ಒಂದಲ್ಲ ಎರಡಲ್ಲ ಒಟ್ಟು 7 ಕನ್ನಡ ಚಿತ್ರಗಳು ಈ ವಾರ ರಿಲೀಸ್
'ಕಾಂತಾರ-1' ಆರ್ಭಟ ಕಮ್ಮಿ ಆಯ್ತು. ಓಟಿಟಿಗೂ ಬಂದಾಯ್ತು. ಡಿಸೆಂಬರ್‌ನಲ್ಲಿ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಆದರೆ ರಾಜ್ಯೋತ್ಸವ ಮಾಸವನ್ನು ಯಾರೂ ಬಳಸಿಕೊಳ್ಳುತ್ತಿಲ್ಲ. ದೊಡ್ಡ ಸಿನಿಮಾಗಳು ಈ ತಿಂಗಳು ಬರ್ತಿಲ್ಲ.
ಕಳೆದ ವಾರ ಕೂಡ ಸಣ್ಣ ಸಿನಿಮಾಗಳೇ ಪ್ರೇಕ್ಷಕರ ಮುಂದೆ ಬಂದಿತ್ತು. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆ ಆಗ್ತಿದೆ. ವಿಭಿನ್ನ ಜಾನರ್ ಚಿತ್ರಗಳು ಪಟ್ಟಿಯಲ್ಲಿದೆ. ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡಿ ಭರವಸೆ ಮೂಡಿಸಿವೆ. ಒಂದಲ್ಲ ಎರಡಲ್ಲ 7 ಸಿನಿಮಾಗಳು ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದೆ.

1. ಗತವೈಭವ
ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾ ಕೊನೆಗೂ ಈ ವಾರ ಬಿಡುಗಡೆ ಆಗ್ತಿದೆ. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂ ತಡವಾಗಿತ್ತು. ದುಷ್ಯಂತ್ ಜೊತೆ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಕ್ಷಸ, ವಾಸ್ಕೋಡಗಾಮನ ಸಹಚರ, ಕಂಬಳದ ವೀರ ಹೀಗೆ ಭಿನ್ನ ವಿಭಿನ್ನ ಅವತಾರದಲ್ಲಿ ದುಷ್ಯಂತ್ ಮಿಂಚಿದ್ದಾರೆ. ಎಲ್ಲಾ ಕಡೆ ಆಶಿಕಾ ಆತನಿಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಯಕ ಗ್ರಾಫಿಕ್ ಡಿಸೈನರ್ ಆಗಿದ್ದು. ಆತನ ಕಲ್ಪನೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ.
2. ಲವ್ ಓಟಿಪಿ
ಅನೀಶ್ ತೇಜೇಶ್ವರ್ ನಿರ್ದೇಶಿಸಿ ನಟಿಸಿರುವ ರೊಮ್ಯಾಂಟಿಕ್ ಸಿನಿಮಾ 'ಲವ್ ಓಟಿಪಿ' ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. ಎಂ. ವಿಜಯ್ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಅನೀಶ್ ತೇಜೇಶ್ವರ್ ಜೊತೆ ಪ್ರಮೋದಿನಿ, ಸ್ವರೂಪಿಣಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಕ್ರಿಕೆಟ್ ಹೀಗೆ ಸಾಕಷ್ಟು ವಿಚಾರಗಳು ಈ ಚಿತ್ರದಲ್ಲಿದೆ.
ಇಬ್ಬಿಬ್ಬರು ಹುಡುಗಿಯರನ್ನು ಒಮ್ಮೆಲೆ ಪ್ರೀತಿಸಿ ಸಂಕಷ್ಟಕ್ಕೆ ಸಿಲುಕುವ ನಾಯಕ ಕಥೆ ಚಿತ್ರದಲ್ಲಿದೆ. ಇದೇ ಕಾರಣಕ್ಕೆ ತಾನು ದೊಡ್ಡ ಕ್ರಿಕೆಟರ್ ಆಗಬೇಕು ಎನ್ನುವ ಕನಸಿಗೂ ಅಡ್ಡಿಯಾಗುತ್ತದೆ. ಅದನ್ನೆಲ್ಲಾ ಮೀರಿ ಹೇಗೆ ನಾಯಕ ಅಕ್ಷಯ್ ಗೆಲ್ತಾನೆ ಅನ್ನೋದು ಸಿನಿಮಾ ಕಥೆ.
