ಜೈಲಿನಲ್ಲಿರುವ ನಟ ದರ್ಶನ್‌ಗೆ ಅತ್ಯಾಚಾರ ಆರೋಪಿ ಎಂದು ಹೇಳಿದ್ಯಾರು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ವಿಚಾರಣಾಧೀನ ಕೈದಿಯಾಗಿ 67 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಶೀಘ್ರದಲ್ಲೇ ಬಳ್ಳಾರಿ ಜೈಲಿಗೆ ಅವರನ್ನು ಸ್ಥಳಾಂತರಿಸಲಾಗುತ್ತಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ರಾಜಾತಿಥ್ಯ ಪಡೆಯುತ್ತಿದ್ದದ್ದು ಜಗಜ್ಜಾಹೀರಾಗಿದೆ. ಫೋಟೊ, ವೀಡಿಯೋ ವೈರಲ್ ಆಗಿ ಭಾರೀ ಸುದ್ದಿ ಆಗುತ್ತಿದೆ. ಬೆಂಗಳೂರು ಕೇಂದ್ರ ಕಾರಾಗೃಹದ ವ್ಯವಸ್ಥೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುವಂತಾಗಿದೆ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ಬಗ್ಗೆ ಪರ- ವಿರೋಧ ಚರ್ಚೆ ಜೋರಾಗಿದೆ.

ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಮೀರಿ ನಡೆದುಕೊಳ್ಳಲು ಜೈಲು ಅಧಿಕಾರಿಗಳೇ ಸಾಥ್ ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈಗಾಗಲೇ ಈ ಸಂಬಂಧ 9 ಜನ ಅಧಿಕಾರಿಗಳು ಸಸ್ಪೆಂಡ್ ಮಾಡಲಾಗಿದೆ. ನಟೋರಿಯಸ್ ರೌಡಿಗಳ ಜೊತೆ ದರ್ಶನ್ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆಗಿದೆ.
ಜೈಲಿನಲ್ಲಿ ಇದ್ದುಕೊಂಡೇ ಹೊರಗಡೆ ಇರುವವರ ಜೊತೆ ದರ್ಶನ್ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಆ ವೀಡಿಯೋ ಸಹ ವೈರಲ್ ಆಗಿ ಕಂಟಕ ಎದುರಾಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ 3 ಎಫ್‌ಐಆರ್‌ಗಳು ಸಹ ದಾಖಲಾಗಿದೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.
ದರ್ಶನ್ ಜೈಲು ರಾಜಾತಿಥ್ಯ ಫೋಟೊ ವಿಚಾರ ದೇಶಾದ್ಯಂತ ಸದ್ದು ಮಾಡ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರವೂ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬರೀ ರಾಜ್ಯದ ಬಿಜೆಪಿ ನಾಯಕರು ಮಾತ್ರವಲ್ಲ ಹೊರ ರಾಜ್ಯಗಳ ಬಿಜೆಪಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ಕೊಲೆ ಪ್ರಕರಣ ಆರೋಪಿ ನಟ ದರ್ಶನ್‌ಗೆ ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕದ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಆದರೆ ಆ ಟ್ವೀಟ್‌ನಲ್ಲಿ ದರ್ಶನ್ ಅವರನ್ನು ಅತ್ಯಾಚಾರ ಆರೋಪಿ ಎಂದು ಆಕೆ ಕರೆದಿದ್ದಾರೆ. ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
"ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟದಲ್ಲಿ ಅತ್ಯಾಚಾರ ಹಾಗೂ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ರಾಜಾತಿಥ್ಯ ನೀಡಲಾಗುತ್ತಿದೆ. ಇದಕ್ಕೆ ಏನು ಹೇಳುತ್ತೀರಾ? ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇಥ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ಸದ್ಯ ರೇಖಾ ಶರ್ಮಾ ಟ್ವೀಟ್ ವೈರಲ್ ಆಗಿದ್ದರೂ ಅದನ್ನು ಅವರು ಸರಿಪಡಿಸಲಿಲ್ಲ. ಈ ಬಗ್ಗೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಬರೀ ಕೊಲೆ ಆರೋಪಿ ಅಷ್ಟೇ, ಅತ್ಯಾಚಾರ ಆರೋಪಿ ಅಲ್ಲ ಎಂದು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಎರಡು ದಿನ ಕಳೆದರೂ ಆಕೆ ಈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿಲ್ಲ.


Click it and Unblock the Notifications











