'ಟಾಕ್ಸಿಕ್' ಚಿತ್ರದ ಮೂಲಕ ಯಶ್ 'KGF- 1' ಲೆಕ್ಕಾಚಾರ; ಮತ್ತದೇ ಮ್ಯಾಜಿಕ್ ರಿಪೀಟ್ ಆಗುತ್ತಾ?
ಮತ್ತೆ ಪೋಸ್ಟ್‌ಪೋನಾ? ಅಯ್ಯೋ ರಾಮ.. ಇನ್ನು ಎಷ್ಟು ದಿನ ಕಾಯಿಸ್ತೀರಾ? ಪ್ರಪಂಚದಲ್ಲಿ ಯಾರೂ ಮಾಡ್ದೆ ಇರೋ ಸಿನಿಮಾ ಮಾಡ್ತಿದ್ದೀಯಾ ಗುರು? ಒಂದು ಸಿನಿಮಾ ತೆರೆಗೆ ತರೋಕೆ 4 ವರ್ಷ ಬೇಕಾ? ಅದೇನು ಸಿನಿಮಾ ಮಾಡ್ತಿದ್ದೀರೋ ಗೊತ್ತಿಲ್ಲ. ಈ ವರ್ಷ ಬೇಡ.. 2030ರಲ್ಲಿ ಬಿಡುಗಡೆ ಮಾಡಿ.. 'ಟಾಕ್ಸಿಕ್' ಸಿನಿಮಾ ರಿಲೀಸ್ ಮತ್ತೆ ಪೋಸ್ಟ್‌ಪೋನ್ ಎನ್ನುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬರ್ತಿರೋ ಕಾಮೆಂಟ್ ಇದು. ಸ್ವತಃ ಯಶ್ ಅಭಿಮಾನಿಗಳಿಗೂ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ರೋಶಭರಿತರಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗೆ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿರುವ ಕೆಲ ಟ್ಟಿಟ್ಟರ್ ಖಾತೆಗಳನ್ನು ಯಶ್ ಬ್ಲಾಕ್ ಕೂಡ ಮಾಡುವಂತಾಗಿದೆ. ಕಳೆದ ವರ್ಷ ಏಪ್ರಿಲ್ 10ಕ್ಕೆ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದ ಸಿನಿಮಾ ಈ ವರ್ಷ ಮಾರ್ಚ್ 19ಕ್ಕೆ ತೆರೆಗೆ ಬರುತ್ತೆ ಎಂದಾಗಲೇ ಕೆಲವರು ತಾಳ್ಮೆ ಕಳೆದುಕೊಂಡಿದ್ದರು. ಇನ್ನು ಎರಡು ತಿಂಗಳು ತಡವಾಗುತ್ತೆ, ಜೂನ್ 4ರಂದು ಸಿನಿಮಾ ಬಿಡುಗಡೆ ಅಂದಾಗ ಯಶ್ ಅಭಿಮಾನಿಗಳು ತುಟಿ ಕಚ್ಚಿಕೊಂಡು ಸುಮ್ಮನಾಗಿದ್ದರು. ನೆಚ್ಚಿನ ನಟನ ಬೆಂಬಲಕ್ಕೆ ನಿಂತರು. ಮತ್ತೆ ಪೋಸ್ಟ್‌ಪೋನ್ ಸುದ್ದಿ ಬಂದಿದೆ. ಹೊಸ ಡೇಟ್ ಕೂಡ ಗೊತ್ತಿಲ್ಲ. ಈಗಲೂ ಅಭಿಮಾನಿಗಳಿಗೆ ಯಶ್ ಮೇಲೆ ನಂಬಿಕೆ ಇದೆ.

'ಟಾಕ್ಸಿಕ್' ಸಿನಿಮಾ ಮೂಲಕ ಭಾರತ ಹಾಗೂ ಪಾಶ್ಚಿಮಾತ್ಯ ಚಿತ್ರ ಪ್ರಪಂಚಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡ್ತಿದ್ದಾರೆ ಯಶ್.. ಹಾಲಿವುಡ್ ಚಿತ್ರಗಳು ಭಾರತದಲ್ಲಿ ದೊಡ್ಡದಾಗಿ ಬಿಡುಗಡೆ ಆಗುವಂತೆ ನಮ್ಮ ಸಿನಿಮಾಗಳು ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡಬೇಕು ಎನ್ನುವುದು ಯಶ್ ಕನಸು. ಕನ್ನಡದ ಸಿನಿಮಾಗಳನ್ನು ಪರಭಾಷಿಕರು ಒಪ್ಪಿಕೊಳ್ಳಬೇಕು ಎಂದ ಕನಸು ಕಂಡು 'KGF' ಸರಣಿ ಚಿತ್ರವನ್ನು ತೆರೆಗೆ ತಂದಿದ್ದರು. ರಾಕಿ ಕಥೆಯನ್ನು ಕನ್ನಡದಲ್ಲಿ ಹೇಳಿದ್ರೆ ಸಾಕು ಎಂದು ಪ್ರಶಾಂತ್ ನೀಲ್ ಭಾವಿಸಿದ್ದರು. ಆದರೆ ವಿಜಯ್ ಕಿರಗಂದೂರ್ ಜೊತೆ ಸೇರಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಯಶ್..
