Archana Gautam: ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಅರ್ಚನಾ ಗೌತಮ್‌ರನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್!
ಬಿಗ್ ಬಾಸ್ 16 ರ ಮಾಜಿ ಸ್ಪರ್ಧಿ ಮತ್ತು ರಾಜಕಾರಣಿ ಅರ್ಚನಾ ಗೌತಮ್ ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಹೊರಹಾಕಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಖಚಿತಪಡಿಸಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅಂಶು ಅವಸ್ತಿ ಅವರ ವಿರುದ್ಧದ ದೂರುಗಳ ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಅರ್ಚನಾ ಗೌತಮ್ ಅವರನ್ನು ರಾಷ್ಟ್ರೀಯ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ವರದಿ ಹೇಳಿಕೊಂಡಿದೆ. ಆದರೆ ಆಕೆಯ ಉಚ್ಚಾಟನೆಯನ್ನು ಪ್ರಕಟಿಸುವ ಪತ್ರವು ಇತ್ತೀಚೆಗೆ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮೀರತ್‌ನ ಕಾಂಗ್ರೆಸ್ ಘಟಕದಿಂದ ಬಂದ ದೂರುಗಳ ಆಧಾರದ ಮೇಲೆ ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಂಶು ಅವಸ್ತಿ ತಿಳಿಸಿದ್ದಾರೆ.

ಅರ್ಚನಾಗೆ ರಾಜಕೀಯ ಹಿನ್ನೆಲೆ ಇರಲಿಲ್ಲ
"ಅರ್ಚನಾ ಗೌತಮ್ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರಲಿಲ್ಲ, ಆದರೂ ಪಕ್ಷವು ಅವರನ್ನು ನಂಬಿ, ಗೌರವ ಮತ್ತು ಸ್ಥಾನ ನೀಡಿತು. ಇದಲ್ಲದೇ ಅವರನ್ನು ಹಸ್ತಿನಾಪುರ ಕ್ಷೇತ್ರದಿಂದ ಕಣಕ್ಕಿಳಿಸಿತು. 2022ರ ವಿಧಾಣಸಭಾ ಚುನಾವಣೆಯಲ್ಲಿ ಆಕೆಯ ಬೆಂಬಲಕ್ಕೆ ನಿಂತು ಬೆಂಬಲಿಸಿದ ಮೀರತ್ ಘಟಕದ ಪಕ್ಷದ ಕಾರ್ಯಕರ್ತರೇ ಆಕೆಯ ವಿರುದ್ಧ ಅನುಚಿತ ವರ್ತನೆಯ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಹೀಗಾಗಿ ಪಕ್ಷದ ಶಿಸ್ತು ಸಮಿತಿ ಅರ್ಚನಾ ಗೌತಮ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನಿರ್ಧರಿಸಿದೆ" ಎಂದು ಅಂಶು ಅವಸ್ತಿ ಹೇಳಿದ್ದಾರೆ.
ಉಚ್ಚಾಟನೆ ಘೋಷಿಸುವ ಮೊದಲು ನಟಿ ಅರ್ಚನಾ ಗೌತಮ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ದೂರುಗಳನ್ನು ಉಲ್ಲೇಖಿಸಿರುವ ನೋಟಿಸ್‌ಗೆ ಉತ್ತರಿಸಲು ಆಕೆಗೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಾಡಿಗೆಗೆ ಪಡೆದ ಹಲವಾರು ವಾಹನ ಮಾಲೀಕರಿಗೂ ಅವರು ಹಣ ಪಾವತಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಇನ್ನು, ವಾಹನ ಮಾಲೀಕರು ಹಲವು ಬಾರಿ ಪ್ರಯತ್ನಿಸಿದರೂ ಹಣ ಸಿಗದೇ ಇದ್ದಾಗ ಪಕ್ಷದ ಕಾರ್ಯಕರ್ತರಿಗೆ ದೂರು ಸಲ್ಲಿಸಿದರು. ಅರ್ಚನಾ ಗೌತಮ್ ಅವರು ಪ್ರಚಾರ ಸಾಮಗ್ರಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರಚಾರದ ನಂತರ ಅದನ್ನು ಮಾರಾಟ ಮಾಡಿದರು ಎಂಬ ಆರೋಪ ಕೂಡ ಇದೆ. ಇದನ್ನು ಸಹ ನೋಟಿಸ್‌ನಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅರ್ಚನಾ ಗೌತಮ್
2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಅರ್ಚನಾ ಗೌತಮ್ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಕೇವಲ 1519 ಮತಗಳನ್ನು ಪಡೆದ ಕಾರಣ ಠೇವಣಿ ಕಳೆದುಕೊಳ್ಳುವ ಮೂಲಕ ಸೋಲು ಒಪ್ಪಿಕೊಂಡರು. ಇವರನ್ನು ಚುನಾವಣೆಗೆ ನಿಲ್ಲಿಸದಂತೆ ಅನೇಕರು ಕಾಂಗ್ರೆಸ್ ಮೇಲೆ ಒತ್ತಡ ಕೂಡ ಹಾಕಿದ್ದರು. ಆದರೆ, ಯಾರ ಮಾರನ್ನು ಕೇಳದೆ ಪಕ್ಷ ಇವರನ್ನು ಕಣಕ್ಕಿಳಿಸಿ ಹೀನಾಯ ಸೋಲು ಕಂಡಿತ್ತು.
ಇನ್ನು, ನಟಿ ಅರ್ಚನಾ ಗೌತಮ್ ರಿಯಾಲಿಟಿ ಶೋಗಳ ದೊಡ್ಡ ಕಾರ್ಯಕ್ರಮವಾದ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದರು. ನಟ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 16 ರಲ್ಲಿ ಸ್ವರ್ಧಿಯಾಗಿ ಕಾಣಿಸಿಕೊಂಡಿದ್ದರು. ಅರ್ಚನಾ ಮಿಸ್ ಕಾಸ್ಮೋಸ್ ವರ್ಲ್ಡ್ 2018 ರಲ್ಲಿ ಮಿಸ್ ಬಿಕಿನಿ ಇಂಡಿಯಾ 2018 ಪ್ರಶಸ್ತಿಯನ್ನು ಗೆದ್ದಿದ್ದಾರೆ.


Click it and Unblock the Notifications











