ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ FIR ದಾಖಲು
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳಿಗೆ ಕಿಡಿಗೇಡಿಗಳು ಕಿರುಕುಳ ನೀಡುತ್ತಿದ್ದಾರೆ. ಕೆಟ್ಟದಾಗಿ ಪೋಸ್ಟ್, ಕಾಮೆಂಟ್ಸ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಳಿಕ ನಟ ರಮ್ಯಾ ಅವರಿಗೆ ಇದೇ ರೀತಿಯ ಕಾಟ ಕೊಟ್ಟಿದ್ದರು. ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟ ಕೊಳಕ ಪದಗಳನ್ನು ಬಳಸಿ ಟ್ರೋಲ್ ಮಾಡಿದ್ದರು.
ಕಿಡಿಗೇಡಿಗಳ ಅಟ್ಟಹಾಸದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು. ಸಾಮಾಜಿಕ ಹೋರಾಟಗಾರ ಭಾಸ್ಕರ್ ಪ್ರಸಾದ್ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.

ಸದ್ಯ ವಿಜಯಲಕ್ಷ್ಮಿ ದರ್ಶನ್ ಅವರನ್ನು ನಿಂದಿಸಿ ಅವಹೇಳಕಾರಿ ಕಾಮೆಂಟ್ ಮಾಡಿದ್ದ 3-4 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. BNS ಸೆಕ್ಷನ್ 75, 79, ಐಟಿ ಆ್ಯಕ್ಟ್ 67, 66ರ ಅಡಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನಿಂದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ನಟಿ ರಮ್ಯಾ ತಮಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. 40ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. 8 ಜನ ಇನ್ನು ಜೈಲಿನಲ್ಲಿದ್ದಾರೆ. ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡುವ ಮನಸ್ಸು ಮಾಡುವವರು ಆಲೋಚಿಸಬೇಕಿದೆ.

ಯೂಟ್ಯೂಬ್ ಚಾನಲ್‌ವೊಂದರಲ್ಲಿ ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕಾರ್ಯಕ್ರಮ ಪ್ರಸಾರವಾಗಿತ್ತು. ಆ ವೀಡಿಯೋ ಕಾಮೆಂಟ್ ಬಾಕ್ಸ್‌ನಲ್ಲಿ ಕೆಲ ಕಿಡಿಗೇಡಿಗಳು ಬಹಳ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಹೀಗೆ ಅಶ್ಲೀಲ ಪೋಸ್ಟ್ ಮಾಡಿದ್ದವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಸೋಶಿಯಲ್ ಮೀಡಿಯಾವನ್ನು ಒಳ್ಳೆಯ ವಿಚಾರಕ್ಕೆ ಬಳಸಿಕೊಳ್ಳಬೇಕು. ಆದರೆ ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡಿ ಮತ್ತೊಬ್ಬರನ್ನು ನೋಯಿಸುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇದೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಯಾವುದೋ ಮೂಲೆಯಲ್ಲಿ ಕೂತು ಮೆಸೇಜ್, ಕಾಮೆಂಟ್ ಮಾಡುತ್ತಿರುತ್ತಾರೆ. ನಮ್ಮನ್ನು ಯಾರು ಹಿಡಿಯೋಕೆ ಸಾಧ್ಯವಿಲ್ಲ ಎಂದುಕೊಂಡಿರುತ್ತಾರೆ.
ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಕಾರಣ ಎನ್ನುವಂತೆ ಬಹಳ ಕೆಟ್ಟದಾಗಿ ಗಜಪಡೆ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಚಾರ ಭಾರೀ ಚರ್ಚೆ ಹುಟ್ಟುಹಾಕಿತ್ತು. ಅಭಿಮಾನಿಗಳು ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಸಿಎಂ ಸಿದ್ಧರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ "ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದರು.


Click it and Unblock the Notifications











