ಕೂಲಿಯ 'ಕಲ್ಯಾಣಿ'ಗೆ ಮನ ಸೋತ ಪ್ರೇಕ್ಷಕರು, ರಚಿತಾ ರಾಮ್ ಮುಖ ಪಳಪಳ ; ಹೇಳಿದ್ದೇನು ಡಿಂಪಲ್ ಕ್ವೀನ್?
ಕಿರುತೆರೆಯಲ್ಲಿ ಮೆಲ್ಲನೆ ಸದ್ದು ಮಾಡುತ್ತಲೇ ಏಕಾಏಕಿ ದರ್ಶನ್‌ಗೆ ನಾಯಕಿಯಾಗುವ ಸುವರ್ಣ ಅವಕಾಶ ಪಡೆದು ಎಲ್ಲರನ್ನು ಅಚ್ಚರಿಗೆ ದೂಡಿದವರು ರಚಿತಾ ರಾಮ್. ''ಬುಲ್ ಬುಲ್'' ಮೂಲಕ ಕನ್ನಡ ಕಲಾ ರಸಿಕರ ಹೃದಯ ಗೆದ್ದು ಆ ನಂತರ ''ಡಿಂಪಲ್ ಕ್ವೀನ್'' ಎಂದೇ ಹೆಸರು ಮಾಡಿದ ರಚಿತಾ ಇಲ್ಲಿಯವರೆಗೆ ಹತ್ತು ಹಲವು ಚಿತ್ರಗಳನ್ನು ಮಾಡಿದ್ದಾರೆ. ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ಹಲವು ಸೂಪರ್ ಸ್ಟಾರ್‌ಗಳ ಜೊತೆ ತೆರೆಯನ್ನು ಕೂಡ ಹಂಚಿಕೊಂಡಿದ್ದಾರೆ.
ಆದರೆ.. ಇಲ್ಲಿಯವರೆಗೆ ರಚಿತಾ ರಾಮ್ ಪರಭಾಷೆಯ ಪಾಲಾಗಿರಲಿಲ್ಲ. ತೆಲುಗಿನಲ್ಲಿ ''ಸೂಪರ್ ಮಚ್ಚಿ'' ಎಂಬ ಚಿತ್ರವನ್ನು ರಚಿತಾ ಮಾಡಿದ್ದರಾದರೂ ಹೋದಷ್ಟೇ ಸ್ಪೀಡ್‌ನಲ್ಲಿ ಮರಳಿ ಮನೆಗೆ ಬಂದರು. ಆದರೆ ಈಗ ರಚಿತಾ ರಾಮ್ ಅವರಿಗೆ ಪರಭಾಷೆಯಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆಯುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿವೆ. ಇಂತಹದ್ದೊಂದು ಪವಾಡಕ್ಕೆ ''ಕೂಲಿ'' ಕಾರಣವಾಗಿದೆ.

ಹೌದು, ''ಕೂಲಿ''ಯಲ್ಲಿ ರಚಿತಾ ರಾಮ್ ಇದ್ದಾರೆ ಎನ್ನುವ ಸುದ್ದಿ ಕಳೆದ ವರ್ಷದ ಆಗಸ್ಟ್ ನಲ್ಲಿಯೇ ಸದ್ದು ಮಾಡಿತ್ತು. ಆದರೆ ಈ ವಿಚಾರದ ಕುರಿತು ರಚಿತಾ ರಾಮ್ ಅಪ್ಪಿ ತಪ್ಪಿ ಕೂಡ ಎಲ್ಲಿಯೂ ಬಾಯಿ ಬಿಡಲಿಲ್ಲ. ಚಿತ್ರದ ಭಾಗವಾದರೂ ಕೂಡ ತಮಗಾದ ಖುಷಿಯನ್ನು ಎಲ್ಲಿಯೂ ತೋರಿಸಿಕೊಂಡಿರಲಿಲ್ಲ.
ಆದರೆ ಈಗ ಈ ಖುಷಿ ಇನ್ನೂ ಹೆಚ್ಚಾಗಿದೆ. ಯಾಕೆಂದರೆ ರಚಿತಾ ರಾಮ್ ಅಭಿನಯಕ್ಕೆ ಅಖಂಡ ದಕ್ಷಿಣ ಭಾರತ ಮನ ಸೋತಿದೆ. ಸೋಶೀಯಲ್ ಮೀಡಿಯಾ ತೆಗೆದರೆ ಸಾಕು ಅಲ್ಲಿ ರಚಿತಾ ರಾಮ್ ಅವರ ಗುಣಗಾನವನ್ನೇ ಎಲ್ಲರು ಮಾಡುತ್ತಿದ್ದಾರೆ.
