ಮಹಿಳೆ ಜೊತೆ ಅನುಚಿತ ವರ್ತನೆ; 'ಅಮುಕು ಡುಮುಕು' ಮಂಜು ವಿರುದ್ಧ FIR
ರೆಸ್ಟೋ ಬಾರ್‌ವೊಂದರ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ನಡೆದುಕೊಂಡ ಆರೋಪದಲ್ಲಿ ಮಂಜು ಅಲಿಯಾಸ್ 'ಅಮುಕು ಡುಮುಕು' ವಿರುದ್ಧ ದೂರು ದಾಖಲಾಗಿದೆ. ಗೀತಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರ ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿ ಅಸಭ್ಯವಾಗಿ ನಡೆದುಕೊಂಡಿದ್ದು, ಗಲಾಟೆ ಮಾಡಿದ್ದು ಗೀತಾ ಅವರಿಗೂ ಬೆದರಿಕೆ ಹಾಕಿರುವ ಆರೋಪ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಂಜು ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಮಂಜುಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಮಂಜು ಕೆಲ ದಿನಗಳ ಹಿಂದೆ ಧ್ರುವ ಸರ್ಜಾ ಮನೆ ಮುಂದೆ ಕಾಣಿಸಿಕೊಂಡಿದ್ದರು. ತಮ್ಮದೇ ಶೈಲಿಯಲ್ಲಿ 'ಅಮುಕು ಡುಮುಕು' ಎನ್ನುವ ನಟ ಧ್ರುವ ಅವರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಮಾಡಿದ್ದರು. ಆ ವೀಡಿಯೋ ವೈರಲ್ ಆಗಿ 'ಅಮುಕು ಡುಮುಕು' ಮಂಜು ಎಂದೇ ಗಮನ ಸೆಳೆದಿದ್ದ.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿರುವ ಸನ್‌ರೈಸ್ ರೆಸ್ಟೋಬಾರ್ & ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಜೂನ್ 9ರಂದು ಸಂಜೆ ಪ್ರಮೋಷನ್ ವೀಡಿಯೋ ಮಾಡಿಕೊಡುವುದಾಗಿ ಹೇಳಿ ಮಂಜು ತನ್ನ ಸ್ನೇಹಿತರ ಜೊತೆ ಅಲ್ಲಿಗೆ ತೆರಳಿದ್ದ. ಚೆನ್ನಾಗಿ ತಿಂದು, ಕುಡಿದ ಬಳಿಕ ಮಹಿಳಾ ಸಿಬ್ಬಂದಿ ಒಬ್ಬರು ಬಿಲ್ ಕೊಟ್ಟಿದ್ದಾರೆ. ಕೂಡಲೇ ಗರಂ ಆಗಿ ಆಕೆಯ ಜೊತೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಕೆಲ ಹುಡುಗರ ಜೊತೆ ಪಬ್ ಮುಂದೆ ಓಡಾಡುವುದು, ಧಮ್ಕಿ ಹಾಕುವುದು ಮಾಡಿದ್ದಾನೆ ಎಂದು ದೂರುದಾರೆ ಗೀತಾ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ 'ಅಮುಕು ಡುಮುಕು' ಮಂಜ ಹಾಗೂ ಆತನ ಮತ್ತೊಬ್ಬ ಸಹಚರನ ಮೇಲೆ ದೂರು ದಾಖಲಾಗಿದೆ. ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಬೇಕು ಎಂದು ಮಂಜು ಸೋಶಿಯಲ್ ಮೀಡಿಯಾದಲ್ಲಿ ಏನೇನೊ ವೀಡಿಯೋ ಮಾಡಿ ಹಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದ. ರೆಸ್ಟೋಬಾರ್ ಮಹಿಳಾ ಸಿಬ್ಬಂದಿ ಆರ್ಡರ್ ಕೇಳಲು ಬಂದಾಗ ಮಂಜು ಫೋನ್ ನಂಬರ್ ಕೊಡು, ಫೋಟೊ ಕೊಡು ಎಂದು ಕ್ಯಾತೆ ತೆಗೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆಕೆಯ ಮೊಬೈಲ್ ಕೊಟ್ಟು ಚಾರ್ಜ್ ಹಾಕು, ನಿನ್ನ ನಂಬರ್ ಸೇವ್ ಮಾಡು ಅಂತೆಲ್ಲಾ ಮಂಜು ದುಂಬಾಲು ಬಿದ್ದಿದ್ದ. ಸ್ಥಳಕ್ಕೆ ಬಂದ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ, ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಪೊಲೀಸರ ವಿಚಾರಣೆ ಬಳಿಕ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.


Click it and Unblock the Notifications
