ಕನ್ನಡದ ಮೊದಲ ಹಾರರ್ ತ್ರಿಡಿ ಚಿತ್ರ 'ಆಕ್ರಮಣ'
ಕನ್ನಡ ಸಿನೆಮಾ 'ಆಕ್ರಮಣ' ಒಂದು ಪರಾಕ್ರಮ ಸಾಧಿಸಿದ ಘಳಿಗೆ ಇಲ್ಲಿದೆ. ಚೊಚ್ಚಲ ನಿರ್ದೇಶನದಲ್ಲೇ '3ಡಿ ಹಾಗೂ 2ಡಿ' ತಂತ್ರಜ್ಞಾನದ ಸಿನೆಮಾ ನಿರ್ದೇಶನ ಮಾಡಿದವರಲ್ಲಿ ಮೊದಲಿಗರು ನಿರ್ದೇಶಕ ಪ್ರಶಾಂತ್ ಕುಮಾರ್ ಎನ್. ಈ ಚಿತ್ರದ ಇನ್ನಿಬ್ಬರು ನಿರ್ಮಾಪಕರಾದ ವಿಮಲ್ ಜೈನ್, ಸುರೇಶ್ ಜೈನ್ ಅವರ ಜೊತೆ ಪರಮೇಶ್ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಸಹ ಮಾಡುತ್ತಿದ್ದಾರೆ.
ಚಿತ್ರೀಕರಣ ಮುಗಿಸಿ ಕೇವಲ ಒಂದು ಪಾತ್ರದ ಮಾತುಗಳ ಜೋಡಣೆ ಮಾತ್ರ ಬಾಕಿ ಇರುವ 'ಆಕ್ರಮಣ' ಮೈಸೂರಿನಲ್ಲಿ ಪ್ರಾರಂಭವಾಗಿ ಮೈಸೂರಿನಲ್ಲಿ ಸಂಪೂರ್ಣಗೊಳಿಸಿದ ಚಿತ್ರ. ಅಲ್ಲದೆ ಮೈಸೂರಿನ ಯುವಕ ಪ್ರಶಾಂತ್ ಕುಮಾರ್ ಎನ್ ಅವರ ಹಲವು ವರ್ಷಗಳ ಪ್ರಯತ್ನದ ಫಲ ಈ 'ಆಕ್ರಮಣ'.

ಕನ್ನಡದಲ್ಲಿ ತಯಾರಾದ ಉಪೇಂದ್ರ ಅಭಿನಯದ 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಿರುವಾಗಲೇ ಇವರಿಗೆ ರತೀಶ್ ಕುಮಾರ್ ಅವರ ಪರಿಚಯವಾಗಿ 3ಡಿ ಹಾಗೂ 2ಡಿ ತಂತ್ರಜ್ಞಾನದಲ್ಲಿ ಸಿನೆಮಾ ಮಾಡುವ ಆಸೆ ಮೊಳಕೆ ಒಡೆದದ್ದು.
ಆಕ್ರಮಣ ಚಿತ್ರವನ್ನು ಮೈಸೂರು, ಮಡಿಕೇರಿ, ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸಾಹಸ ಹಾಗೂ ಹಾರರ್ ಪ್ರಧಾನ ಚಿತ್ರ ಎಂದು ನಿರ್ದೇಶಕ ಪ್ರಶಂತ್ ಕುಮಾರ್ ತಿಳಿಸುತ್ತಾರೆ. 'ಆಕ್ರಮಣ' ಚಿತ್ರದಲ್ಲಿ 15 ರಿಂದ 20 ನಿಮಿಷಗಳ ಕಾಲ ಗ್ರಾಫಿಕ್ಸ್ ಅಳವಡಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಚನೆಯನ್ನು ನಿರ್ಮಾಪಕರುಗಳು ಇಟ್ಟುಕೊಂಡಿದ್ದಾರೆ.
ಚೆನ್ನೈನಲ್ಲಿ ಬಾಲ ಅವರು '3ಡಿ'ಗಾಗಿ, ಬೆಂಗಳೂರಿನಲ್ಲಿ ಜೀವನ್ ಅವರು 2ಡಿ ತಂತ್ರಜ್ಞಾನದ ಸಂಕಲನದ ನೇತೃತ್ವದಲ್ಲಿ ಈ ಚಿತ್ರಕ್ಕೆ ಮತ್ತಷ್ಟು ಸೊಬಗು ತುಂಬಲು ಅಣಿಯಾಗುತ್ತಿದೆ. ಕಾರ್ಯಕಾರಿ ನಿರ್ಮಾಪಕ ಸುನಿಲ್ ಆರ್, ಸತೀಶ್ ಆರ್ಯನ್ ಅವರ ಸಂಗೀತ, ಕೆಜಿ ರತೀಶ್ ಅವರ ಛಾಯಾಗ್ರಾಹಣ, ಓಸ್ಕರ್ ಅಭಿಶೇಖ್, ಲಲಿತ ರಾಜ್ ವಿನಾಯಕ್, ಆದರ್ಶ್ ಎಂ ಎನ್ ಸಂಭಾಷಣೆ ಬರೆದಿದ್ದಾರೆ.
ಶಂಕರ್, ಮಂಜುನಾಥ ರಾವು, ಆದರ್ಶ್, ಸತೀಶ್ ಆರ್ಯನ್ ಅವರ ಗೀತ ಸಾಹಿತ್ಯವಿದೆ. ದೀಪಕ್ ಅವರ ನೃತ್ಯ ನಿರ್ದೇಶನ, ಕೆ ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸವಿದೆ.
ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಖರ್ಜಿ, ಡೈಸಿ ಶಾ, ಶಿಲ್ಪಿ ಶರ್ಮ, ಮಕರಂದ್ ದೇಶಪಾಂಡೆ, ಅವಿನಾಷ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಷ್ ಶೆಣೈ, ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











