಸಾಲು ಸಾಲು ಹೇಳಿಕೆಗಳ ಕಾರಣ ಅವರ ವಿರುದ್ಧ ಒಂದಲ್ಲ ಒಂದು ಪ್ರಕರಣ ದಾಖಲಾಗುತ್ತಿದೆ. ಕಳೆದ ವಾರವಷ್ಟೇ ಗಾಂಧಿವಾದದ ಬಗ್ಗೆ ಹೇಳಿಕೆ ಬರೆದು ವಿವಾದ ಮಾಡಿದ್ದ ಅವರು, ಈಗ ಮತ್ತೆ ವಿವಾದವೊಂದು ಅವರ ಬೆನ್ನಿಗತ್ತಿದ್ದು, ಅದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದ ಮೇಲೆ ವಕೀಲ ಆರ್‌ಎಲ್ಎನ್ ಮೂರ್ತಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ಚೇತನ್ ಅಹಿಂಸಾ ವಿರುದ್ಧ ಪ್ರಕರಣ
ಕಳೆದ ವಾರ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡಿ ಚೇತನ್ ಅಹಿಂಸಾ ಭಾರೀ ವಿವಾದ ಸೃಷ್ಟಿಸಿದ್ದರು. ಅದು ಈಗಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಈಗ ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಬ್ಬರು ಯೋಧರ ಕಥೆ ಎಂದು ಹೇಳುವ ಮೂಲಕ ನಟ ಚೇತನ್ ಟಿಪ್ಪು ಸುಲ್ತಾನ್ ಮತ್ತು ಕೆಂಪೇಗೌಡ ಅವರನ್ನು ಹೋಲಿಸಿದ್ದು, ಟಿಪ್ಪು ಅವರನ್ನು ಹೊಗಳುವಾಗ ಕೆಂಪೇಗೌಡ ಅವರನ್ನು ಅವಮಾನಿಸಿದ್ದಾರೆ. ಕೆಂಪೇಗೌಡ ಅವರು ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಮತ್ತು ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕ ಮಹತ್ವದ ವ್ಯಕ್ತಿ ಎಂದು ಹೇಳಿದ್ದಾರೆ.
ಚೇತನ್ ಟ್ವೀಟ್‌ನಲ್ಲಿ ಏನಿದೆ..?
"ಇಬ್ಬರು ಯೋಧರ ಕಥೆ: 1. ಕೆಂಪೇಗೌಡ -- ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ
2. ಟಿಪ್ಪು ಸುಲ್ತಾನ್ -- ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ, ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ.
ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ" ಎಂದು ಬರೆದಿದ್ದಾರೆ.
ಇದು ಮೈಸೂರು ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕು ಎಂಬ ಚರ್ಚೆಗೆ ಅಂಗವಾಗಿ ಚೇತನ್ ಟ್ವಿಟ್ ಮಾಡಿದ್ದಾರೆ. "ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಾ..? ಸರ್ಕಾರಿ ಕಟ್ಟಡಗಳಿಗೆ ಯೋಧರಿಗಿಂತ ಹೆಚ್ಚಾಗಿ ಅಹಿಂಸೆಯ ಐಕಾನ್‌ಗಳ ಹೆಸರನ್ನು ಇಡಬೇಕೆಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಧ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಆ ನಿದರ್ಶನದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ" ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.
ಚೇತನ್ ಅಹಿಂಸಾ ವಿರುದ್ಧ ಕ್ರಮ ಕೈಗೊಳ್ಳಿ: ಡಾ. ಅಶ್ವತ್ಥನಾರಾಯಣ
ಇನ್ನು, ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ. "ಚೇತನ್ ಅಹಿಂಸಾ ಎನ್ನುವ ವ್ಯಕ್ತಿಯು ನಾಡಪ್ರಭು ಕೆಂಪೇಗೌಡರ ಕುರಿತು ಕೀಳು ಅಭಿರುಚಿಯ ಪದ ಬಳಕೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತೇನೆ. ಯಾವುದೇ ಒಂದು ಸಮುದಾಯದ ಭಾವನೆಗೆ ಧಕ್ಕೆ ತಂದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ" ಎಂದಿದ್ದಾರೆ.


Click it and Unblock the Notifications











