"ಕಾಲ ಎಲ್ಲದ್ದಕ್ಕೂ ಉತ್ತರಿಸುತ್ತೆ": ಪರಪ್ಪನ ಅಗ್ರಹಾರ ಜೈಲಿನಿಂದ ಮತ್ತೆ ದರ್ಶನ್ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಗ್ತಿದೆ. ಅಭಿಮಾನಿಗಳು ಸಿನಿಮಾವನ್ನು ದೊಡ್ಡದಾಗಿ ಸ್ವಾಗತಿಸಿ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಜೈಲಿನಲ್ಲಿ ಸಹ ಕೈದಿಗಳ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಸದ್ಯಕ್ಕೆ ದರ್ಶನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗುವ ಸುಳಿವು ಸಿಗುತ್ತಿಲ್ಲ. ಪ್ರಕರಣದಲ್ಲಿ ಇನ್ನಷ್ಟೆ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಇದೆಲ್ಲದರ ನಡುವೆ ದರ್ಶನ್ ಇದೀಗ ತಮ್ಮ ಅಭಿಮಾನಿಗಳಿಗೆ ಜೈಲಿನಿಂದ ಸಂದೇಶ ರವಾನಿಸಿದ್ದಾರೆ. ದರ್ಶನ್ ಹೇಳಿದ್ದನ್ನು ಪತ್ನಿ ವಿಜಯಲಕ್ಷ್ಮಿ ಯಥಾವತ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

"ನನ್ನ ಪ್ರೀತಿಯ ಸೆಲೆಬ್ರಿಟಿಗಳೇ, ಈ ಸಂದೇಶ ನನ್ನ ಹೃದಯದಿಂದ ನೇರವಾಗಿ ಬರುತ್ತದೆ. ವಿಜಿ ನಿಮ್ಮೆಲ್ಲರಿಗೂ ತಲುಪಿಸುತ್ತಿದ್ದಾರೆ. ವಿಜಿ ನಿಮ್ಮೆಲ್ಲವರ ಬಗ್ಗೆ ಬಗ್ಗೆ ನನಗೆ ಪ್ರತಿ ಬಾರಿಯೂ ಮಾಹಿತಿ ನೀಡುತ್ತಿದ್ದಾರೆ. ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ದಣಿವರಿಯದ ಬೆಂಬಲ, ರಾಜ್ಯಾದ್ಯಂತ ನಿಮ್ಮ ಪ್ರಚಾರ. ದೂರ ಇದ್ದರೂ ಪ್ರತಿ ಕ್ಷಣವೂ ನಿಮ್ಮ ಉಪಸ್ಥಿತಿಯನ್ನು ಅನುಭವಿಸುತ್ತೇನೆ" ಎಂದು ದರ್ಶನ್ ಮಾತು ಆರಂಭಿಸಿದ್ದಾರೆ.
ಯಾರು ಏನೇ ಹೇಳಿದರೂ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಕಿವಿಮಾತು ಹೇಳಿದ್ದಾರೆ. "ದಯವಿಟ್ಟು ಜನ ಏನೇನೋ ಹೇಳ್ತಾರೆ ಅಂತ ಚಿಂತಿಸಬೇಡಿ. ಯಾವುದೇ ವದಂತಿ ಅಥವಾ ಯಾವುದೇ ನಕಾರಾತ್ಮಕತೆ ಹೇಳಿಕೆಗಳಿಂದ ನಿಮ್ಮ ಹೃದಯ ಅಲುಗಾಡಿಸಲು ಬಿಡಬೇಡಿ. ನೀವು ನನ್ನ ಬಲ, ನೀವು ನನ್ನ ಕುಟುಂಬ. ಇಂದು ನಾನು ನಿಂತಿರುವುದು ನಿಮ್ಮೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಯ ಕಾರಣ. ನನ್ನ ಜೀವನದ ಈ ಹಂತದಲ್ಲಿ, ನನ್ನ ದೊಡ್ಡ ಶಕ್ತಿಯೇ ನೀವು. ಮತ್ತು ನೀವು ಚಿಂತಿಸುವದನ್ನು ಕಡಿಮೆ ಮಾಡಿ, ಆ ಪ್ರೀತಿ ಮತ್ತು ಶಕ್ತಿಯನ್ನು ನಮ್ಮ ಚಿತ್ರ ಡೆವಿಲ್ ಕಡೆಗೆ ಕೇಂದ್ರೀಕರಿಸಬೇಕು ಅಷ್ಟೇ ನನ್ನ ಬಯಕೆ" ಎಂದಿದ್ದಾರೆ.
ನಾನು ನಾನಾಗಿರುವುದಕ್ಕೆ ನೀವೇ ಕಾರಣ. ನೀವು 'ಡೆವಿಲ್' ಚಿತ್ರಕ್ಕೂ ಅದೇ ಪ್ರೀತಿಯನ್ನು ನೀಡುತ್ತೀರಿ ಎಂದು ನನಗೆ ಗೊತ್ತು. ನನ್ನ ಅನುಪಸ್ಥಿತಿಯಲ್ಲಿಯೂ ಸಹ, ನೀವು ಪ್ರತಿ ಪ್ರಶ್ನೆಗೆ, ಪ್ರತಿ ಸಂದೇಹಕ್ಕೆ ಪದಗಳಿಂದಲ್ಲ, ಈ ಚಿತ್ರದ ಗೆಲುವಿನಿಂದ ಉತ್ತರಿಸಬೇಕೆಂದು ನಾನು ಬಯಸುತ್ತೇನೆ. ಅದು ನಿಮ್ಮ ಧ್ವನಿಯಾಗಿರುತ್ತದೆ. ಅದು ನಮ್ಮ ಹೇಳಿಕೆಯಾಗಿರುತ್ತದೆ. ನಿಮ್ಮ ಪ್ರಚಾರ, ಸಮರ್ಪಣೆಭಾವ, ನಿಮ್ಮ ಒಗ್ಗಟ್ಟಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಎನಿಸುತ್ತದೆ. ನಾನು ನಿಮ್ಮೆಲ್ಲರನ್ನೂ ಮತ್ತೆ ಭೇಟಿಯಾಗುವ ದಿನಕ್ಕಾಗಿ ಕಾಯುತ್ತಿದ್ದೇನೆ" ಎಂದು ದರ್ಶನ್ ತಿಳಿಸಿದ್ದಾರೆ.
ಕಾಲ ಸತ್ಯವನ್ನು ಮಾತನಾಡುವ ತನ್ನದೇ ಆದ ಮಾರ್ಗವನ್ನು ಹೊಂದಿದೆ ಅನ್ನೋದು ನೆನಪಿರಲಿ. ಕಾಲ ಎಲ್ಲದಕ್ಕೂ ಉತ್ತರಿಸುತ್ತದೆ. ನಿಮ್ಮ ತಲೆಯನ್ನು ಎತ್ತಿಕೊಂಡು, ಹೃದಯವನ್ನು ದೃಢವಾಗಿಟ್ಟುಕೊಂಡು, ನಿಮ್ಮ ಪ್ರೀತಿಯನ್ನು ಅಲುಗಾಡದಂತೆ ಇಟ್ಟುಕೊಳ್ಳಿ ಎಂದು ದರ್ಶನ್ ಹೇಳಿರುವುದನ್ನು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.
ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಇದೇ ಗುರುವಾರ(ಡಿಸೆಂಬರ್ 11) ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಮೊದಲ ದಿನವೇ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 13 ವರ್ಷಗಳ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು. ಮತ್ತೆ ಅದೇ ಈಗ ಪುನರಾವರ್ತನೆ ಆಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











