ದುನಿಯಾ ವಿಜಯ್ 'ಭೀಮ' ಗೆಲುವಿಗೆ 5 ಪ್ರಮುಖ ಕಾರಣಗಳೇನು?; ಬ್ಲ್ಯಾಕ್ ಕೋಬ್ರಾ ಗೆದ್ದಿದ್ದು ಎಲ್ಲಿ?
ಒಂದ್ಕಡೆ ಥಿಯೇಟರ್‌ಗೆ ಜನರು ಬರುತ್ತಿಲ್ಲ ಅನ್ನೋ ಅಳಲು. ಇನ್ನೊಂದು ಕಡೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ ಅನ್ನೋ ಆತಂಕ. ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ದಿನದಿಂದ ದಿನಕ್ಕೆ ಅವನತಿಯ ಹಾದಿಯನ್ನೇ ಹಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ದುನಿಯಾ ವಿಜಯ್ ನಟಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ರಿಲೀಸ್ ಆಗಿದೆ. ಮಾಸ್, ರೌಡಿಸಂ ಹಿನ್ನೆಲೆಯುಳ್ಳ ಈ ಸಿನಿಮಾ ಥಿಯೇಟರ್‌ಗೆ ಜನರನ್ನು ಎಳೆದು ತರಬಹುದೇ? ಈ ಪ್ರಶ್ನೆ ಸಿನಿಮಾ ಮಂದಿಯನ್ನು ಕಾಡುತ್ತಿತ್ತು.
ನಿರೀಕ್ಷೆಯಂತೆ 'ಭೀಮ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರಿಗೆ ಸಿನಿಮಾ ತೀರಾ ಮಾಸ್ ಎನಿಸುವ ಡೈಲಾಗ್‌ಗಳು ಇಷ್ಟ ಆಗಿರಲಿಲ್ಲ. ಮತ್ತೆ ಕೆಲವರಿಗೆ ಸಿನಿಮಾ ಹಿನ್ನೆಲೆ ಇಷ್ಟ ಆಗಿರಲಿಲ್ಲ. ಹೀಗಿದ್ದರೂ ದುನಿಯಾ ವಿಜಯ್ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸ್ 'ಭೀಮ' ಅಬ್ಬರಿಸಿದ್ದಾನೆ.

'ಭೀಮ' ವಿಚಾರದಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ತಲೆ ಕೆಳೆಗಾಗಿದ್ದು ಎಲ್ಲಿ? ದುನಿಯಾ ವಿಜಯ್ ಸಿನಿಮಾ ಥಿಯೇಟರ್ ಅನ್ನು ತುಂಬಿಸಿದ್ದು ಹೇಗೆ? ವಿಜಯ್ ಲೆಕ್ಕಾಚಾರ ಗೆದ್ದಿದ್ದು ಎಲ್ಲಿ? ಅಷ್ಟಕ್ಕೂ 'ಭೀಮ' ಸಿನಿಮಾ ಗೆಲ್ಲಲು ಇರುವ ಟಾಪ್ 5 ಕಾರಣಗಳು ಯಾವುವು? ಮತ್ತೆ ಸ್ಯಾಂಡಲ್‌ವುಡ್‌ಗೆ ಆಶಾಭಾವನೆ ಮೂಡಿಸಿದ 'ಭೀಮ' ಹೈಲೈಟ್ ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕಾರಣ 1: ಕ್ಯಾರೆಕ್ಟರ್‌ಗಳು
ಕಳೆದ ಕೆಲವು ವರ್ಷಗಳಿಂದ ಲೋಕಲ್ ಕಂಟೆಂಟ್ ವರ್ಕ್‌ಔಟ್ ಆಗುತ್ತಿವೆ. ದುನಿಯಾ ವಿಜಯ್ ಕೂಡ ಲೋಕಲ್ ಕಂಟೆಂಟ್ ಮೇಲೆ ಗಮನ ಹರಿಸಿದ್ದರು. ಬೆಂಗಳೂರಿನ ಯುವಕರು ಮಾದಕ ವ್ಯಸನಿಗಳು ಆಗುತ್ತಿರುವುದು ಹೇಗೆ? ಎಲ್ಲಿ ಈ ದಂಧೆ ನಡೆಯುತ್ತಿದೆ. ಇಂತಹದ್ದೇ ಒಂದು ವಿಷಯವನ್ನು 'ಭೀಮ' ಸಿನಿಮಾ ಮೂಲಕ ಹೇಳಲಾಗಿದೆ. ಇಂತಹ ಕಥೆಯನ್ನು ಹೇಳುವಾಗ ಪಾತ್ರಗಳ ಆಯ್ಕೆಯಲ್ಲಿ ವಿಜಯ್ ಗೆದ್ದಿದ್ದಾರೆ. ಈ ಪಾತ್ರಗಳು ನಮ್ಮ ಮನೆಯ ಸುತ್ತಮುತ್ತ, ನಾವು ಓಡಾಡುವ ದಾರಿಯಲ್ಲಿ ಸಿಗುತ್ತಾರಲ್ಲ ಅನ್ನೋ ಭಾವನೆ ಮೂಡುತ್ತೆ.
ಕಾರಣ 2: ಲೋಕಲ್ ಡೈಲಾಗ್ಸ್
ದುನಿಯಾ ವಿಜಯ್ ಸಿನಿಮಾ ಲೋಕಲ್ ಡೈಲಾಗ್ಸ್ ಸದ್ದು ಮಾಡಿವೆ. ತೀರಾ ಹಸಿಬಿಸಿ ಡೈಲಾಗ್‌ಗಳು ಕೆಲವರಿಗೆ ಹಿಡಿಸಿಲ್ಲ. ಆದರೆ, ಇನ್ನೂ ಕೆಲವರಿಗೆ ಈ ಡೈಲಾಗ್‌ಗಳು ಕಿಕ್ ಕೊಟ್ಟಿವೆ. ಮಾಸ್ತಿ ಬರೆದ ಈ ಡೈಲಾಗ್‌ಗಳು ದೈನಂದಿನ ಜೀವನದಲ್ಲಿ ಯಾರ್‍ಯಾರೋ ಇಂತಹ ಡೈಲಾಗ್‌ಗಳನ್ನು ಬಳಸುತ್ತಿರುತ್ತಾರೆ. ಆ ಪದಗಳು ನಮ್ಮ ಕಿವಿಗೆ ಬೀಳುತ್ತವೆ. ಆದರೆ, ನಾವು ಅದನ್ನು ಉಪಯೋಗಿಸುವುದಿಲ್ಲ. ಇದು ನಮ್ಮ ಸುತ್ತಮುತ್ತ ಇಂತಹ ಹುಡುಗರು ಇದ್ದಾರೆ ಅಂತ ಅನಿಸುತ್ತೆ.

