ಬಿಟಿಎಸ್ ಬಸ್ ಕಂಡೆಕ್ಟರ್ ರಜನಿಕಾಂತ್ ಐಡಿ ಕಾರ್ಡ್ ಫುಲ್ ವೈರಲ್; ತಿಂಗಳ ಸಂಬಳ ಎಷ್ಟಿಷ್ಟು?
ಭಾರತೀಯ ಚಿತ್ರರಂಗದ ದಿಗ್ಗಜ ನಟ ರಜನಿಕಾಂತ್. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿರಾವ್ ಗಾಯಕ್ವಾಡ್ ಮುಂದೆ ಮದ್ರಾಸ್‌ಗೆ ಹೋಗಿ ತಮಿಳು ಸಿನಿಮಾಗಳಲ್ಲಿ ನಟಿಸಿ ಗೆದ್ದವರು. ತಮ್ಮ ಸ್ಟೈಲ್, ವಿಭಿನ್ನ ಮ್ಯಾನರಿಸಂ ಹಾಗೂ ನಟನೆ ಮೂಲಕ ಸೂಪರ್ ಸ್ಟಾರ್ ಪಟ್ಟಕ್ಕೇರಿದವರು. ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ಬಳಿಕ ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಲಿತು ಚಿತ್ರರಂಗ ಪ್ರವೇಶಿಸಿದರು. ಸದ್ಯ ರಜನಿಕಾಂತ್ ಕಂಡೆಕ್ಟರ್ ಐಡಿ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಬೆಂಗಳೂರು ಸಾರ್ವಜನಿಕ ಸಾರಿಗೆ ಸಿಬ್ಬಂದಿ ಐಡಿ ಕಾರ್ಡ್. ಹೆಸರು- ಶಿವಾಜಿ ರಾವ್ ಗಾಯಕ್ವಾಡ್, ಶ್ರೀನಗರ ಡಿಪೊ, ರೂಟ್ ನಂ 10ಎ, ಎಂಪ್ಲಾಯಿ ಐಡಿ ಬಿಟಿಎಸ್/71/134, ಕೆಲಸಕ್ಕೆ ಸೇರಿದ ದಿನ 18-06-1971, ಜನ್ಮದಿನ 12-12-1950, ಬ್ಲೆಡ್ ಗ್ರೂಪ್- O+, ತಿಂಗಳ ಸಂಬಳ 275 ರೂ. ಎಂದು ನಮೂದಿಸಿರುವುದನ್ನು ನೋಡಬಹುದು. ರಜನಿಕಾಂತ್ ಹಳೇ ಫೋಟೊ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಬಸ್ ಕಂಡೆಕ್ಟರ್ ಆಗಿದ್ದಾಗಲೇ ರಜನಿಕಾಂತ್ ತಮ್ಮ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿದ್ದರು. ವಿಷಲ್ ಹಾಕಿ ಬಸ್ ನಿಲ್ಲಿಸಲು ಸೂಚನೆ ಕೊಡುತ್ತಿದ್ರು, ನಿಧಾನವಾಗಿ ಚಲಿಸುತ್ತಿದ್ದ ಬಸ್‌ಗೆ ಓಡಿ ಬಂದು ಸ್ಟೈಲ್ ಹತ್ತುತ್ತಿದ್ರು, ಸ್ಟೈಲ್ ಆಗಿ ಟಿಕೆಟ್ ಹರಿಯುತ್ತಿದ್ರು. ಆಗ ಮೆಜೆಸ್ಟಿಕ್‌ನಿಂದ ಶ್ರೀನಗರ (ಮಾರ್ಗ 10A) ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದವರು ಇವತ್ತಿಗೂ ಕಂಡೆಕ್ಟರ್ ಶಿವಾಜಿಯನ್ನು ಮರೆತ್ತಿಲ್ಲ.
ಇವತ್ತು ಸೂಪರ್ ಸ್ಟಾರ್ ಆಗಿದ್ರು, ಭಾರತದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ರು ನೂರಾರು ಕೋಟಿ ಆಸ್ತಿ ಒಡೆಯನಾಗಿದ್ರು ರಜನಿಕಾಂತ್ ಮಾತ್ರ ಹಳೆಯದ್ದನ್ನು ಮರೆತ್ತಿಲ್ಲ. ಆಗಾಗ್ಗೆ ಬೆಂಗಳೂರಿಗೆ ಬರ್ತಾರೆ. ತಾವು ಚಿಕ್ಕಂದಿನಿಂದ ಆಡಿ ಓದಿ ಬೆಳೆದ ದಿನಗಳನ್ನು ಮೆಲುಕು ಹಾಕ್ತಾರೆ. ಅವತ್ತು ಬಸ್ ಕಂಡೆಕ್ಟರ್ ಆಗಿದ್ದಾಗ ತನ್ನ ಜೊತೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜ್ ಬಹದ್ದೂರ್ ಜೊತೆ ಸ್ನೇಹ ಉಳಿಸಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ಬೆಂಗಳೂರಿನ ಜಯನಗರದ ಬಿಎಂಟಿಸಿ ಬಸ್ ಡಿಪೋ ಸಂಖ್ಯೆ 4ಕ್ಕೆ ರಜನಿಕಾಂತ್ ಡಿಢೀರ್ ಭೇಟಿ ನೀಡಿದ್ದರು. ಸ್ನೇಹಿತ ರಾಜ್ ಬಹದ್ದೂರ್ ಜೊತೆ ಅಲ್ಲಿಗೆ ಹೋಗಿ ಕೆಲವೊತ್ತು ಸಮಯ ಕಳೆದಿದ್ದರು. ಅಲ್ಲಿ ಈಗ ಇರುವ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ತೆಗೆಸಿಕೊಂಡಿದ್ದರು.

