ಈ ವಾರ 'ಕವಲುದಾರಿ' ಜೊತೆ 3 ಚಿತ್ರಗಳ ಬಿಡುಗಡೆ
ಒಂದು ಕಡೆ ಚುನಾವಣೆ ನಡೆಯುತ್ತಿದೆ. ಅದರಲ್ಲಿಯೂ ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರ ಸಿನಿಮಾಗಿಂತ ಕುತೂಹಲ ಮೂಡಿಸಿದೆ. ಇತ್ತ ಐಪಿಎಲ್ ಕೂಡ ಎಂದಿನಂತೆ ಸೌಂಡ್ ಮಾಡುತ್ತಿದೆ. ಇವುಗಳ ನಡುವೆ ಕನ್ನಡದ ನಾಲ್ಕು ಹೊಸ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿದೆ.
ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ 'ಕವಲುದಾರಿ', ನಟ ರಾಕೇಶ್ ಅಡಿಗ ನಿರ್ದೇಶನದ 'ನೈಟ್ ಔಟ್', ವಿರುಪಾ', 'ಜೈ ಕೇಸರಿ ನಂದನ' ಹೀಗೆ ನಾಲ್ಕು ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ.
ನಾಲ್ಕು ಸಿನಿಮಾಗಳ ಪೈಕಿ 'ಕವಲುದಾರಿ' ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಆ ಚಿತ್ರದ ಜೊತೆಗೆ 'ನೈಟ್ ಔಟ್', ವಿರುಪಾ', 'ಜೈ ಕೇಸರಿ ನಂದನ' ಕೂಡ ಅದೃಷ್ಟ ಪರೀಕ್ಷೆ ನಡೆಸಲು ಸಿದ್ಧವಾಗಿವೆ.
ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ವಿವರ ಮುಂದಿದೆ ಓದಿ...

'ಕವಲುದಾರಿ'ಯಲ್ಲಿ ರಿಷಿ ಪ್ರಯಾಣ
ನಟ ಪುನೀತ್ ರಾಜ್ ಕುಮಾರ್ ತಮ್ಮ ಪಿ ಆರ್ ಕೆ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ 'ಕವಲುದಾರಿ' ಈ ಶುಕ್ರವಾರ ರಿಲೀಸ್ ಆಗುತ್ತಿದೆ. ಅನಂತ್ ನಾಗ್, ರಿಷಿ, ಸುಮನಾ ರಂಗನಾಥ್, ರೋಷನಿ ಪ್ರಕಾಶ್ ಚಿತ್ರದ ತಾರಬಳಗದಲ್ಲಿ ಇದ್ದಾರೆ. ಹೇಮಂತ್ ನಿರ್ದೇಶನ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟ್ರೇಲರ್ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ.

ರಾಕೇಶ್ ಅಡಿಗ 'ನೈಟ್ ಔಟ್'
'ಜೋಷ್' ಖ್ಯಾತಿಯ ನಟ ರಾಕೇಶ್ ಅಡಿಗ ಈಗ ಡೈರೆಕ್ಟರ್ ಆಗಿದ್ದಾರೆ. ಅವರ 'ನೈಟ್ ಔಟ್' ಸಿನಿಮಾ ಏಪ್ರಿಲ್ 12 ರಂದು ಬಿಡುಗಡೆಯಾಗುತ್ತಿದೆ. ಭರತ್, ಅಕ್ಷಯ್ ಕುಮಾರ್, ಮತ್ತು ಶ್ರುತಿ ಗೊರಾಡಿಯಾ ಸಿನಿಮಾದ ಕಲಾವಿದರಾಗಿದ್ದಾರೆ. ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆಯಂತೆ.

ಮಕ್ಕಳ ಸಿನಿಮಾ 'ವಿರುಪಾ'
'ವಿರುಪಾ' ಎಂಬ ಮಕ್ಕಳ ಸಿನಿಮಾ ಇದೇ ಶುಕ್ರವಾರ ಬಿಡುಡೆಯಾಗುತ್ತಿದೆ. ಶಾಹಿಲ್ ಭಟ್ಕಳ, ವಿಷ್ಣು ಹಾಗೂ ಚರಣ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹಂಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಪುನೀಕ್ ಶೆಟ್ಟಿ ಚಿತ್ರದ ನಿರ್ದೇಶಕರಾಗಿದ್ದಾರೆ. 1 ಗಂಟೆ 40 ನಿಮಿಷ ಸಿನಿಮಾದ ಅವಧಿ ಇದೆ.

ಉತ್ತರ ಕರ್ನಾಟಕದ 'ಜೈ ಕೇಸರಿ ನಂದನ'
'ಜೈ ಕೇಸರಿ ನಂದನ' ಪಕ್ಕಾ ಉತ್ತರ ಕರ್ನಾಟಕದ ಸಿನಿಮಾವಾಗಿದೆ. 'ಊರು ಸುಟ್ಟು ಹನುಮಪ್ಪ ಹೊರಗೆ' ಎಂಬ ನಾಟಕವನ್ನು ಆಧಾರಿಸಿ ಈ ಸಿನಿಮಾವನ್ನು ಮಾಡಲಾಗಿದೆ. ಹನುಮಂತ ಹಾಲಗೇರಿ ನಾಟಕಕ್ಕೆ ಶ್ರೀಧರ್ ಜಾವೂರ್ ಸಿನಿಮಾ ರೂಪ ನೀಡಿದ್ದಾರೆ. ಕಲ್ಲೇಶ್ ವರ್ಧನ್ ಮತ್ತು ಅಮೃತ ಆರ್ ಚಿತ್ರದ ನಾಯಕ ನಾಯಕಿಯಾಗಿದ್ದಾರೆ.


Click it and Unblock the Notifications











