ಒಂದಲ್ಲ ಎರಡಲ್ಲ 8 ಕನ್ನಡ ಚಿತ್ರಗಳು ಈ ವಾರ ರಿಲೀಸ್; ಇಲ್ಲಿದೆ ಲಿಸ್ಟ್
ಹೊಸ ವರ್ಷ ಯಾಕೋ ಕನ್ನಡ ಚಿತ್ರರಂಗಕ್ಕೆ ಅದೃಷ್ಟ ತಂದುಕೊಡಲಿಲ್ಲ. ದೊಡ್ಡ ಸಿನಿಮಾಗಳು ಬರದೇ ಇರುವುದು ಅದಕ್ಕೆ ಕಾರಣ ಇರಬಹುದು. ಇದ್ದಿದ್ದರಲ್ಲಿ 'ಛೂ ಮಂತರ್' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿ ವರ್ಷದ ಮೊದಲ ಹಿಟ್ ಎನಿಸಿಕೊಂಡಿದೆ. ಬಳಿಕ ಬಂದ ಚಿತ್ರಗಳು ಗೆಲ್ಲಲಿಲ್ಲ. ಈ ವಾರ 8 ಚಿತ್ರಗಳು ತೆರೆಗಪ್ಪಳಿಸುತ್ತಿವೆ.
ವರ್ಷದ ಮೊದಲ ತಿಂಗಳು ಕಳೆದೇ ಹೋಯ್ತು. ತಿಂಗಳಾಂತ್ಯಕ್ಕೆ ವೀಕೆಂಡ್ ಬರ್ತಿದೆ. ಕೊಂಚ ನಿರೀಕ್ಷೆ ಮೂಡಿಸಿದ್ದ 'ಸಂಜು ವೆಡ್ಸ್ ಗೀತಾ-2' ಹಾಗೂ 'ರಾಯಲ್' ಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿವೆ. ಕೆಲ ಚಿತ್ರಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡಲಿಲ್ಲ. ಆ ಚಿತ್ರಗಳು ತೆರೆಗೆ ಬಂದಿದ್ದೇ ಕೆಲವರಿಗೆ ಕೆಲವರಿಗೆ ಗೊತ್ತಾಗಲಿಲ್ಲ. ಈ ವಾರ ಬರ್ತಿರೋ ಸಿನಿಮಾಗಳ ಕಥೆ ಕೂಡ ಅದೇ ರೀತಿ ಇದೆ.

ಅಂದಹಾಗೆ ಈ ವಾರ ಒಟ್ಟು 8 ಕನ್ನಡ ಸಿನಿಮಾಗಳು ತೆರೆಗೆ ಬರ್ತಿವೆ. ಅದರಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಹಾಗೂ ನವೀನ್ ಶಂಕರ್ ನಟನೆಯ 'ನೋಡಿದವರು ಏನಂತಾರೆ' ಚಿತ್ರಗಳ ಬಗ್ಗೆ ಮಾತ್ರ ಕೆಲವರಿಗೆ ಮಾಹಿತಿ ಇದೆ. ಇನ್ನುಳಿದ ಯಾವುದೇ ಚಿತ್ರಕ್ಕೆ ಸರಿಯಾದ ಪ್ರಚಾರ ಮಾಡುತ್ತಿಲ್ಲ.