ಕಾರಣ 3: ಡೀಪ್ ಸ್ಲಮ್
ದುನಿಯಾ ವಿಜಯ್ 'ಭೀಮ' ಕಥೆಯನ್ನು ಬೆಂಗಳೂರಿನ ಸ್ಪಮ್ ಒಳಗೆ ಶೂಟ್ ಮಾಡಿದ್ದಾರೆ. ಬೆಂಗಳೂರಿನ ಸ್ಲಮ್ ಅನ್ನು ಅಷ್ಟು ಡೀಪ್ ಆಗಿ ಶೂಟ್ ಮಾಡಿರುವುದು ಅಲ್ಲಿನ ಜನರು ಬಂದು ಸಿನಿಮಾ ನೋಡುವಂತೆ ಮಾಡುತ್ತಿವೆ.
ಕಾರಣ 4: 'ಸಲಗ' ಲಿಂಕ್
'ಭೀಮ' ಸಿನಿಮಾದ ಸ್ಕ್ರೀನ್ ಪ್ಲೇ ಬಗ್ಗೆ ಗೊಂದಲವಿದ್ದರೂ, ಇಲ್ಲಿ ನೋಡುಗರಿಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಸಿನಿಮಾದ ಕೊನೆ ಕೊನೆಯಲ್ಲಿ 'ಸಲಗ' ಸಿನಿಮಾದಲ್ಲಿದ್ದ ಪಾತ್ರಗಳು ಕಾಣಿಸಿಕೊಳ್ಳುತ್ತವೆ. 'ಭೀಮ' ಕಥೆಗೆ 'ಸಲಗ' ಪಾತ್ರಗಳನ್ನು ಲಿಂಕ್ ಮಾಡುತ್ತಾ ಹೋಗುತ್ತಾರೆ. ಅಲ್ಲೇ 'ಸಲಗ 2' ಬಗ್ಗೆ ಸುಳಿವು ಸಿಗುತ್ತೆ.
ಕಾರಣ 5: ಪೊಲೀಸ್ ಟ್ರೀಟ್ಮೆಂಟ್
ಅಪರಾಧದಲ್ಲಿ ಸಿಕ್ಕಿಕೊಂಡರೆ ಪೊಲೀಸರ ಟ್ರೀಟ್ಮೆಂಟ್ ಹೇಗಿರುತ್ತೆ ಅನ್ನೋದನ್ನು ದುನಿಯಾ ವಿಜಯ್ ತೋರಿಸಿದ್ದಾರೆ. ಪೊಲೀಸರು ಬಳಸುವ ಭಾಷೆ, ಕೇಸ್ ಅನ್ನು ಹ್ಯಾಂಡಲ್ ಮಾಡುವ ರೀತಿ, ಅವರು ಕೊಡುವ ಟ್ರೀಟ್ಮೆಂಟ್ ಎಲ್ಲವೂ ನೈಜವಾಗಿಯೇ ತೋರಿಸಲಾಗಿದೆ. ಈ ಐದು ಪ್ರಮುಖ ಕಾರಣಗಳು 'ಭೀಮ' ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.


Click it and Unblock the Notifications











