ನಟ ಧ್ರುವ ಸರ್ಜಾ ಅಭಿಮಾನಿಗಳ ವಿರುದ್ಧ ಎಫ್.ಐ.ಆರ್ ದಾಖಲು
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ನಂದಕಿಶೋರ್ ನಿರ್ದೇಶನ ಮಾಡ್ತಿರುವ 'ಪೊಗರು' ಚಿತ್ರದಲ್ಲಿ ಅಭಿನಯಿಸುತ್ತಿರುವ ಧ್ರುವ ಇತ್ತೀಚಿಗಷ್ಟೆ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.
ಈ ವೇಳೆ ಧ್ರುವ ಸರ್ಜಾ ಅವರ ಮನೆಯ ಸುತ್ತಮುತ್ತ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನ ಹಾಕಲಾಗಿತ್ತು. ಇದು ಕಾನೂನು ಬಾಹಿರವಾಗಿದ್ದರಿಂದ ಧ್ರುವ ಸರ್ಜಾಅಭಿಮಾನಿಗಳ ವಿರುದ್ಧ ಬಿಬಿಎಂಪಿ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ.

ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನಿವಾಸದ ಬಳಿ ಅಭಿಮಾನಿಗಳು ಫ್ಲೆಕ್ಸ್ ಹಾಗೂ ಕಟೌಟ್ ಹಾಕಿ ಶುಭಕೋರಿದ್ದರು. ಈ ಕುರಿತು ಬನಶಂಕರಿ ಉಪ ವಿಭಾಗದ ಬಿಬಿಎಂಪಿ ಅಧಿಕಾರಿಯೊಬ್ಬರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ಧ್ರುವ ಸರ್ಜಾ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್.ಐ.ಆರ್ ಹಾಕಿದ್ದಾರೆ.
ಫ್ಲೆಕ್ಸ್, ಕಟೌಟ್, ಬ್ಯಾನರ್ ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶವಿದೆ. ಈ ಸೂಚನೆಯ ಮೆರೆಗೆ ಬಿಬಿಎಂಪಿ ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್, ಹೋರ್ಡಿಂಗ್ ಹಾಕುವುದನ್ನ ನಿಯಂತ್ರಣ ಮಾಡುತ್ತಿದೆ.
ಇನ್ನು ಮತ್ತೊಂದೆಡೆ ಸಿನಿಮಾ ಪ್ರಚಾರಕ್ಕಾಗಿ ನಿರ್ದಿಷ್ಟವಾದ ಸ್ಥಳಗಳಲ್ಲಿ ಜಾಹೀರಾತು ಹಾಕಲು ಅನುಮತಿ ನೀಡಿ ಎಂದು ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದೆ.


Click it and Unblock the Notifications











