ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಜೈರಾಜ್(75) ವಿಧಿವಶ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಡಿ. ಆರ್ ಜೈರಾಜ್ ನಿಧನರಾಗಿದ್ದಾರೆ. ಶುಕ್ರವಾರ(ಮಾರ್ಚ್ 13) ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. 2019ರಲ್ಲಿ ಅವಿರೋಧವಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿ ಸೇವೆ ಸಲ್ಲಿಸಿದ್ದರು.
ತುಮಕೂರಿನ ಗುಬ್ಬಿ ಚನ್ನಬಸವೇಶ್ವರ ಥಿಯೇಟರ್ ಮಾಲೀಕರಾಗಿದ್ದ ಜೈರಾಜ್ ಪ್ರದರ್ಶಕರ ವಲಯದಿಂದ ವಾಣಿಜ್ಯ ಮಂಡಳಿ ಅಧ್ಯಕ್ಷ ಪಟ್ಟಕ್ಕೇರಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಗುಬ್ಬಿಯಲ್ಲಿ ನಾಳೆ(ಶನಿವಾರ) ಜೈರಾಜ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ ನಂದಿನಿ ಲೇಔಟ್‌ನಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.

2019ರಲ್ಲಿ ಪ್ರದರ್ಶಕರ ವಲಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನರಸಿಂಹಲು ಹಾಗೂ ಸುಂದರ್ ರಾಜ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಚುನಾವಣೆಗೆ ಸಹ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರೆಲ್ಲ ನಾಮಪತ್ರ ಹಿಂಪಡೆದಿದ್ದರು. ಹಾಗಾಗಿ ಜೈರಾಜ್ ಅವಿರೋಧವಾಗಿ ಆಯ್ಕೆ ಆಗಿದ್ದರು.


Click it and Unblock the Notifications