ಬೆಂಗಳೂರಿನ ಹನುಮಂತನಗರದಲ್ಲಿ ರಜನಿಕಾಂತ್ ಹುಟ್ಟಿದ್ದರು. ಗವಿಪುರಂನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದಿದ್ದರು. ಬಳಿಕ ಎಪಿಎಸ್ ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬಸ್ ಕಂಡೆಕ್ಟರ್ ಆಗುವ ಮುನ್ನ ಕೂಲಿ ಕೆಲಸ ಮಾಡಿದ್ದರು ರಜನಿಕಾಂತ್. ಕಾರ್ಪೆಂಟರ್ ಆಗಿ ಹೋಟೆಲ್ ಸರ್ವರ್ ಆಗಿ ಕೂಡ ಬೆಂಗಳೂರಿನಲ್ಲಿ ದುಡಿದಿದ್ದರು. 'ಕೂಲಿ' ಆಗಿ ಕೆಲಸ ಮಾಡುತ್ತಿದ್ದಾಗ ಸಹಪಾಠಿಯೊಬ್ಬ ಅಪಹಾಸ್ಯ ಮಾಡಿದ್ದಕ್ಕೆ ಶಿವಾಜಿ ಬಹಳ ನೋವುಂಡಿದ್ದರು. 'ಕೂಲಿ' ಸಿನಿಮಾ ಬಿಡುಗಡೆ ಸಮಯದಲ್ಲಿ ಈ ವಿಚಾರ ಹಂಚಿಕೊಂಡಿದ್ದರು.
ಶಾಲೆ, ಕಾಲೇಜು ಮುಗಿಸಿ ಕೆಲಸ ಇಲ್ಲದೇ ಕೂಲಿ ಕೆಲಸ ಮಾಡುವಂತಾಗಿತ್ತು. ಅದೇ ಸಮಯದಲ್ಲಿ ಯಾರೋ ಕರೆದು ಲಗೇಜ್ ತೆಗೆದುಕೊಂಡು ಬರುವಂತೆ ಹೇಳಿದಾಗ ರಜನಿಕಾಂತ್ ಸಹಾಯ ಮಾಡಿದ್ದಾರೆ. ಆದರೆ ಆ ವ್ಯಕ್ತಿ ಯಾರೋ ಗೊತ್ತಿರುವವರು ಎಂದು ಅನಿಸಿದೆ. ಕೊನೆಗೆ ಆತ 2 ರೂಪಾಯಿ ನನ್ನ ಕೈಗಿಟ್ಟು "ಅವತ್ತು ನಿನಗಿದ್ದ ಅಹಂಕಾರ ಅಷ್ಟಿಷ್ಟಲ್ಲ. ನಿನಗೆ ಆ ಕಾಲೇಜು ದಿನಗಳು ನೆನಪಿದ್ಯಾ? ಅಂತ ಹೇಳಿದ್ದರು" ಎಂದು ರಜನಿಕಾಂತ್ ನೆನಪಿಸಿಕೊಂಡಿದ್ದರು. ಹೀಗೆ ಕೂಲಿ ಆಗಿದ್ದ ಶಿವಾಜಿ ಬಳಿಕ ಸಂಬಂಧಿರಕರೊಬ್ಬರ ಸಲಹೆ ಮೇರೆಗೆ ಬಸ್ ಕಂಡೆಕ್ಟರ್ ಕೆಲಸಕ್ಕೆ ಸೇರಿದ್ದರು.
ಸದ್ಯ ವೈರಲ್ ಆಗುತ್ತಿರುವ ಐಡಿ ಕಾರ್ಡ್‌ನಲ್ಲಿ ತಿಂಗಳಿಗೆ 275 ರೂ. ಸಂಬಳ ಎಂದು ನಮೂದಿಸಲಾಗಿದೆ. ಐಡಿ ಕಾರ್ಡ್‌ನಲ್ಲಿ ಸಂಬಳದ ವಿಚಾರ ಇರುತ್ತಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಜನಿಕಾಂತ್ ತಮ್ಮ ಕಂಡೆಕ್ಟರ್ ಜೀವನದ ಬಗ್ಗೆ ಹೇಳಿದ ವಿಚಾರಗಳನ್ನು ಸೇರಿಸಿ ಅಭಿಮಾನಿಗಳು ಎಐ ಸಹಾಯದಿಂದ ಡಿಸೈನ್ ಮಾಡಿರುವ ಐಡಿ ಕಾರ್ಡ್ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ರಜನಿಕಾಂತ್ ಕಂಡೆಕ್ಟರ್ ಆಗಿದ್ದಾಗ ತಿಂಗಳಿಗೆ 700 ರೂ. ಸಂಬಳ ಪಡೆಯುತ್ತಿದ್ದರು ಎಂದು ಖುದ್ದು ಅವರ ಸಹೋದರ ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications