ಮೊದಲ ಗಂಡನಿಂದ ಮೋಸ, ಎರಡನೇ ಮದುವೆಗೆ ಸಿದ್ಧವಾದ ಬಿಗ್ ಬಾಸ್ ಚೈತ್ರಾ..!
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.
ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ. ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಇದಕ್ಕೆ ಚೈತ್ರಾ ವಾಸುದೇವನ್ ಸದ್ಯದ ಉದಾಹರಣೆ.

ಹೌದು, ಚೈತ್ರಾ ವಾಸುದೇವನ್, ಕನ್ನಡ ಕಿರುತೆರೆಯ ಬಹುದೊಡ್ಡ ಹೆಸರು. ಅರಳು ಹುರಿದಂತೆ ಮಾತನಾಡುವ ಚೈತ್ರಾ ವಾಸುದೇವನ್, ಅನುಶ್ರೀ ಅವರಷ್ಟೇ ಹೆಸರನ್ನು ಮಾಡಿರುವವರು. ಇನ್ನು ಚೈತ್ರಾ ಕೇವಲ ನಿರೂಪಕಿ ಮಾತ್ರ ಅಲ್ಲ. ಉದ್ಯಮಿ ಕೂಡ ಹೌದು. ಇವರದ್ದೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಇದೆ. ಬಿಗ್ ಬಾಸ್ ಕನ್ನಡದ 07ನೇ ಸೀಸನ್‌ನಲ್ಲಿ ಕೂಡ ಸ್ಫರ್ಧಿಯಾಗಿ ಭಾಗವಹಿಸಿದ್ದರು ಚೈತ್ರಾ.
ಇಂಥಾ ಚೈತ್ರಾ ವಾಸುದೇವನ್ ಅವರಿಗೆ ಸಂಸಾರದಲ್ಲಿ ಸುಖ ಸಿಗಲಿಲ್ಲ. ಮನೆಯವರೇ ನೋಡಿದ ಹುಡುಗ ಸತ್ಯ ನಾಯ್ಡು ಜೊತೆ ಮದುವೆಯಾದರು ಕೂಡ ಐದು ವರ್ಷದ ಮೇಲೆ ದಾಂಪತ್ಯ ಉಳಿಯಲಿಲ್ಲ. ಹಿಂದೊಮ್ಮೆ ಇಂಜಿನಿಯರಿಂಗ್‌ನ ನಾನು ಮುಗಿಸುತ್ತಿದ್ದಂತಯೇ ನನಗೆ ಮದುವೆ ಆಯ್ತು, ನಾನು ಅಂದುಕೊಂಡಿದ್ದು ಒಂದು .. ಆಗಿದ್ದೇ ಇನ್ನೊಂದು. ನನ್ನಂತವರಿಗೂ ಮೋಸ ಆಗುತ್ತೆ ಎಂದು ನಾನು ಕನಸು ಮನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ ಎಂದು ಕಾರ್ಯಕ್ರಮದಲ್ಲಿಯೇ ಕಣ್ಣೀರು ಹಾಕಿದ್ದರು, ಐದೂವರೆ ವರ್ಷ ಕಾದರೂ ಸಂಸಾರ ಸರಿ ಹೋಗಲಿಲ್ಲ ಎಂದು ಬಿಕ್ಕಿದ್ದರು ಚೈತ್ರಾ.
ಆದರೆ ಈಗ ಚೈತ್ರಾ ಇನ್ನೊಮ್ಮೆ ಮದುವೆಯ ಬಂಧನಕ್ಕೊಳಗಾಗಲು ನಿರ್ಧಾರ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೈತ್ರಾ ವಾಸುದೇವನ್ 'ನಿಮ್ಮೆಲ್ಲರ ಜೊತೆ ನಾನು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸಿತ್ತೇನೆ. 2025ರಲ್ಲಿ ನಾನು ನನ್ನ ಬದುಕಿನ ಹೊಸ ಅಧ್ಯಾಯ ಪ್ರಾರಂಭ ಮಾಡುತ್ತಿದ್ದೇನೆ ಇದು ನನ್ನ ಮದುವೆಯ ಸುಂದರವಾದ ಹೊಸ ಪಯಣ, ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಸದಾ ನನ್ನ ಮೇಲಿರಲಿ'' ಎಂದು ಹೇಳಿದ್ದಾರೆ. ಸದ್ಯಕ್ಕೆ ಚೈತ್ರಾ ಅವರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಅಂದ್ಹಾಗೇ ಚೈತ್ರಾ ಕೆಲ ದಿನಗಳ ಹಿಂದೆ ಪ್ಯಾರಿಸ್ ಪ್ರವಾಸಕ್ಕೆ ಹೋಗಿದ್ದರು. ತಮ್ಮ ಪ್ರವಾಸ್ ಫೋಟೊಗಳನ್ನು ಕೂಡ ಹಂಚಿಕೊಳ್ಳುತ್ತಿದ್ದರು. ಈಗ ಈ ಪ್ಯಾರಿಸ್ ಟ್ರಿಪ್‌ನ ರಹಸ್ಯ ಬಯಲಾಗಿದ್ದು ಚೈತ್ರಾ ತಮ್ಮ ಸಂಗಾತಿಯ ಜೊತೆ ಪ್ಯಾರಿಸ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಆ ಪೈಕಿ ಒಂದು ತುಣುಕನ್ನು ತಾವು ಬರೆದ ಸಾಲುಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನು ಚೈತ್ರಾ ತಾವು ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವದಕ್ಕೆ ಉತ್ತರ ನೀಡಿಲ್ಲ. ಹೀಗಾಗಿ ಕುತೂಹಲದಿಂದ ಅನೇಕರು ಚೈತ್ರಾ ಅವರಲ್ಲಿ ಹುಡುಗನ ಹೆಸರು ಮತ್ತು ಫೋಟೊ ಹಂಚಿಕೊಳ್ಳುವಂತೆ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮಾರ್ಚ್‌ನಲ್ಲಿ ಮದುವೆ ಎಂದು ಹೇಳಿರುವ ಚೈತ್ರಾ ಮದುವೆಯ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯದಲ್ಲಿಯೇ ಚೈತ್ರಾ ವಾಸುದೇವನ್ ಎಲ್ಲ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ.


Click it and Unblock the Notifications











