ಪುಟ್ಟಣ್ಣ ಕಣಗಾಲ್ ಸಹೋದರ ಕೆನ್ನೆಗೆ ಬಾರಿಸಿದ್ರು, ಅಣ್ಣಾವ್ರ ಜೊತೆ ಸಿನಿಮಾ ಸಾಧ್ಯವಾಗಲೇ ಇಲ್ಲ; ಜೋ ಸೈಮನ್ ಸಿನಿಪಯಣ
ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋ ಕಮರ್ಷಿಯಲ್ ಸಿನಿಮಾಗಳಿಂದ ಚಿತ್ರರಂಗದಲ್ಲಿ ಹೆಸರಾಗಿದ್ದರು. ವಿಷ್ಣುವರ್ಧನ್, ಅಂಬರೀಶ್ ಹಾಗೂ ಟೈಗರ್ ಪ್ರಭಾಕರ್ ಜೊತೆ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿದ್ದರು.
ಫಿಲ್ಮ್‌ಚೇಂಬರ್ ಕಛೇರಿಯಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಜೋ ಸೈಮನ್ ಅವರಿಗೆ ಎದೆನೋವು ಬಂದಿತ್ತು. ಕೂಡಲೇ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಲಿಲ್ಲ. 1977ರಲ್ಲಿ 'ಒಂದು ಪ್ರೇಮದ ಕಥೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರ್ತಿಸಿಕೊಂಡಿದ್ದರು. ಅದಕ್ಕೂ ಮುನ್ನ ಹಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. 33 ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋ ಸೈಮನ್ ನೂರಾರು ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದರು.

1967ರಲ್ಲಿ ಜೋ ಸೈಮನ್ ಚಿತ್ರರಂಗ ಪ್ರವೇಶಿಸಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದ ಜೋ ಸೈಮನ್ ಅವರನ್ನು ಚಿತ್ರರಂಗಕ್ಕೆ ಹೋಗುವಂತೆ ಕೆಲವರು ಪ್ರೇರೇಪಿಸಿದ್ದರು. ಮಂಡ್ಯದ ಪಾಂಡವಪುರದಲ್ಲಿ ಹುಟ್ಟಿ ಬೆಳೆದವರು ಜೋ ಸೈಮನ್. ಸಂಗೀತ ಗುಣಸಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ತಮಿಳಿನಲ್ಲಿ ಎಂಜಿಆರ್, ಜಯಲಲಿತಾ ನಟನೆಯ 'ರಗಸಿಯ ಪೊಲೀಸ್ 115' ಎಂಬ ಚಿತ್ರದಲ್ಲಿ ಅಚಾನಕ್ ಆಗಿ ಕ್ಯಾಮರಾ ಮುಂದೆ ನಿಂತಿದ್ದರು. ಆ ಚಿತ್ರಕ್ಕೆ ಬಿ. ಆರ್ ಪಂತುಲು ಆಕ್ಷನ್ ಕಟ್ ಹೇಳಿದ್ದರು.
ಆರಂಭದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಗುರ್ತಿಸಿಕೊಂಡಿದ್ದ ಜೋ ಸೈಮನ್ ಬಳಿಕ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿದ್ದರು. ಸೆಟ್‌ನಲ್ಲಿ ಇದ್ದಾಗ ಎಲ್ಲರೂ ನಿರ್ದೇಶಕರಿಗೆ ಗೌರವ ಕೊಡುತ್ತಿದ್ದರು. ನಿರ್ದೇಶಕನಿಗೆ ಒಂದು ಚಿತ್ರಕ್ಕೆ ಬಹಳ ಮುಖ್ಯ ಎಂದು ಗೊತ್ತಾಗಿತ್ತು. ಬಳಿಕ ಕ್ಯಾಮರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಆರಂಭಿಸಿದರು. 'ಬೆಟ್ಟದ ಭೈರವ' ಚಿತ್ರಕ್ಕೆ ಸಹಾಯಕನಾಗಿ ಕ್ಲಾಪ್ ಬಾಯ್ ಆಗಿ ಕೆಲಸ ಮಾಡಿದ್ದರು. 'ನಾಗಕನ್ಯೆ' ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಅವಕಾಶ ಸಿಕ್ಕಿತ್ತು.

