ದೈವಕ್ಕೆ ಅಪಹಾಸ್ಯ; 'ಧುರಂಧರ್' ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲು
ವಿವಾದಗಳು ಕೆಲವೊಮ್ಮೆ ಅಷ್ಟು ಸುಲಭವಾಗಿ ತಣ್ಣಗಾಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವಂತೆ ತಪ್ಪು ಮಾಡಿದವರಿಗೆ ಸಂಕಷ್ಟ ತಪ್ಪಿದ್ದಲ್ಲ. ಕರಾವಳಿ ದೈವಗಳಿಗೆ ಅಪಹಾಸ್ಯ ಮಾಡಿದ್ದ ನಟ ರಣ್ವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಣ್‌ವೀರ್ ಕ್ಷಮೆ ಕೇಳಿದರೂ ವಿವಾದ ತಣ್ಣಗಾಗಿಲ್ಲ.
ಗೋವಾದಲ್ಲಿ ನವೆಂಬರ್ 28ರಂದು ನಡೆದಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ 'ಕಾಂತಾರ' ಚಿತ್ರದಲ್ಲಿ ತೋರಿಸಿದಂತೆ ದೈವಗಳ ಅನುಕರಣೆ ಮಾಡಿದ್ದ ನಟ ರಣ್ವೀರ್ ಸಿಂಗ್ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದರು. ವೇದಿಕೆ ಮುಂಭಾಗದಲ್ಲೇ ಇದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಆ ರೀತಿ ಮಾಡಬೇಡಿ ಎಂದು ಸನ್ನೆ ಮಾಡಿ ತಿಳಿಸಿದ್ದರು. ನಟ ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದು ಹೊಗಳುವ ಭರದಲ್ಲಿ ಅವರಂತೆ ಪಂಜುರ್ಲಿ/ಗುಳಿಗ ದೈವದ ಅಭಿವ್ಯಕ್ತಿಯನ್ನು ಅಸಭ್ಯ ರೀತಿ ಅನುಕರಿಸಿದ್ದಾರೆ ಎಂದು ಬೇಸರ ವ್ಯಕ್ತವಾಗಿತ್ತು. ಚಾವುಂಡಿ ದೈವವನ್ನು ಭೂತ ಎಂದು ರಣ್‌ವೀರ್ ಸಿಂಗ್ ಉಲ್ಲೇಖಿಸಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ನಟ ರಣ್ವೀರ್ ಸಿಂಗ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ದೂರುಗಳು ದಾಖಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಡಿಸೆಂಬರ್ 3ರಂದು ವಕೀಲರಾದ ಪ್ರಶಾಂತ್ ಮೆಥಲ್ ಎಂಬುವವರು ದೂರು ದಾಖಲಿದ್ದರು. ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಡಿಸೆಂಬರ್ 27, 2025 ರಂದು ಬೆಂಗಳೂರಿನ ಹೆಚ್ಚುವರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ನಲ್ಲಿ ವಕೀಲರು ಖಾಸಗಿ ದೂರು ದಾಖಲಿಸಿದರು. ಇದೇ ಜನವರಿ 23, 2026 ರಂದು, ನ್ಯಾಯಾಲಯವು ಬಿಎನ್‌ಎಸ್ ಸೆಕ್ಷನ್ 175 ಷರತ್ತು 3ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆದೇಶ ನೀಡಿತು. ಆದೇಶದ ಬೆನ್ನಲ್ಲೇ ನಿನ್ನೆ(ಜನವರಿ 28)ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿದ್ದಾರೆ.
ವಿವಾದ ಭುಗಿಲೆದ್ದು ಆಕ್ರೋಶ ಹೆಚ್ಚಾಗುತ್ತಿದ್ದಂತೆ ರಣ್‌ವೀರ್ ಸಿಂಗ್ ಕ್ಷಮೆ ಕೇಳಿದ್ದರು. ತಾವು ಆ ರೀತಿ ದೈವವನ್ನು ಅನುಕರಣೆ ಮಾಡಿದ್ದು ಯಾಕೆ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. "ಕಾಂತಾರ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ನಟನೆಯನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಆ ದೃಶ್ಯವನ್ನು ಮಾಡಲು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಹಾಗಾಗಿ ರಿಷಬ್ ಬಗ್ಗೆ ನನಗೆ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಹಾಗೂ ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನನ್ನ ನಡೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದರು.
'ಕಾಂತಾರ' ಸಿನಿಮಾ ನೋಡಿ ದೈವದ ಅನುಕರಣೆ ಮಾಡಬೇಡಿ ಎಂದು ಜನ ಮನವಿ ಮಾಡುತ್ತಲೇ ಇದ್ದಾರೆ. ಸಿನಿಮಾ ನೋಡಿದ ಕೆಲ ಪ್ರೇಕ್ಷಕರು ಆ ಪಾತ್ರವೇ ತಾವೆಂದುಕೊಂಡು ಅನುಕರಣೆ ಮಾಡಿ ಹುಚ್ಚಾಟ ಮರೆದಿದ್ದರು. ಕೆಲ ವೇದಿಕೆಗಳಲ್ಲಿ ಕೂಡ ಪಂಜರ್ಲಿ, ಗುಳಿಗ ದೈವವನ್ನು ಅನುಕರಣೆ ಮಾಡಿದ್ದರು. ಕೆಲವರು ರೀಲ್ಸ್ ಮಾಡಲು ಇದೇ ರೀತಿ ವೇಷ ಹಾಕಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಮನವಿ ಮಾಡುತ್ತಲೇ ಬಂದಿದ್ದಾರೆ.
ಅಂದು ರಣ್‌ವೀರ್ ಸಿಂಗ್ ವೇದಿಕೆ ಮೇಲೆ ಹೀಗೆ ದೈವವನ್ನು ಅನುಕರಣೆ ಮಾಡಿದ ಬಳಿಕ ವೇದಿಕೆ ಇಳಿದು ಬಂದಿದ್ದರು. ರಿಷಬ್ ಶೆಟ್ಟಿ ಮುಂದೆ ಮತ್ತೆ ಅದೇ ರೀತಿ ಆಡಲು ಮುಂದಾದಾಗ ಆ ರೀತಿ ಮಾಡಬೇಡಿ ಎಂದು ರಿಷಬ್ ಸನ್ನೆ ಮಾಡಿ ತಿಳಿಸಿದ್ದರು. ಬಳಿಕ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೂಡ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಯಾರೂ ಕೂಡ 'ಕಾಂತಾರ' ಚಿತ್ರದಲ್ಲಿ ತೋರಿಸಿದಂತೆ ದೈವವನ್ನು ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದರು.


Click it and Unblock the Notifications











