ರಮ್ಯಾ-ದಿಗಂತ್ ಜೋಡಿಯ 'ವಸಂತ ವಸಂತ' ಹಾಡು ಈಗ ಯಾಕೆ ಇಷ್ಟೊಂದು ವೈರಲ್?
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಂ ತೆರೆದರೆ ಸಾಕು, ಎಲ್ಲೆಡೆ ಕೇಳಿ ಬರುತ್ತಿರುವುದು ಒಂದೇ ಹಾಡು. "ವಸಂತ ವಸಂತ...ವಂಡರ್‌ಫುಲ್ ವಸಂತ..." ಎನ್ನುವ ಈ ಸುಮಧುರ ಗೀತೆ ಈಗ ಎಲ್ಲರ ಫೇವರಿಟ್ ಆಗಿದೆ. ಹಳೆಯ ಹಾಡಾದರೂ, ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎಂಬಂತೆ ಈ ಹಾಡು ಈಗಿನ ಯುವಜನತೆಗೆ ಸಖತ್ ಕಿಕ್ ಕೊಡುತ್ತಿದೆ.
ಅಂದಹಾಗೆ, ಈ ಹಾಡು ಈಗ ಯಾಕೆ ಇಷ್ಟೊಂದು ಸೌಂಡ್ ಮಾಡುತ್ತಿದೆ ಗೊತ್ತಾ? ಇದಕ್ಕೆ ಮುಖ್ಯ ಕಾರಣ ಅಂದಿನ ಆ ಸುಂದರ ಸಾಹಿತ್ಯ ಮತ್ತು ಮಧುರವಾದ ಟ್ಯೂನ್. ಅಂದು ಕೇಳಿದವರಿಗೂ ಇಂದಿನ ಪೀಳಿಗೆಗೂ ಈ ಹಾಡು ಒಂದು ರೀತಿಯ 'ರೊಮ್ಯಾಂಟಿಕ್ ವೈಬ್' ನೀಡುತ್ತಿದೆ. ಡಿಜಿಟಲ್ ಲೋಕದಲ್ಲಿ ಈ ಸಾಂಗ್ ಈಗ ನ್ಯಾಷನಲ್ ಕ್ರಶ್ ಅಂದರೂ ತಪ್ಪಾಗಲಾರದು.

ಈ ಹಾಡಿನ ಅಲೆ ಎಷ್ಟು ಜೋರಾಗಿದೆ ಎಂದರೆ, ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಈ ಟ್ರೆಂಡ್ ನೋಡುತ್ತಿದ್ದರೆ 'ಓಲ್ಡ್ ಈಸ್ ಗೋಲ್ಡ್' ಎಂಬ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಹಾಗಾದರೆ, ಈ ಹಾಡು ಯಾವ ಸಿನಿಮಾದ್ದು? ಇದರ ಹಿಂದಿರುವ ಆ ರೊಮ್ಯಾಂಟಿಕ್ ಕಥೆಯೇನು? ಇಲ್ಲಿದೆ ಡಿಟೈಲ್ಸ್.
ಡಿಕೆಡಿ ವೇದಿಕೆಯಲ್ಲಿ ರಚಿತಾ ರಾಮ್ ಸೃಷ್ಟಿಸಿದ ಸಂಚಲನ
ಈ ಹಾಡು ಇದ್ದಕ್ಕಿದ್ದಂತೆ ಇಷ್ಟೊಂದು ವೈರಲ್ ಆಗಲು ಅಸಲಿ ಕಾರಣ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' (DKD) ವೇದಿಕೆ. ಈ ಶೋನಲ್ಲಿ ಜಡ್ಜ್ ಆಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಈ ಹಾಡನ್ನು ತುಂಬಾ ಮುದ್ದಾಗಿ ಗುನುಗಿದ್ದರು. ಅವರ ಆ ಕ್ಯೂಟ್ ಎಕ್ಸ್‌ಪ್ರೆಷನ್ ಮತ್ತು ಹಾಡಿನ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡಿದ್ದು, ಇನ್‌ಸ್ಟಾಗ್ರಾಂ ರೀಲ್ಸ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.
ಯಾವ ಸಿನಿಮಾ? ಯಾರಿದು ಜೋಡಿ?
ಈ ಸೊಗಸಾದ ಹಾಡು 2007ರಲ್ಲಿ ತೆರೆಕಂಡ 'ಮೀರಾ ಮಾಧವ ರಾಘವ' ಚಿತ್ರದ್ದು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ನಿರ್ದೇಶಿಸಿದ್ದರು. ಸೀರಿಯಲ್ ಲೋಕದ ದಿಗ್ಗಜರಾದ ಸೀತಾರಾಂ ಅವರು ಬೆಳ್ಳಿತೆರೆಯ ಮೇಲೆ ಹೆಣೆದ ಈ ಪ್ರೇಮಕಥೆ ಇಂದಿಗೂ ಅನೇಕರ ನೆನಪಿನಲ್ಲಿ ಹಸಿರಾಗಿದೆ. ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತು ಚಾಕೊಲೇಟ್ ಹೀರೊ ದಿಗಂತ್ ಜೋಡಿಯಾಗಿ ನಟಿಸಿದ್ದರು.
ಹಂಸಲೇಖ ಸಂಗೀತದ ಮಾಂತ್ರಿಕತೆ
ಈ ಹಾಡಿಗೆ ಜೀವ ತುಂಬಿದ್ದು 'ನಾದಬ್ರಹ್ಮ' ಹಂಸಲೇಖ. ಅವರೇ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ನೀಡಿದ್ದರು. ಹಂಸಲೇಖ ಅವರ ಸಾಹಿತ್ಯದಲ್ಲಿ ಯಾವಾಗಲೂ ಒಂದು ವಿಶೇಷ ಅರ್ಥವಿರುತ್ತದೆ. ಪ್ರಕೃತಿಯ ಸೊಬಗು ಮತ್ತು ಪ್ರೇಮಿಗಳ ನಡುವಿನ ತುಂಟಾಟವನ್ನು ಅವರು ಪದಗಳಲ್ಲಿ ಪೋಣಿಸಿದ ರೀತಿ ಅದ್ಭುತ. ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್ ಧ್ವನಿಯಲ್ಲಿ ಈ ಹಾಡು ಅಂದು ಎಷ್ಟು ಫೇಮಸ್ ಆಗಿತ್ತೋ, ಇಂದು ಕೂಡ ಅಷ್ಟೇ ಸದ್ದು ಮಾಡುತ್ತಿದೆ.