'ನಾಗಕನ್ಯೆ' ಚಿತ್ರದ ಸಮಯದಲ್ಲೇ ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಪರಿಚಯ ಸ್ನೇಹ ಶುರುವಾಯಿತು. 'ನಾನು ನೀನು ಜೋಡಿ' ಎಂಬ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಸಹೋದರ ಕಣಗಲ್ ಪ್ರಭಾಕರ್ ಶಾಸ್ತ್ರಿ ನಿರ್ದೇಶನ ಮಾಡಿದ್ದರು. ಆ ಚಿತ್ರಕ್ಕೆ ಕೂಡ ಕ್ಲಾಪ್ ಬಾಯ್ ಆಗಿ ಕೆಲಸ ಮಾಡಿದ್ದರು. ಬಹಳ ಕೋಪಿಷ್ಠರಾಗಿದ್ದ ಪ್ರಭಾಕರ್ ಶಾಸ್ತ್ರಿ ಒಮ್ಮೆ ಜೈ ಸೈಮನ್ ಕೆನ್ನೆಗೆ ಬಾರಿಸಿದ್ದರು. ಕ್ಲಾಪ್ ಬೋರ್ಡ್ ಅನ್ನು ತಗೊಂಡು ಹೋಗಿ ಕೊಡುವುದು ತಡ ಮಾಡಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದರು.
ನಾನು ಅಳ್ತಾ ನಿಂತಿದ್ದೆ. ಆರ್‌ಕೆಎನ್ ಪ್ರಸಾದ್ ಬಂದು ಸಮಾಧಾನ ಮಾಡಿದ್ರು. ನೀನು ದೊಡ್ಡ ಡೈರೆಕ್ಟರ್ ಆಗ್ತೀಯಾ ಬಿಡು, ಪ್ರಭಾಕರ್ ಶಾಸ್ತ್ರಿ ಕೈಲಿ ಒದೆ ತಿಂದಿದ್ದೀಯಾ ಅದೃಷ್ಟ ಬರುತ್ತೆ ಎಂದಿದ್ದರು ಎಂದು ಗೌರೀಶ್ ಅಕ್ಕಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸ್ವತಃ ಜೈ ಸೈಮನ್ ನೆನಪಿಸಿಕೊಂಡಿದ್ದರು.
ಅವತ್ತಿನ ಕಾಲಕ್ಕೆ ಸ್ಟಾರ್ ನಟರ ಜೊತೆಗೆಲ್ಲಾ ಸಿನಿಮಾ ಮಾಡಿದ್ರು, ಅಣ್ಣಾವ್ರ ಜೊತೆ ಕೆಲಸ ಮಾಡುವ ಅವಕಾಶ ಜೋ ಸೈಮನ್‌ಗೆ ಸಿಗಲಿಲ್ಲ. ವಿಷ್ಣು ಕ್ಯಾಂಪ್ ನಿರ್ದೇಶಕ ಎನ್ನುವ ಹೆಸರು ಬದಲಾಯಿಸಲು ಅಣ್ಣಾವ್ರಿಗೆ ಸಿನಿಮಾ ಮಾಡುವಂತೆ ಉದಯ್ ಶಂಕರ್ ಹೇಳಿದ್ರು. ಅದಕ್ಕಾಗಿ ಪ್ರಯತ್ನ ಕೂಡ ನಡೆದಿತ್ತು. 1983ರಲ್ಲಿ ಸಿನಿಮಾ ಮಾತುಕತೆ ನಡೆದಿತ್ತು. ಕಥೆ ಕೂಡ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದುವರೆಯಲಿಲ್ಲ.


Click it and Unblock the Notifications