'KGF' ಸರಣಿ ಸಿನಿಮಾ ಮಾಡಿದ ಮ್ಯಾಜಿಕ್ ಗೊತ್ತೇಯಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡಿತ್ತು. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ವಾಟ್ ನೆಕ್ಸ್ಟ್ ಎನ್ನುತ್ತಿದ್ದವರಿಗೆ 'ಟಾಕ್ಸಿಕ್' ಎನ್ನುವ ಉತ್ತರ ಕೊಟ್ಟಿದ್ದರು. ಸಿನಿಮಾ ಮಾಡ್ತಾ ಮಾಡ್ತಾ ಅದು ಯಾವ ರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ನೋಡ್ತಾ ನೋಡ್ತಾ ಮುಂದೆ ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಯಶ್ ನಿರ್ಧರಿಸುತ್ತಾರೆ. 'KGF' ಚಾಪ್ಟರ್-1 ಸಿನಿಮಾ ಸಮಯದಲ್ಲಿ ಕೂಡ ಹೀಗೆ ಆಗಿತ್ತು.
10 ವರ್ಷಗಳ ಹಿಂದೆ 'KGF' ಕನಸು ಶುರುವಾಗಿತ್ತು. ಸಿನಿಮಾ ಬಜೆಟ್, ನೂರಾರು ದಿನಗಳ ಚಿತ್ರೀಕರಣದ ವಿಚಾರ ಗೊತ್ತಾದಾಗ ಸ್ವತಃ ಚಿತ್ರರಂಗದಲ್ಲೇ ಕೆಲವರು ಮೂದಲಿಸಿದ್ದರು. ಅರೇ, ಅದೇನ್ ಸಿನ್ಮಾ ಮಾಡ್ತಿದ್ದಾರಪ್ಪಾ.. ಇಷ್ಟು ದಿನ ಯಾಕೆ? ಇಷ್ಟು ಬಜೆಟ್ ಯಾಕೆ ಎಂದಿದ್ದರು. ಚಾಪ್ಟರ್-1 ಸಿನಿಮಾ ಬಿಡುಗಡೆ ಕೂಡ ತಡವಾಗಿತ್ತು. ವರ್ಷಕ್ಕೆ ಒಂದು ಎರಡು ಸಿನಿಮಾ ಕೊಡ್ತಿದ್ದ ಯಶ್ 'KGF'-1 ಚಿತ್ರಕ್ಕಾಗಿ ಎರಡು ವರ್ಷ ತೆಗೆದುಕೊಂಡಿದ್ದರು.
ಇದು ದೊಡ್ಡ ಸಿನಿಮಾ ಆಗುತ್ತದೆ ಎನ್ನುವ ಲೆಕ್ಕಾಚಾರ ಚಿತ್ರತಂಡಕ್ಕೆ ಇತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿ ಚಾಪ್ಟರ್-1 ನೋಡಿದಾಗ್ಲೆ ಅದರ ತಾಕತ್ತು ಏನು ಎನ್ನುವುದು ತಂಡದ ಅರಿವಿಗೆ ಬಂದಿತ್ತು. ಅಷ್ಟರಲ್ಲಾಗಲೇ ಗಡ್ಡಕ್ಕೆ ಕತ್ತರಿ ಹಾಕಿ ಯಶ್ 'ಮೈ ನೇಮ್ ಈಸ್ ಕಿರಾತಕ' ರೀತಿಯ ಸಣ್ಣ ಸಿನಿಮಾ ಮಾಡಲು ಪ್ರಾರಂಭಿಸಿಬಿಟ್ಟಿದ್ದರು. ಆದರೆ 'KGF' ಚಿತ್ರದ ಶೋ ರೀಲ್ ನೋಡಿ ಅಕ್ಕಪಕ್ಕದ ಫಿಲ್ಮ್ ಮೇಕರ್ಸ್ ದಂಗಾಗಿದ್ದರು. ಇದು ಹಾಲಿವುಡ್ ರೇಂಜ್ ಸಿನಿಮಾ ಅಂತೆಲ್ಲಾ ಮಾತನಾಡಲು ಶುರು ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಪ್ರಮೋಷನ್, ಮಾರ್ಕೆಟಿಂಗ್ ಮಾಡಿ ರಿಲೀಸ್ ಮಾಡಿದ್ರೆ ದೊಡ್ಡದಾಗಿ ಗೆಲ್ಲುತ್ತದೆ ಎನ್ನುವ ಸುಳಿವು ಸಿಕ್ಕಿತ್ತು. ಆ ಅವಕಾಶವನ್ನು ಯಶ್ ಬಳಸಿಕೊಂಡು ಗೆದ್ದಿದ್ದು ಗೊತ್ತೇಯಿದೆ.