ಯಾಕಾಯ್ತು ಈ ಹಾಡು ಮತ್ತೆ ಫೇಮಸ್?
ಮೆಲೋಡಿ ಹಾಡುಗಳು ಯಾವತ್ತೂ ಸೋಲೊದಿಲ್ಲ ಎನ್ನುವುದಕ್ಕೆ ಈ ಹಾಡೇ ಸಾಕ್ಷಿ. ಆಗಿನ ಕಾಲದ ಈ ಜೋಡಿಯ ಕ್ಯೂಟ್ ಲುಕ್ ಇಂದಿನ ರೀಲ್ಸ್ ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ. ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವ ಸಾಹಿತ್ಯ ಇಲ್ಲಿದೆ. ಈ ಹಾಡಿನ ಆಡಿಯೋ ಹಕ್ಕುಗಳನ್ನು ಹೊಂದಿರುವ ಝೆಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಮತ್ತೆ ಮುನ್ನೆಲೆಗೆ ಬಂದಿದೆ.
ಲೈಟ್ ಆದ ರೊಮ್ಯಾಂಟಿಕ್ ಸ್ಟೋರಿ
'ಮೀರಾ ಮಾಧವ ರಾಘವ' ಸಿನಿಮಾ ಒಂದು ತ್ರಿಕೋನ ಪ್ರೇಮಕಥೆಯನ್ನೊಳಗೊಂಡ ಸುಂದರ ಚಿತ್ರ. ಇಲ್ಲಿ ಮೀರಾ ಪಾತ್ರದಲ್ಲಿ ರಮ್ಯಾ ಸಖತ್ ಮಿಂಚಿದ್ದರು. ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದರಿಂದ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಈ 'ವಸಂತ ವಸಂತ' ಹಾಡು ಪ್ರೇಮಿಗಳ ಮನಸ್ಸಿನಲ್ಲಿ ಪ್ರೇಮದ ವಸಂತ ಕಾಲವನ್ನು ನೆನಪಿಸುತ್ತದೆ. ಶ್ರೀನಾಥ್ ಹಲ್ನಾಯಕನಹಳ್ಳಿ ಅವರು ನಿರ್ಮಾಣ ಮಾಡಿದ ಈ ಚಿತ್ರ ಅಂದು ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಸುಮಾರು 19 ವರ್ಷಗಳ ನಂತರ ಈ ಹಾಡು ಮತ್ತೆ ಟ್ರೆಂಡ್ ಆಗುತ್ತಿರುವುದು ಕನ್ನಡ ಚಿತ್ರರಂಗದ ಹೆಮ್ಮೆ. ನೀವು ಇನ್ನು ಈ ಹಾಡಿಗೆ ರೀಲ್ಸ್ ಮಾಡಿಲ್ಲ ಅಂದ್ರೆ, ಈಗಲೇ ಟ್ರೈ ಮಾಡಿ.


Click it and Unblock the Notifications