ಗಣ
ಪ್ರಜ್ವಲ್ ದೇವರಾಜ್ ನಟನೆಯ 6 ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ. ಅದರಲ್ಲಿ ಮೊದಲ ಸಿನಿಮಾ 'ಗಣ'. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ಬಿಡುಗಡೆ ಆಗುತ್ತಿದೆ. ಇದೊಂದು ಟೈಮ್ ಟ್ರಾವೆಲ್ ಥ್ರಿಲ್ಲರ್ ಸಿನಿಮಾ. ಚೆರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ಥು ಚಿತ್ರಕ್ಕೆ ಹಣ ಹೂಡಿದ್ದಾರೆ. ಹರಿಪ್ರಸಾದ್ ಜಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ನೋಡಿದವರು ಏನಂತಾರೆ
ಕುಲದೀಪ್ ಕಾರಿಯಪ್ಪ ನಿರ್ದೇಶನದ 'ನೋಡಿದವರು ಏನಂತಾರೆ' ಚಿತ್ರ ಟೈಟಲ್‌ನಿಂದಲೇ ಕುತೂಹಲ ಮೂಡಿಸಿದೆ. ನವೀನ್ ಶಂಕರ್ ಜೊತೆ ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಮಿಂಚಿದ್ದಾರೆ. ಮಿಡ್ಲ್ ಕ್ಲಾಸ್ ಮನಸ್ಥಿತಿಯ ಬಗ್ಗೆ ಇಡೀ ಸಿನಿಮಾ ಕತೆ ಸುತ್ತುತ್ತದೆ. ನಾಗೇಶ್ ಗೋಪಾಲ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಬೇಗೂರು ಕಾಲೋನಿ
ಹಳಬರು ಹಾಗೂ ಹೊಸಬರು ಸೇರಿ ಮಾಡಿರುವ ಸಿನಿಮಾ 'ಬೇಗೂರು ಕಾಲೋನಿ'. ಟೈಟಲ್ ಹೇಳುವಂತೆ ಇದೊಂದು ಕಾಲೋನಿ ಜನ ನೋವು ನಲಿವಿನ ಕಥಾಹಂದರದ ಸಿನಿಮಾ. ರಾಜೀವ್ ಹನು ಮತ್ತು ಪಲ್ಲವಿ ಪರ್ವ ಚಿತ್ರ ಪ್ರದಾನ ಭೂಮಿಕೆಯಲ್ಲಿದ್ದಾರೆ. ಬೊಮ್ಮನಹಳ್ಳಿ, ಬೇಗೂರು, ಸರ್ಜಾಪುರ, ಅತ್ತಿಬೆಲೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ. ಫ್ಲೈಯಿಂಗ್ ಕಿಂಗ್ ಮಂಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಅಲ್ಲೇ ಡ್ರಾ ಅಲ್ಲೇ ಬಹುಮಾನ
ರಿಷಿ ಮತ್ತು ಋಷಿಕರಾಜ್ ಅಭಿನಯದ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಈ ವಾರ ತೆರೆಗೆ ಬರುತ್ತಿರುವ ಮತ್ತೊಂದು ಸಿನಿಮಾ. ರತ್ನತೀರ್ಥ ಕಥೆ, ಚಿತ್ರಕಥೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜನನಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಬಿ.ಜೆ. ಚಿತ್ರವನ್ನು ನಿರ್ಮಿಸಿದ್ದಾರೆ.
ಪಾರು ಪಾರ್ವತಿ
ರೋಹಿತ್ ಕೀರ್ತಿ ನಿರ್ದೇಶನದ ಸಿನಿಮಾ 'ಪಾರು ಪಾರ್ವತಿ'. ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ಈ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಕಾರ್ ಒಂದು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟ್ರಾವೆಲ್, ಅಡ್ವೆಂಚರ್ಸ್ ಡ್ರಾಮಾ ಸಿನಿಮಾ ಇದು. 3 ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಸಾಗಲಿದೆ.
ಈ 5 ಸಿನಿಮಾಗಳ ಜೊತೆಗೆ 'ಹೈನ', 'ರಾವುತ' ಹಾಗೂ 'ಕಾಡುಮಳೆ' ಎಂಬ 3 ಹೊಸಬರ ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿವೆ. ಆದರೆ ಹೆಚ್ಚು ಪ್ರಚಾರ ಇಲ್ಲದೇ ಸಿನಿಮಾಗಳು ಸೊರಗಿವೆ.


Click it and Unblock the Notifications











