ನ್ಯಾಯಾಂಗ ಬಂಧನದಲ್ಲಿರುವ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು
ಅಕ್ರಮವಾಗಿ ಮಗು ದತ್ತು ಪಡೆದ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಈ ಸಂಬಂಧ ಆದೇಶ ಹೊರಡಿಸಿದ್ದು ಇಂದು(ಏಪ್ರಿಲ್ 5) ಆಕೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.
ರಾಯಚೂರು ಮೂಲದ 8 ವರ್ಷದ ಹೆಣ್ಣು ಮಗುವನ್ನು ಸೋನು ಶ್ರೀನಿವಾಸ್ ಅನಧಿಕೃತವಾಗ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಮಾರ್ಚ್ 22 ರಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು.

ಮಗುವಿನ ಪೋಷಕರನ್ನು ಕೂಡ ಪೊಲೀಸರು ಠಾಣೆ ಕರೆಸಿ ವಿಚಾರಣೆ ನಡೆಸಿದ್ದರು. ಬಂಧನದ ಬಳಿಕ 4 ದಿನದ ಪೊಲೀಸ್ ಕಸ್ಟಡಿಯಲ್ಲಿ ಸೋನು ಶ್ರೀನಿವಾಸ್ ಗೌಡ ಇದ್ದರು. ಬಳಿಕ ಕೋರ್ಟ್ ಆಕೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಏಪ್ರಿಲ್ 8ರ ತನಕ ಆಕೆ ನ್ಯಾಯಾಂಗ ಬಂಧನದಲ್ಲಿ ಇರಬೇಕಿತ್ತು. ಆದರೆ ಆಕೆಯ ಪರ ವಕೀಲರು ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಆದೇಶ ಹೊರಡಿಸಿದೆ.
ತಮ್ಮ ಅಪಾರ್ಟ್‌ಮೆಂಟ್ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ರಾಯಚೂರಿನಿಂದ ಕುಟುಂಬವೊಂದು ಬಂದಿತ್ತು. ಆ ಪೋಷಕರ 8 ವರ್ಷದ ಮಗಳ ಜೊತೆ ಶ್ರೀನಿವಾಸ್ ಗೌಡಗೆ ಪರಿಚಯವಾಗಿತ್ತು. ಇಬ್ಬರ ನಡುವೆ ಒಡನಾಟ ಶುರುವಾಗಿತ್ತು. ಬಳಿಕ ಆಕೆಯನ್ನು ಸೋನು ಶ್ರೀನಿವಾಸ್ ಗೌಡ ದತ್ತು ಪಡೆಯುವುದಾಗಿ ಕರೆತಂದು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಯೂಟ್ಯೂಬ್‌ನಲ್ಲಿ ಈ ಬಗ್ಗೆ ವ್ಲಾಗ್ ವೀಡಿಯೊಗಳನ್ನು ಮಾಡುತ್ತಿದ್ದರು.
ಬಾಲಕಿ ಪೋಷಕರ ಒಪ್ಪಿಗೆ ಪಡೆದು ಮಗುವನ್ನು ಕರೆದುಕೊಂಡು ಬಂದಿದ್ದು ಸೇರಿಸಿದಂತೆ ಆಕೆಯ ಜೊತೆ ಶಾಪಿಂಗ್ ಸೇರಿ ಹಲವು ವೀಡಿಯೋಗಳನ್ನು ಮಾಡಿದ್ದರು. ವೀಡಿಯೋವೊಂದರಲ್ಲಿ ಸೋನು ಮಾತನಾಡುತ್ತಾ ಸೋಶಿಯಲ್ ಮೀಡಿಯಾದಿಂದ ಬಂದ ಹಣದಲ್ಲಿ ಬಾಲಕಿಯ ಪೋಷಕರಿಗೂ ಹಣ ನೀಡುವುದಾಗಿ ಹೇಳಿದ್ದರು. ಕಾನೂನಾತ್ಮಕವಾಗಿ ಮಗುವನ್ನು ದತ್ತು ಪಡೆಯದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು.
ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ 8 ವರ್ಷದ ಬಾಲಕಿಯನ್ನು ತಮ್ಮೊಟ್ಟಿಗೆ ಇಟ್ಟುಕೊಂಡಿದ್ದಾರೆ. ಪ್ರಚಾರಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗೀತಾ ಆರೋಪಿಸಿದ್ದರು. ಈ ಸಂಬಂಧ ಬಾಲಾಪರಾಧ ಕಾಯ್ದೆ ಹಾಗೂ ಜೆ.ಜೆ ಆ್ಯಕ್ಟ್ ಅಡಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ ಬಾಲಕಿಯ ಪೋಕಷರು ಈ ಬಗ್ಗೆ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದರು.
"ಸೋನು ಶ್ರೀನಿವಾಸ್ ಗೌಡ 50 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿರುವುದು ನಿಜ. ಆದರೆ ಯಾವುದೇ ರೀತಿಯಲ್ಲಿ ಮಗು ದತ್ತು ಸಂಬಂಧ ಒಪ್ಪಂದ, ಮಾರಾಟ ಪ್ರಕ್ರಿಯೆಗಳು ನಡೆದಿಲ್ಲ. ನಮ್ಮ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವುದಾಗಿ ಸೋನು ಶ್ರೀನಿವಾಸ್ ಗೌಡ ಹೇಳಿದ್ದರಿಂದ ಆಕೆ ಜೊತೆ ಕಳುಹಿಸಿಕೊಟ್ಟಿದ್ದೆವು, ಆಕೆ ಜೊತೆ ನಮ್ಮ ಮಗಳು ಸಂತೋಷದಿಂದಿದ್ದಳು. ಆಗಾಗ್ಗೆ ಮನೆಗೆ ಬಂದು ಮಗಳನ್ನು ನೋಡಿಕೊಂಡು ಹೋಗಲು ಹೇಳಿದ್ದಳು. ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ದತ್ತು ನೀಡುವ ಕಾನೂನು ಪ್ರಕ್ರಿಯೆ ಬಗ್ಗೆ ನಮಗೆ ತಿಳಿದಿರಲಿಲ್ಲ" ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿರುವುದಾಗಿ ವರದಿಯಾಗಿತ್ತು.

ಇನ್ನು ವಿಚಾರಣೆ ವೇಳೆ ಸೋನು ಶ್ರೀನಿವಾಸ್ ಗೌಡ "ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕಾನೂನಾತ್ಮಕವಾಗಿಯೇ ದತ್ತು ಪಡೆಯುತ್ತಿದ್ದೆ. ಆ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ಸಿದ್ಧತೆ ನಡೀತಿತ್ತು. ಮದುವೆಯಾಗದೇ ಮಗುವನ್ನು ನೋಡಿಕೊಂಡಿರಲು ನಿರ್ಧರಿಸಿದ್ದೆ" ಎಂದು ಹೇಳಿಕೆ ನೀಡಿದ್ದರು.


Click it and Unblock the Notifications