''ಕಲ್ಯಾಣಿ'' ಪಾತ್ರದಲ್ಲಿ ಅದೆಷ್ಟು ಸೊಗಸಾಗಿ ಅಭಿನಯಿಸಿದ್ದೀರಾ ಮೇಡಂ ಎಂದೆಲ್ಲಾ ಹಾಡಿ ಹೊಗಳುತ್ತಿದ್ದಾರೆ. ರಚಿತಾ ರಾಮ್ ಅವರ ವೃತ್ತಿ ಬದುಕಿನ ಅತ್ಯಂತ ಅತ್ಯುತ್ತಮವಾದ ಪಾತ್ರ ಇದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.''ಕೂಲಿ'' ಚಿತ್ರ ನೋಡಿದ ಬಹುತೇಕ ಪ್ರೇಕ್ಷಕರನ್ನು ರಚಿತಾ ರಾಮ್ ಆವರಿಸಿಕೊಂಡಿದ್ದಾರೆ.
ಪ್ರೇಕ್ಷಕರ ಈ ಪ್ರೀತಿ ಮತ್ತು ಮಾತುಗಳನ್ನು ಕೇಳಿ ರಚಿತಾ ರಾಮ್ ಸಹಜವಾಗಿಯೇ ಪುಳಕಿತರಾಗಿದ್ದಾರೆ. ತಮ್ಮ ಪಾತ್ರಕ್ಕೆ ಇಷ್ಟೊಂದು ಪ್ರತಿಕ್ರಿಯೆಗಳು ಬರುತ್ತವೆ ಎನ್ನುವ ಚಿಕ್ಕ ಅಂದಾಜು ಕೂಡ ರಚಿತಾ ರಾಮ್ ಅವರಿಗೆ ಇರಲಿಲ್ಲವೇನೋ ? ಹೀಗಾಗಿಯೇ ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ರಚಿತಾ ರಾಮ್ ರಜಿನಿಕಾಂತ್ ಅವರನ್ನು ಅಪ್ಪಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ''ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಸರಿಯಾದ ಸಮಯ ಬಂದಾಗ ಹಂಚಿಕೊಳ್ಳಲು ಕಾಯುತ್ತಿದ್ದೆ ರಜಿನಿ ಸರ್, ಲವ್ ಯೂ'' ಎಂದು ಬರೆದುಕೊಂಡಿದ್ದಾರೆ.
ರಚಿತಾ ರಾಮ್ ಹಂಚಿಕೊಂಡ ಈ ಫೋಟೊಗೆ ಕೂಡ ಹಲವರು ಕಾಮೆಂಟ್ ಮಾಡಿದ್ದಾರೆ. ನಿಜಕ್ಕೂ ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಾ ಎಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. ''ಎಕ್ಸ್''ನಲ್ಲಿ ಕೂಡ ಈ ಫೋಟೊವನ್ನು ಹಲವಾರು ಜನ ಶೇರ್ ಮಾಡುತ್ತಿದ್ದಾರೆ.
ಅಂದ್ಹಾಗೇ ರಚಿತಾ ರಾಮ್ ನಿರ್ವಹಿಸಿರುವ ''ಕಲ್ಯಾಣಿ'' ಪಾತ್ರವನ್ನು ಬೆಳ್ಳಿ ತೆರೆಯಲ್ಲಿ ನೋಡುವಾಗ ಮೊದ ಮೊದಲು ಕರುಣೆ ಬರುತ್ತೆ. ಛೇ ಪಾಪಾ ಎಂದು ಅನಿಸುತ್ತೆ. ಆದರೆ ಆ ನಂತರ ಆ ಪಾತ್ರ ಎತ್ತುವ ರೌದ್ರಾವತಾರ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತೆ. ಈ ಪಾತ್ರ ಪರಿವರ್ತನೆಯ ಬಗ್ಗೆಯೇ ಎಲ್ಲರೂ ಸದ್ಯ ಚರ್ಚೆ ಮಾಡುತ್ತಿದ್ದಾರೆ. ರಚಿತಾ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ರಚಿತಾ ರಾಮ್ ಅಭಿನಯಕ್ಕೆ ಎಲ್ಲರು ಫಿದಾ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ರಚಿತಾ ರಾಮ್‌ಗೆ ಪರಭಾಷೆಯಲ್ಲಿ ಯಾವ ರೀತಿಯ ಅವಕಾಶಗಳು ಬರುತ್ತಾವೆ ? ರಚಿತಾ ಯಾವ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