ಸದ್ಯ 'ಟಾಕ್ಸಿಕ್' ಚಿತ್ರದ ವಿಚಾರದಲ್ಲಿ ಕೂಡ ಇಂತಹ ಲಕ್ಷಣಗಳು ಗೋಚರಿಸುತ್ತಿದೆ. ಅದೇ ಕಾರಣಕ್ಕೆ ಮತ್ತಷ್ಟು ತಡವಾದರೂ ಪರವಾಗಿಲ್ಲ, ಅಂದುಕೊಂಡ ರೀತಿಯಲ್ಲಿ ದೊಡ್ಡದಾಗಿಯೇ ಸಿನಿಮಾ ತೆರೆಗೆ ತರ್ತೀನಿ ಎಂದು ಯಶ್ ಹಠಕ್ಕೆ ಬಿದ್ದಿದ್ದಾರೆ. ಇತ್ತೀಚೆಗೆ ಲಾಸ್‌ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗವಹಿಸಿದ್ದರು. ಅಲ್ಲಿ 'ಟಾಕ್ಸಿಕ್' ಚಿತ್ರದ ಬಗ್ಗೆ ಚರ್ಚೆ ಆಗಿತ್ತು. 9 ನಿಮಿಷಗಳ ದೃಶ್ಯಗಳನ್ನು ವಿಶೇಷವಾಗಿ ಪ್ರದರ್ಶನ ಮಾಡಲಾಗಿತ್ತು. ಅದಕ್ಕೆ ಅಭೂತಪೂರ್ಣ ಬೆಂಬಲ ಸಿಕ್ಕಿತ್ತು. ಅದನ್ನೆಲ್ಲಾ ಮನಗಂಡು ಸಿನಿಮಾ ಬಿಡುಗಡೆ ಮುಂದೂಡಲು ಯಶ್ ನಿರ್ಧರಿಸಿದ್ದಾರೆ.
'ಟಾಕ್ಸಿಕ್' ಚಿತ್ರಕ್ಕೆ ವಿಶ್ವಮಟ್ಟದಲ್ಲಿ ದೊಡ್ಡ ವೇದಿಕೆ ಬೇಕು ಎಂಬ ಭರವಸೆ ಹೆಚ್ಚಿಸಿದೆ ಎಂದು ಯಶ್ ಹೇಳಿದ್ದಾರೆ. "ಭಾರತೀಯ ಸಿನಿಮಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊತ್ತಲ್ಲಿ, ಈ ಚಿತ್ರವನ್ನು ಅದ್ಭುತವಾಗಿ ಪ್ರೇಕ್ಷಕರ ಮುಂದೆ ತರಬೇಕಾಗಿರುವುದು ನಮ್ಮ ಜವಾಬ್ದಾರಿ. ಹೀಗಾಗಿ ರಿಲೀಸ್ ಡೇಟ್ ಬದಲಾಗಿದೆ. ತಾಳ್ಮೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಹೆಮ್ಮೆ ಪಡುವಂತಹ ಚಿತ್ರವನ್ನು ನಾವು ಕೊಡ್ತೀವಿ" ಎಂದು ಯಶ್ ಹೇಳಿರುವುದರ ಹಿಂದಿನ ಕಾರಣ ಇದೇ ಆಗಿದೆ.
8 ವರ್ಷಗಳ ಹಿಂದೆ 'KGF' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಕಬ್ಜ ಮಾಡಿದಂತೆ 'ಟಾಕ್ಸಿಕ್' ಮೂಲಕ ಪ್ಯಾನ್ ವರ್ಲ್ಡ್ ಬಾಕ್ಸಾಫೀಸ್ ವಶಪಡಿಸಿಕೊಳ್ಳಲು ಯಶ್ ಮುಂದಾಗಿದ್ದಾರೆ. ಆಗಸ್ಟ್ 14ರಂದು ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗ್ತಿದೆ. ಮುಂದಿನ ಅಪ್‌ಡೇಟ್‌ಗಾಗಿ ಕಾದು ನೋಡಬೇಕಿದೆ.


Click it and Unblock the Notifications