ಅನುಪಮ್ ಖೇರ್ ಸೇರಿ 13 ಜನರ ವಿರುದ್ಧ ಎಫ್.ಐ.ಆರ್
ಅನುಪಮ್ ಖೇರ್ ಅಭಿನಯದ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರ ಇದೇ ವಾರ 11 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಬಿಹಾರದ ನ್ಯಾಯಾಲಯ ಅನುಪಮ್ ಖೇರ್ ಸೇರಿದಂತೆ 13 ಜನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲು ಸೂಚಿಸಿದೆ.
'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕುರಿತಾಗಿದ್ದು, ಈ ಚಿತ್ರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ರಾಜಕಾರಣಿಗಳ ಪಾತ್ರ ಇದೆ.
ಸುಧೀರ್ ಓಜಾ ಎಂಬ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಚಿತ್ರದಲ್ಲಿ ರಾಜಕಾರಣಿಗಳನ್ನ ಕೀಳಾಗಿ ತೋರಿಸಲಾಗಿದೆ, ಅವರ ಗೌರಕ್ಕೆ ಧಕ್ಕೆ ತರಲಾಗಿದೆ, ಈ ಚಿತ್ರವನ್ನ ಬಿಡುಗಡೆ ಮಾಡಲು ಬಿಡಬಾರದು ಎಂದು ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಬಿಹಾರ್ ನ್ಯಾಯಾಲಯ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ. ಆದ್ರೆ, ಚಿತ್ರದ ಬಿಡುಗಡೆಗೆ ಇದು ತೊಂದರೆಯಾಗುವುದಿಲ್ಲ ಎನ್ನಲಾಗಿದೆ.
ಅಂದ್ಹಾಗೆ, ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕದ ಪ್ರತಿರೂಪವಾಗಿ ಈ ಸಿನಿಮಾ ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆದಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











