ಎಸ್. ನಾರಾಯಣ್ ಫ್ಯಾಮಿಲಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ: ದೂರಿನಲ್ಲಿ ಏನಿದೆ?
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಹಾಗೂ ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ. ಎಸ್.ನಾರಾಯಣ್ ಅವರ ಸೊಸೆ ಪವಿತ್ರಾ ಅವರು ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸರು ನಿರ್ದೇಶಕ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಹಣ ನೀಡಿದರೂ, ಪದೇ ಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಸೊಸೆ ಪವಿತ್ರಾ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಪವಿತ್ರಾ ನೀಡಿದ ದೂರಿನಲ್ಲಿ ಏನಿದೆ ಅಂತ ನೋಡುವುದಾರೇ, 2021ರಲ್ಲಿ ಎಸ್.ನಾರಾಯಣ್ ಮತ್ತು ಭಾಗ್ಯಲಕ್ಷ್ಮಿ ಅವರ ಪುತ್ರ ಪವನ್ ಅವರನ್ನು ವಿವಾಹವಾಗಿದ್ದರು. 2022ರಲ್ಲಿ ಪ್ರತ್ಯೇಕವಾಗಿ ಸಂಸಾರ ನಡೆಸಲು ಆರಂಭಿಸಿದ್ದರು. ಈ ದಂಪತಿಗೆ ಗಂಡು ಮಗು ಕೂಡ ಜನಿಸಿತು. ಎಸ್.ನಾರಾಯಣ್ ಪುತ್ರ ಪವನ್ ಪದವೀಧರರಲ್ಲದ ಕಾರಣ, ಪವಿತ್ರಾ ಅವರೇ ದುಡಿದು ಸಂಸಾರ ನಡೆಸುತ್ತಿದ್ದರು. ಮಗುವಿನ ಎಲ್ಲಾ ಖರ್ಚು ವೆಚ್ಚಗಳನ್ನು ಅವರೇ ಭರಿಸಿದ್ದಾಗಿ ತಿಳಿಸಿದ್ದಾರೆ.

ಮಗುವಿಗೆ ಮೂರು ತಿಂಗಳು ತುಂಬಿದ ಬಳಿಕ ಮಾವ ಅಂದರೆ, ಎಸ್. ನಾರಾಯಣ್ ಆಹ್ವಾನದ ಮೇರೆಗೆ ಪವಿತ್ರಾ ತಮ್ಮ ಪತಿ ಪವನ್ ಅವರೊಂದಿಗೆ ಮನೆಗೆ ವಾಪಸ್ಸು ಹೋಗಿದ್ದರು. ಮಾವನ ಮನೆಗೆ ವಾಪಾಸ್ ಹೋದ ಕೆಲವೇ ದಿನಗಳಲ್ಲಿ ಎಸ್. ನಾರಾಯಣ್ ಮತ್ತು ಪವನ್ ಇಬ್ಬರೂ ಸೇರಿ 'ಕಲಾಸಾಮ್ರಾಟ್ ಟೀಂ ಅಕಾಡೆಮಿ' ಎಂಬ ಫಿಲ್ಮ್ ಇನ್‌ಸ್ಟಿಟ್ಯೂಟ್ ಆರಂಭಿಸಿದ್ದರು. ಈ ಸಂಸ್ಥೆಗೆ ಬಂಡವಾಳ ಹೂಡಲು ಪವನ್, ಪವಿತ್ರಾ ಅವರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿದ್ದಾರೆ.
ಈ ವೇಳೆ ತಮ್ಮ ತಾಯಿಯ ಆಭರಣಗಳನ್ನು ಅಡವಿಟ್ಟು ಹಣ ತಂದುಕೊಟ್ಟಿದ್ದು, ಆ ಸಂಸ್ಥೆ ನಷ್ಟ ಅನುಭವಿಸಿ ಮುಚ್ಚಿ ಹೋಗಿದೆ. ಅಲ್ಲಿ ಉಂಟಾದ ನಷ್ಟವನ್ನು ಭರಿಸಲು ₹10 ಲಕ್ಷ ಸಾಲ ಮಾಡಿ ಕೊಟ್ಟಿದ್ದು, ಅದರ ಇಎಂಐ ಅನ್ನು ತಾವೇ ಕಟ್ಟುತ್ತಿರುವುದಾಗಿ ಎಸ್.ನಾರಾಯಣ್ ಸೊಸೆ ಪವಿತ್ರಾ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಪವನ್ ತಮ್ಮ ತಾಯಿಯಿಂದಲೂ ₹75,000 ತೆಗೆದುಕೊಂಡಿದ್ದಾರೆ. ಇಷ್ಟೆಲ್ಲಾ ಸಹಾಯ ಮಾಡಿದರೂ, ಕೆಲ ದಿನಗಳಿಂದ ಅತ್ತೆ ಭಾಗ್ಯಲಕ್ಷ್ಮಿ ಮತ್ತು ಪತಿ ಪವನ್ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ, ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಪವಿತ್ರಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಮದುವೆಯ ಸಮಯದಲ್ಲಿ ₹1 ಲಕ್ಷ ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ವೆಚ್ಚಗಳಿಗಾಗಿ ಹಣವನ್ನೂ ಪಡೆದಿದ್ದಾರೆ. ಸದ್ಯ ತಮ್ಮ ತವರು ಮನೆಯಲ್ಲಿರುವ ಪವಿತ್ರಾ, ಎಸ್. ನಾರಾಯಣ್ ಅವರ ಮನೆಗೆ ಹಲವಾರು ಬಾರಿ ಭೇಟಿ ನೀಡಲು ಪ್ರಯತ್ನಿಸಿದರೂ, ಭದ್ರತಾ ಸಿಬ್ಬಂದಿ ಮನೆಯಲ್ಲಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆಂದೂ ಪವಿತ್ರಾ ತಾನು ನೀಡಿದ ದೂರಿನಲ್ಲಿ ಅಸಹಾಯಕತೆ ಹೊರ ಹಾಕಿದ್ದಾರೆ.
ತಮಗೂ ಮತ್ತು ತಮ್ಮ ಮಗುವಿಗೂ ಏನಾದರೂ ತೊಂದರೆಯಾದರೆ ಅದಕ್ಕೆ ಎಸ್. ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಪುತ್ರ ಪವನ್ ಕಾರಣ ಎಂದು ಪವಿತ್ರಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರ ತಂದೆ ಶಿವಕುಮಾರ್ ಕೂಡ ಇದಕ್ಕೆ ಕಾರಣ ಎಂದು ಆರೋಪಿಸಿ, ಮೂವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


Click it and Unblock the Notifications