3. ಉಡಾಳ
ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ನಿರ್ಮಾಣದ ಸಿನಿಮಾ 'ಉಡಾಳ'. ಇದು ಪಕ್ಕಾ ಜವಾರಿ ಸಿನಿಮಾ. ಈ ಹಿಂದೆ 'ಪದವಿಪೂರ್ವ' ಚಿತ್ರದಲ್ಲಿ ನಟಿಸಿದ್ದ ಪೃಥ್ವಿ ಶಾಮನೂರು ನಟನೆಯಯ ಎರಡನೇ ಸಿನಿಮಾ. ನವೀನ್ ಶಂಕರ್ ಹಾಗೂ ನಿಶ್ವಿಕಾ ನಾಯ್ಡು ಇತ್ತೀಚೆಗೆ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದರು. ಬಹುತೇಕ ಉತ್ತರಕರ್ನಾಟಕದಲ್ಲಿ ನಡೆಯುವ ಕಥೆ ಇದಾಗಿದ್ದು ಅಲ್ಲಿನ ಭಾಷೆಯನ್ನೇ ಬಳಸಿಕೊಳ್ಳಲಾಗಿದೆ. ಅಮೋಲ್ ಪಾಟೀಲ್ ಆಕ್ಷನ್ ಕಟ್ ಹೇಳಿದ್ದಾರೆ.
ಪೃಥ್ವಿಗೆ ಹೃತಿಕಾ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಬಾಲ ರಾಜವಾಡಿ, ಮಾಳು ನಿಪ್ನಾಳ, ಹರೀಶ್ ಹಿರಿಯೂರು, ಸುಮಿತ್ ಸಂಕೋಜಿ, ವಾದಿರಾಜ್ ಬಬ್ಲಾಡಿ, ಪ್ರವೀಣ್ ಗಸ್ತಿ, ಗೋವಿಂದೇಗೌಡ, ದಯಾನಂದ ಬೀಳಗಿ ಚಿತ್ರದ ತಾರಾಗಣದಲ್ಲಿದ್ದಾರೆ. ಚೇತನ್ ದ್ಯಾವಿ ಸಂಗೀತ ಚಿತ್ರಕ್ಕಿದ್ದು ಎಲ್ಲಾ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.
ಈ ಮೂರು ಸಿನಿಮಾಗಳ ಜೊತೆಗೆ ಹೊಸಬರ ಇನ್ನು 4 ಚಿತ್ರಗಳು ಈ ವಾರ ತೆರೆಗೆ ಬರ್ತಿವೆ. 'ಕೈಟ್ ಬ್ರದರ್ಸ್' ಎಂಬ ಮಕ್ಕಳ ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. 'ಪ್ರೇಮಂ ಮಧುರಂ' ಎನ್ನುವ ಮತ್ತೊಂದು ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. 'ಇನಿಯನ ಆತ್ಮ' ಎಂಬ ಹಾರರ್ ಸಿನಿಮಾ ಕೂಡ ತೆರೆಗಪ್ಪಳಿಸಲು ಸಜ್ಜಾಗಿದೆ. ಬಹಳ ಹಿಂದೆ ಶುರುವಾಗಿದ್ದ 'ಹಿಕೋರ' ಚಿತ್ರಕ್ಕೂ ಬಿಡುಗಡೆ ಭಾಗ್ಯ ಸಿಗಲಿದೆ.


Click it and Unblock the Notifications











