'ಹಯಗ್ರೀವ' ಜೊತೆ ಫೆಬ್ರವರಿ 27ರಂದು ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳ ಲಿಸ್ಟ್
ನೋಡ್ತಾ ನೋಡ್ತಾ ವರ್ಷದ ಎರಡು ತಿಂಗಳು ಕಳೆದೇ ಹೋಯ್ತು. ಫೆಬ್ರವರಿ ಕೊನೆ ವಾರದಲ್ಲಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಟ್ರೈಲರ್ ಹಾಗೂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುವ 4 ಕನ್ನಡ ಸಿನಿಮಾಗಳಿಗೆ ಫೆಬ್ರವರಿ 27ರಂದು ಬಿಡುಗಡೆ ಭಾಗ್ಯ ಸಿಗಲಿದೆ.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಚಿತ್ರಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಎರಡೂ ಸಿನಿಮಾಗಳ ನಡುವೆ ಯಾವುದೇ ಸಿನಿಮಾಗಳನ್ನು ರಿಲೀಸ್ ಮಾಡಲು ಫಿಲ್ಮ್ ಮೇಕರ್ಸ್ ಸಿದ್ಧರಿಲ್ಲ. ಹಾಗಾಗಿ ಅದಕ್ಕಿಂತ ಮುಂಚೆ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ಕೆಲವರು ಆತುರ ತೋರುತ್ತಿದ್ದಾರೆ.

ಕೆಳದ ಎರಡು ತಿಂಗಳಲ್ಲಿ ಕನ್ನಡ ಸಿನಿಮಾಗಳ ಸಾಧನೆ ಅಷ್ಟೇನು ಚೆನ್ನಾಗಿಲ್ಲ. ಇದ್ದಿದ್ದರಲ್ಲಿ 'ಲ್ಯಾಂಡ್‌ಲಾರ್ಡ್', 'ರಕ್ಕಸಪುರದೋಳ್' ಚಿತ್ರಗಳು ಕೊಂಚ ಸದ್ದು ಮಾಡಿದ್ದವು. ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಲ್ಲಿ 2 ಸಿನಿಮಾಗಳು ನಿರೀಕ್ಷೆ ಮೂಡಿಸಿವೆ.
1. ರೈಸ್ ಆಫ್ ಅಶೋಕ
ನೀನಾಸಂ ಸತೀಶ್ ಹಾಗೂ ಸಪ್ತಮಿ ಗೌಡ ನಟನೆಯ 'ರೈಸ್ ಆಫ್ ಅಶೋಕ' ಸಿನಿಮಾ ಅಂತೂ ಇಂತೂ ಈ ವಾರ ತೆರೆಗೆ ಬರ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿತ್ತು. ಮನು ಶೆಡ್ಗಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಳ್ಳಿಯಲ್ಲಿ ಜಾತಿ ತಾರತಮ್ಯ, ಮೇಲ್ವರ್ಗದವರ ದಬ್ಬಾಳಿಕೆ, ಅದರ ವಿರುದ್ಧ ನಾಯಕನ ಹೋರಾಟದ ಕಥೆ ಚಿತ್ರದಲ್ಲಿದೆ.

ಕೆಳವರ್ಗದ ಕುಟುಂಬದ ಅಶೋಕ ಸರ್ಕಾರಿ ಅಧಿಕಾರಿ ಆಗಿ ಸೇವೆ ಸಲ್ಲಿಸುವ ಕನಸು ಕಾಣುವುದು. ಅದಕ್ಕೆ ಎದುರಾಗುವ ಸಮಸ್ಯೆಗಳು, ಅದರಿಂದ ಆತ ಗೆದ್ದು ಬರುವ ವಿಚಾರಗಳು ಚಿತ್ರದಲ್ಲಿದೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರ್ತಿದೆ. ನೀನಾಸಂ ಸತೀಶ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
2. ಹಯಗ್ರೀವ
ರಘುಕುಮಾರ್ ನಿರ್ದೇಶನದಲ್ಲಿ ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ 'ಹಯಗ್ರೀವ' ಸಿನಿಮಾ ಸದ್ದು ಮಾಡ್ತಿದೆ. ಇತ್ತೀಚೆಗೆ ಮಂಡ್ಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ದರ್ಶನ್ ಅಭಿಮಾನಿಗಳು ಈ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೊನೆಗೆ ಬಿಡುಗಡೆ ಆಗ್ತಿದೆ.
ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ವೀರ್ ಮಿಂಚಿದ್ದಾರೆ. ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಕೂಡ ಚಿತ್ರದ ಸಣ್ಣ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ತಾರಾ, ಸಾಧುಕೋಕಿಲ, ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ.
3. ವೀರ ಕಂಬಳ
ಎಸ್. ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಸಿನಿಮಾ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರ್ತಿದೆ. 'ಬಾಬಾ'ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟೈಟಲ್ ಹೇಳುವಂತೆ ಕಂಬಳ ಕ್ರೀಡೆಯ ಸುತ್ತಾ ಸಿನಿಮಾ ಕಥೆ ಹೆಣೆಯಲಾಗಿದೆ. ಆದಿತ್ಯ, ಪ್ರಕಾಶ್ ರಾಜ್ ಹಾಗೂ ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ.
14 ಕೋಟಿ ವೆಚ್ಚದಲ್ಲಿ 'ವೀರ ಕಂಬಳ' ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗ್ತಿದೆ. ಮುಂದೆ ತೆಲುಗು, ತಮಿಳು ಹಾಗೂ ಇಂಗ್ಲೀಷ್ ಭಾಷೆಗೂ ಡಬ್ ಮಾಡುವ ಪ್ರಯತ್ನ ನಡೀತಿದೆ. ಕೋಣಗಳನ್ನು ಓಡಿಸುವ ಶ್ರೀನಿವಾಸ್ ಗೌಡ ಚಿತ್ರದ ನಾಯಕನಾಗಿ ನಟಿಸಿರುವುದು ವಿಶೇಷ.
4. ಸೂಪರ್ ಹಿಟ್
ವಿಜಯಾನಂದ್ ನಿರ್ದೇಶನದಲ್ಲಿ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನೆಯ 'ಸೂಪರ್ ಹಿಟ್' ಚಿತ್ರ ಕೂಡ ಈ ವಾರ ತೆರೆಗೆ ಬರ್ತಿದೆ. ಸಣ್ಣಪುಟ್ಟ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ಗಿಲ್ಲಿ ಬಿಗ್‌ಬಾಸ್ ಮನೆಗೆ ಹೋಗಿ ಕ್ರೇಜ್ ಹೆಚ್ಚಿಸಿಕೊಂಡಿದ್ದು ಗೊತ್ತೇಯಿದೆ. ಆದರೆ ಬಿಗ್‌ಬಾಸ್‌ಗೆ ಹೋಗುವ ಮುನ್ನ ಆತ ನಟಿಸಿದ್ದ ಸಿನಿಮಾಗಳು ಈಗ ಒಂದೊಂದಾಗಿ ಬಿಡುಗಡೆ ಆಗುತ್ತಿದೆ. ಗಿಲ್ಲಿ ಜೊತೆಗೆ ಗೌರವ್ ಶೆಟ್ಟಿ ಈ ಕಾಮಿಡಿ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











